ಲವರ್ ಆಸೆ ತೀರಿಸಲು ತನ್ನ ಮನೆಯಲ್ಲೇ 50 ಲಕ್ಷ ರೂ. ಕದ್ದ ಖದೀಮ: ಮಗನ ವಿರುದ್ಧವೇ ಎಫ್ಐಆರ್ ದಾಖಲಿಸಿದ ತಂದೆ
ಅಸ್ಸಾಂನ ಜೋರ್ಹತ್‌ನಲ್ಲಿ ಒಂದು ವಿಚಿತ್ರ ಹಾಗೂ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರೀತಿಯ ಬಲೆಯಲ್ಲಿ ಬಿದ್ದ ಯುವಕನೊಬ್ಬ ತನ್ನ ಹುಡುಗಿಯ ಶೋಕಿಗಳನ್ನ ಪೂರೈಸಲು, ತನ್ನ ಮನೆಯಲ್ಲೇ ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕದ್ದು ಸಿಕ್ಕಿಬಿದ್ದಿದ್ದಾನೆ.
ಸ್ವತಃ ತಂದೆಯೇ ತನ್ನ ಹೆತ್ತ ಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಈ ಪ್ರಕರಣದ ಮತ್ತೊಂದು ವಿಶೇಷ. ಯಶ್ ಧನುಕಾ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಹೆತ್ತವರು ಯಾವುದೋ ಕೆಲಸದ ನಿಮಿತ್ತ ಕೆಲವು ದಿನಗಳ ಮಟ್ಟಿಗೆ ಬೇರೆ ಊರಿಗೆ ಹೋಗಿದ್ದಾಗ, ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಈ ಕಳ್ಳತನ ಮಾಡಿದ್ದಾನೆ.

ಗೆಳತಿಗಾಗಿ ಕಳ್ಳತನ: ಐಫೋನ್ ಉಡುಗೊರೆ, ಪಾರ್ಟಿ, ಮೋಜು ಮಸ್ತಿ
ತನ್ನ ಪೋಷಕರ ಕೋಣೆಯಲ್ಲಿರುವ ಲಾಕರ್‌ನಲ್ಲಿ ಹಣ ಮತ್ತು ಚಿನ್ನಾಭರಣಗಳಿರುವ ಬಗ್ಗೆ ಯಶ್ ಧನುಕಾಗೆ ಮೊದಲೇ ತಿಳಿದಿತ್ತು. ಪೋಷಕರು ಊರು ಬಿಡುತ್ತಿದ್ದಂತೆಯೇ ಲಾಕರ್ ಒಡೆದು 50 ಲಕ್ಷ ರೂ. ಮೌಲ್ಯದ ಸಂಪತ್ತನ್ನ ದೋಚಿದ್ದಾನೆ. ಕದ್ದ ಚಿನ್ನಾಭರಣಗಳ ಪೈಕಿ ಕೆಲವನ್ನ ಮಾರಿದ್ದು, ಬಂದ ಹಣದಲ್ಲಿ ತನ್ನ ಗೆಳತಿ ಪುಬಾಲಿ ದತ್ತಾ ಎಂಬಾಕೆಗೆ ಬರೋಬ್ಬರಿ 1.5 ಲಕ್ಷ ರೂಪಾಯಿ ಬೆಲೆಯ ಐಫೋನ್ ಉಡುಗೊರೆಯಾಗಿ ನೀಡಿದ್ದಾನೆ.
ಕೇವಲ ಉಡುಗೊರೆಯಷ್ಟೇ ಅಲ್ಲದೆ, ಗೆಳತಿಯೊಂದಿಗೆ ದುಬಾರಿ ರೆಸ್ಟೋರೆಂಟ್‌ಗಳಿಗೆ ಭೇಟಿ, ಪಾರ್ಟಿ, ಔಟಿಂಗ್ ಎಂದು ಮೋಜು ಮಸ್ತಿಗಾಗಿ ಲಕ್ಷಾಂತರ ರೂಪಾಯಿಗಳನ್ನ ನೀರಿನಂತೆ ಖರ್ಚು ಮಾಡಿದ್ದಾನೆ.
ಪೊಲೀಸರ ತನಿಖೆಯ ವೇಳೆ ಬಯಲಾದ ಮಾಹಿತಿಯ ಪ್ರಕಾರ, ಯಶ್ ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತನ ಗೆಳತಿ ಪುಬಾಲಿ ದತ್ತಾ ಕೂಡ ಆ ಮನೆಗೆ ಭೇಟಿ ನೀಡಿದ್ದಳು ಎಂಬುದು ಬಯಲಾಗಿದೆ. ಹೀಗಾಗಿ, ಈ ಕಳ್ಳತನದ ಬಗ್ಗೆ ಆಕೆಗೂ ಮೊದಲೇ ತಿಳಿದಿತ್ತೇ? ಯಶ್ ತರುತ್ತಿದ್ದ ದುಬಾರಿ ಉಡುಗೊರೆಗಳು ಮತ್ತು ಹಣದ ಮೂಲದ ಬಗ್ಗೆ ಆಕೆಗೆ ಮಾಹಿತಿ ಇತ್ತೇ ಎಂಬ ನಿಟ್ಟಿನಲ್ಲಿ ಜೋರ್ಹತ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅವರಿಬ್ಬರ ನಡುವೆ ನಡೆದಿರುವ ವಾಟ್ಸಾಪ್ ಸಂದೇಶಗಳು ಹಾಗೂ ಕರೆಗಳ ವಿವರಗಳನ್ನ ಪೊಲೀಸರು ಕಲೆಹಾಕುತ್ತಿದ್ದಾರೆ.
50 ಲಕ್ಷ ಕಳ್ಳತನ: ಮಗನ ವಿರುದ್ಧ ದೂರು ನೀಡಿದ ತಂದೆ
ಊರಿನಿಂದ ಹಿಂದಿರುಗಿದ ಪೋಷಕರಿಗೆ ಮನೆಯ ಲಾಕರ್ ಒಡೆದಿರುವುದು ಹಾಗೂ ಅದಲ್ಲಿದ್ದ 50 ಲಕ್ಷ ಮೌಲ್ಯದ ನಗದು ಮತ್ತು ಒಡವೆಗಳು ನಾಪತ್ತೆಯಾಗಿರುವುದು ಕಂಡು ಆಘಾತವಾಗಿದೆ. ಕಳ್ಳತನ ಮಾಡಿದ್ದು ಬೇರಾರೂ ಅಲ್ಲ, ತಮ್ಮ ಹೆತ್ತ ಮಗನೇ ಎಂಬ ಸತ್ಯ ತಿಳಿದು ಕುಟುಂಬ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿ ಯಶ್ ತಂದೆಯೇ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ, ಮಗನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಫ್ಐಆರ್ ದಾಖಲಿಸಿದ್ದಾರೆ. ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಪತ್ರಕರ್ತರು ಶಾಮೀಲು
ಈ ಕಳ್ಳತನ ಪ್ರಕರಣದಲ್ಲಿ ಕೇವಲ ಯಶ್ ಮಾತ್ರವಲ್ಲದೆ, ಇಬ್ಬರು ಪತ್ರಕರ್ತರು ಕೂಡ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಿತೇಂದ್ರ ಸೋಮಾನಿ ಹಾಗೂ ರೋಹಿತ್ ಪ್ರಸಾದ್ ಎಂಬ ಇಬ್ಬರು ಪತ್ರಕರ್ತರು ಯಶ್ ಕದ್ದಿದ್ದ ಚಿನ್ನಾಭರಣಗಳನ್ನ ಮಾರಾಟ ಮಾಡಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಕದ್ದ ಕೆಲವು ಒಡವೆಗಳನ್ನ ಗೋಲಾಘಾಟ್‌ನ ಚಿನ್ನದ ಅಂಗಡಿಯೊಂದರಲ್ಲಿ ಮಾರಾಟ ಮಾಡಲಾಗಿದೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ.
ಸದ್ಯ ಜೋರ್ಹತ್ ಪೊಲೀಸರು ಕಳವಾಗಿರುವ ಒಡವೆಗಳನ್ನು ಜಪ್ತಿ ಮಾಡಲು ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕದ್ದ ಹಣವನ್ನ ಬೇರೆ ಎಲ್ಲೆಲ್ಲಿ ಖರ್ಚು ಮಾಡಲಾಗಿದೆ, ಈ ಕೃತ್ಯದಲ್ಲಿ ಗೆಳತಿ ಹಾಗೂ ಪತ್ರಕರ್ತರ ಪಾತ್ರವೇನು ಎಂಬುದರ ಬಗ್ಗೆ ಸಮಗ್ರ ತನಿಖೆ ಮುಂದುವರಿದಿದೆ. ತಮ್ಮ ಶೋಕಿಗಾಗಿ ಹೆತ್ತವರ ಜೀವಮಾನದ ಸಂಪಾದನೆಯನ್ನೇ ಲೂಟಿ ಮಾಡಿದ ಮಗನ ಕೃತ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರಿ ಚರ್ಚೆಗೆ ಕಾರಣವಾಗಿದೆ.


Click it and Unblock the Notifications
