ಶಾರುಖ್ ಖಾನ್ ಯಾರು? ಎಂದು ಪ್ರಶ್ನಿಸಿ, ನಂತರ ಪಠಾಣ್ ಚಿತ್ರಕ್ಕೆ ತೊಂದರೆಯಾಗದು ಎಂದು ಭರವಸೆ ನೀಡಿದ ಅಸ್ಸಾಂ ಸಿಎಂ!
ನವದೆಹಲಿ, ಜನವರಿ, 22: ಶನಿವಾರವಷ್ಟೇ ಶಾರುಖ್ ಖಾನ್ ಯಾರು ಎಂದು ಪ್ರಶ್ನಿಸಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಇಂದು ಅವರ ಜೊತೆಗೆ ಮಾತನಾಡಿದ್ದೇನೆ. ಅವರು ಕರೆ ಮಾಡಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ಅವರೊಂದಿಗೆ ಮಾತನಾಡಿದ್ದು, ಬಿಡುಗಡೆಯಾಗಲಿರುವಬ 'ಪಠಾಣ್' ಚಿತ್ರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.
Bollywood actor Shri @iamsrk called me and we talked today morning at 2 am. He expressed concern about an incident in Guwahati during screening of his film. I assured him that it’s duty of state govt to maintain law & order. We’ll enquire and ensure no such untoward incidents.
— Himanta Biswa Sarma (@himantabiswa) January 22, 2023
ಗುವಾಹಟಿಯ ಥಿಯೇಟರ್‌ನಲ್ಲಿ ಸಂಭವಿಸಿದ ಹಿಂಸಾತ್ಮಕ ಪ್ರತಿಭಟನೆಗಳ ಕುರಿತು ಶಾರುಖ್ ಖಾನ್ ಭಾನುವಾರ ಮುಂಜಾನೆ ಅವರಿಗೆ ಕರೆ ಮಾಡಿರುವುದಾಗಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

"ಬಾಲಿವುಡ್ ನಟ ಶಾರುಖ್ ಖಾನ್ ನನಗೆ ಕರೆ ಮಾಡಿದರು. ನಾವು ಇಂದು ಬೆಳಗಿನ ಜಾವ 2 ಗಂಟೆಗೆ ಮಾತನಾಡಿದ್ದೇವೆ. ಅವರು ತಮ್ಮ ಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಈ ಬಗ್ಗೆ ನಾವು ವಿಚಾರಣೆ ನಡೆಸುತ್ತೇವೆ ಮತ್ತು ಅಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ" ಎಂದು ಮುಖ್ಯಮಂತ್ರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಚಲನಚಿತ್ರದ ವಿರುದ್ಧ ಬಲಪಂಥೀಯ ಕಾರ್ಯಕರ್ತರು ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಕುರಿತು ಪತ್ರಕರ್ತರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಶಾರುಖ್ ಖಾನ್ ಯಾರು ಎಂದು ಪ್ರಶ್ನಿಸಿದ್ದರು. ಶಾರುಖ್ ಖಾನ್ ಯಾರು..? ಅವರ ಬಗ್ಗೆ ಅಥವಾ 'ಪಠಾಣ್' ಚಿತ್ರದ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ಗುವಾಹಟಿಯಲ್ಲಿ ಹೇಳಿದ್ದರು. ಆದಾದ ಒಂದು ದಿನದ ನಂತರ ಅವರ ಟ್ವೀಟ್ ಬಂದಿದೆ.
ಶಾರುಖ್ ಖಾನ್ ಅವರನ್ನು ಬಾಲಿವುಡ್ ಸೂಪರ್‌ಸ್ಟಾರ್ ಎಂದು ಪತ್ರಕರ್ತರು ಹೇಳಿದಕ್ಕೆ, ರಾಜ್ಯದ ಜನರು ಅಸ್ಸಾಮಿ ಚಲನಚಿತ್ರಗಳ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಬಾಲಿವುಡ್ ಚಿತ್ರಗಳ ಬಗ್ಗೆಯಲ್ಲ ಎಂದು ಹೇಳಿದ್ದರು.

ಗುವಾಹಟಿಯ ಥಿಯೇಟರ್‌ನಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲು ಸಜ್ಜಾಗಿದ್ದ ವೇಳೆ ಕೆಲವು ಬಜರಂಗದಳ ಕಾರ್ಯಕರ್ತರು ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಕಿರುವ ಘಟನೆಗಳು ನಡೆದಿವೆ.
ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಚಿತ್ರ ಜನವರಿ 25 ರಂದು ಬಿಡುಗಡೆಯಾಗಲಿದೆ. ಚಿತ್ರದ 'ಬೇಷರಂ ರಂಗ್' ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದು, ಹಾಡಿನ ವಿರುದ್ಧ ಭಾರಿ ಪ್ರತಿಭಟನೆ ನಡೆದಿದೆ. ಬಲಪಂಥೀಯ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಿನಿಮಾವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
ಆದರೆ, "ಸಿನಿಮಾಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನು" ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಹಲವು ನಾಯಕರು ಪಠಾಣ್ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಲು ಹಿಂದೆಟು ಹಾಕುತ್ತಿದ್ದಾರೆ.












Click it and Unblock the Notifications