ಸಮವಸ್ತ್ರ ಧರಿಸಿಲ್ಲ ಎಂದು ನಿಂದಿಸಿದ ಶಿಕ್ಷಕರಿಗೆ ತರಗತಿಯೊಳಗೆ ಚಾಕು ಇರಿದ ವಿದ್ಯಾರ್ಥಿ
ದಿಸ್ಪೂರ್, ಜುಲೈ. 07: ಅಸ್ಸಾಂನ ಶಿವಸಾಗರ್ ಜಿಲ್ಲೆಯ ಶಾಲೆಯೊಂದರಲ್ಲಿ ತರಗತಿಯೊಳಗೆ ಶಿಕ್ಷಕನನ್ನು ವಿದ್ಯಾರ್ಥಿಯು ಚಾಕುವಿನಿಂದ ಇರಿದು ಕೊಂದ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 11 ನೇ ತರಗತಿಯ ವಿದ್ಯಾರ್ಥಿಯು ಕ್ಯಾಶುಯಲ್ ಡ್ರೆಸ್ ಧರಿಸಿದ್ದಕ್ಕಾಗಿ ಟೀಚರ್ ನಿಂದಿಸಿದ್ದರು ಎಂದು ವರದಿಯಾಗಿದೆ.
ಶಾಲೆಯಲ್ಲಿ ತರಗತಿ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದ್ದು, ರಾಜೇಶ್ ಬಾಬು ಎಂಬ ಶಿಕ್ಷಕನ ಮೇಲೆ ವಿದ್ಯಾರ್ಥಿ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಮಧ್ಯಾಹ್ನ 3:15 ರ ಸುಮಾರಿಗೆ ವಿದ್ಯಾರ್ಥಿಯೊಬ್ಬ ಶಾಲೆಯ ತರಗತಿಯೊಳಗೆ ಶಿಕ್ಷಕನಿಗೆ ಚಾಕುವಿನಿಂದ ಇರಿದಿದ್ದಾನೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ನೀಡುವ ಮುನ್ನವೇ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ನಾವು ವಿದ್ಯಾರ್ಥಿಯನ್ನು ಬಂಧಿಸಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಮೊಯ್ದುಲ್ ಇಸ್ಲಾಂ ಹೇಳಿದ್ದಾರೆ.
ಆರೋಪಿ ಸಮವಸ್ತ್ರದ ಬದಲು ಕಲರ್ ಡ್ರೆಸ್‌ನಲ್ಲಿ ಶಾಲೆಗೆ ಬಂದಿದ್ದರು ಎಂದು ಘಟನೆಯನ್ನು ಕಣ್ಣಾರೆ ಕಂಡ ವಿದ್ಯಾರ್ಥಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ತರಗತಿಗೆ ಪ್ರವೇಶಿಸಿದಾಗ, ಶಿಕ್ಷಕರು ಆರಂಭದಲ್ಲಿ ತರಗತಿಯಿಂದ ಹೊರ ಹೋಗುವಂತೆ ಹೇಳಿದರು. ಆದರೆ, ಆತ ಪಟ್ಟು ಬಿಡದೆ ಅಲ್ಲೆ ಇದ್ದಾಗ, ವಿದ್ಯಾರ್ಥಿಯ ಮೇಲೆ ಕೂಗಿಡಿದ್ದಾರೆ.
"ಶಿಕ್ಷಕರ ಪ್ರತಿಕ್ರಿಯೆಯಿಂದ ವಿದ್ಯಾರ್ಥಿ ಕೋಪಗೊಂಡಂತೆ ತೋರುತ್ತಿದೆ. ಅವರು ಚಾಕು ತೆಗೆದುಕೊಂಡು ಶಿಕ್ಷಕರ ತಲೆಗೆ ಇರಿದಿದ್ದಾರೆ. ಅವರ ಬಳಿ ಹರಿತವಾದ ಆಯುಧ ಇರುವುದು ನಮಗೆ ತಿಳಿದಿರಲಿಲ್ಲ. ನಮ್ಮ ಶಿಕ್ಷಕರು ಗಾಯಗೊಂಡರು ಮತ್ತು ಅವರು ನೆಲದ ಮೇಲೆ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಯಿತು" ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಶಿವಸಾಗರದ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. "ನಾವು ವಿದ್ಯಾರ್ಥಿಯನ್ನು ಕರೆದುಕೊಂಡು ಬಂದಿದ್ದೇವೆ. ಘಟನೆಗೆ ಕಾರಣವೇನು ಎಂಬುದು ನಮಗೆ ಇನ್ನೂ ತಿಳಿದಿಲ್ಲ. ನಾವು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದ ಶಿಕ್ಷಕಿಗೆ ಚಾಕು ಇರಿತ
ಮತ್ತೊಂದು ಘಟನೆಯಲ್ಲಿ, ಮೇ ತಿಂಗಳಲ್ಲಿ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ 40 ವರ್ಷದ ಶಾಲಾ ಶಿಕ್ಷಕಿ ಶಾಲೆಗೆ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದು, ಸಾವನ್ನಪ್ಪಿದ್ದಾರೆ. ಸಾಕ್ಷ್ಯವನ್ನು ಮರೆಮಾಚಲು ಆಕೆಯ ದೇಹವನ್ನು ಆರೋಪಿಗಳು ಸುಟ್ಟು ಹಾಕಿದ್ದಾರೆ. ಪ್ರಾಣ್‌ಪುರ ಪೊಲೀಸ್ ವ್ಯಾಪ್ತಿಗೆ ಬರುವ ಪಕರಿಯಾ ಲಕ್ಷ್ಮೀಪುರದಲ್ಲಿ ಸಂತ್ರಸ್ತೆಯ ಮನೆಯ ಬಳಿ ಈ ಘಟನೆ ನಡೆದಿದೆ.












Click it and Unblock the Notifications