ಬಿಹಾರ ವಿಧಾನಸಭಾ ಚುನಾವಣೆ: ಬೆಂಗಳೂರಿಗೆ ಮರಳುವವರಿಗೆ ವಿಶೇಷ ರೈಲುಗಳ ಘೋಷಣೆ: ಸಮಯ, ದಿನಾಂಕಗಳ ವಿವರ
Bihar Elections 2025 Special Trains: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ಸಂದರ್ಭಗಳಲ್ಲಿ ವಿಶೇಷ ರೈಲುಗಳನ್ನು ಬಿಡುತ್ತಲೇ ಬಂದಿದೆ. ಹಾಗೆಯೇ ಇದೀಗ ಬಿಹಾರ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರಿನಿಂದ ಮತದಾನ ಮಾಡಲು ತಮ್ಮ ಊರುಗಳಿಗೆ ತರಳಿದವರಿಗೆ ಪೂರ್ವ ರೈಲ್ವೆ ಗುಡ್ ನ್ಯೂಸ್ ನೀಡಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಭಾರತೀಯ ರೈಲ್ವೆ ವಿಭಾಗವಾದ ಪೂರ್ವ ರೈಲ್ವೆ ವಿಶೇಷ ರೈಲುಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಇದೀಗ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಮತದಾನ ಮಾಡಲು ಬೆಂಗಳೂರಿನಿಂದ ಬಿಹಾರದ ತಮ್ಮ ಊರುಗಳಿಗೆ ತರಳಿದ್ದಾರೆ. ಇಂತಹವರಿಗೆ ಅಲ್ಲಿಂದ ಮತ್ತೆ ಬೆಂಗಳೂರಿಗೆ ಹಿಂತಿರುಗಲು ಸಹಾಯ ಆಗಲೆಂದು ವಿಶೇಷ ರೈಲುಗಳನ್ನು ಓಡಿಸಲು ನಿರ್ಧಾರ ಮಾಡಿದೆ. ಹಾಗಾದ್ರೆ ದಿನಾಂಕ, ಸಮಯಗಳ ವಿವರನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಪೂರ್ವ ರೈಲ್ವೆಯು ಬೆಂಗಳೂರು ಮತ್ತು ಬಿಹಾರದ ನಗರಗಳನ್ನು ಸಂಪರ್ಕಿಸುವ ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಮತದಾನಕ್ಕಾಗಿ ಬೆಂಗಳೂರಿನಿಂದ ಬಿಹಾರದ ತಮ್ಮ ನಗರಗಳಿಗೆ ತೆರಳುವವರಿಗೆ ಹಾಗೂ ಮತದಾನ ಮುಗಿಸಿ ಬೆಂಗಳೂರಿಗೆ ಹಿಂತಿರುಗುವವರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ರೈಲುಗಳನ್ನು ಓಡಿಸಲು ನಿರ್ಧಾರ ಮಾಡಿದೆ.
ಬಿಹಾರದಿಂದ ಹೊರಡುವ ರೈಲು: ರೈಲು ಸಂಖ್ಯೆ 03403 ನವೆಂಬರ್ 7ರಂದು ರಾತ್ರಿ 10:30ಕ್ಕೆ ಭಾಗಲ್ಪುರದಿಂದ ಹೊರಟು ನವೆಂಬರ್ 9ರಂದು ಕೆಆರ್ ಪುರಂ ಮತ್ತು ಎಸ್ಎಂವಿಟಿ ಬೆಂಗಳೂರು ಮೂಲಕ ರಾತ್ರಿ 11.50 ಕ್ಕೆ ಯಶವಂತಪುರ ತಲುಪಲಿದೆ.
ಬೆಂಗಳೂರಿನಿಂದ ಹೊರಡುವ ರೈಲು: ರೈಲು ಸಂಖ್ಯೆ 03404 ನವೆಂಬರ್ 10ರಂದು ಬೆಳಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಟು ನವೆಂಬರ್ 12ಕ್ಕೆ ಬೆಳಗ್ಗೆ 7:30ಕ್ಕೆ ಯಲಹಂಕ ಮೂಲಕ ಭಾಗಲ್ಪುರ ತಲುಪಲಿದೆ. ಇನ್ನೂ ಈ ಎರಡೂ ವಿಶೇಷ ರೈಲುಗಳು ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರಿಗೆ ಮುಕ್ತ ಆಗಿದೆ ಎಂದು ಪೂರ್ವ ರೈಲ್ವೆ ಮಾಹಿತಿ ನೀಡಿದೆ.
ರೈಲು ಸಂಖ್ಯೆ 05545 ನವೆಂಬರ್ 11 ಮತ್ತು 12ರಂದು ರಾತ್ರಿ 9:15ಕ್ಕೆ ಮುಜಫರ್‌ಪುರದಿಂದ ಹೊರಡಲಿದ್ದು, ನವೆಂಬರ್ 13 ಮತ್ತು 14ರಂದು ರಾತ್ರಿ 11:50 ಕ್ಕೆ ಯಶವಂತಪುರ ತಲುಪಲಿದೆ. ಕೆ.ಆರ್. ಪುರಂ ಮತ್ತು ಎಸ್ಎಂವಿಟಿ ಬೆಂಗಳೂರು ಇಲ್ಲಿ ನಿಲುಗಡೆಗಳು ಇರಲಿವೆ.
ಇನ್ನು ರೈಲು ಸಂಖ್ಯೆ 05546 ನವೆಂಬರ್ 14 ಮತ್ತು 15ರಂದು ಮಧ್ಯಾಹ್ನ 3:50ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡಲಿದೆ. ನವೆಂಬರ್ 16 ಮತ್ತು 17ರಂದು ಸಂಜೆ 7 ಗಂಟೆಗೆ ಮುಜಫರ್‌ಪುರ ತಲುಪಲಿದೆ. ಇದು ಕೆಆರ್ ಪುರಂನಲ್ಲಿ ನಿಲುಗಡೆ ಹೊಂದಿರಲಿದೆ ಎಂದು ಪೂರ್ವ ರೈಲ್ವೆ ತಿಳಿಸಿದೆ.
ಇನ್ನೂ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು (ನವೆಂಬರ್ 6) ನಡೆಯುತ್ತಿದೆ. ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ. ಆದ್ದರಿಂದ ಈಗಾಗಲೇ ಬಿಹಾರದ ವಿವಿಧ ನಗರಗಳಿಗೆ ಹೋಗಿರುವವರು ಬೆಂಗಳೂರಿಗೆ ವಾಪಸಾಗಲು ಮತ್ತು ನವೆಂಬರ್ 11ರ ಚುನಾವಣೆಯಲ್ಲಿ ಮತದಾನ ಮಾಡಲು ಹೋಗಿ ಬರಲಿರುವವರಿಗೆ ಅನುಕೂವ ಆಗಲೆಂದು ಪೂರ್ವ ರೈಲ್ವೆ ಈ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಇನ್ನೂ ಇಂದು ಮೊದಲ ಹಂತದಲ್ಲಿ 18 ಜಿಲ್ಲೆಗಳ 121 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಹೀಗೆ ಭಾರತೀಯ ರೈಲ್ವೆಯು ವಿಶೇಷ ರೈಲುಗಳನ್ನು ಬಿಟ್ಟಿರುವುದು ಇದೇ ಮೊದಲೇನಲ್ಲ. ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ವಿಶೇಷ ರೈಲುಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ.












Click it and Unblock the Notifications