ಅಸ್ಸಾಂ: ಚುನಾವಣೆಗೂ ಮುನ್ನ ಎನ್ಡಿಎಗೆ ಆಘಾತ, ಕೈಕೊಟ್ಟ ಮಿತ್ರಪಕ್ಷ
ಗುವಾಹಟಿ, ಜನವರಿ 07: ಲೋಕಸಭೆ ಚುನಾವಣೆಗೂ ಮುನ್ನ ಈಶಾನ್ಯ ಭಾರತದಿಂದ ಎನ್ಡಿಎಗೆ ಆಘಾತಕಾರಿ ಸುದ್ದಿ ಬಂದಿದೆ. ನಾಗರಿಕ(ತಿದ್ದುಪಡಿ) ಕಾಯ್ದೆ 2016 ಕುರಿತಂತೆ ಒಮ್ಮತ ಮೂಡದ ಕಾರಣ ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳುತ್ತಿರುವುದಾಗಿ ಅಸ್ಸೋಂ ಗಣ ಪರಿಷತ್(ಎಜಿಪಿ) ಸೋಮವಾರದಂದು ಘೋಷಿಸಿದೆ.
ಬಿಜೆಪಿ ಜತೆಗಿನ ಅನೇಕ ಮಿತ್ರಪಕ್ಷಗಳು ಮನಸ್ತಾಪ ಮಾಡಿಕೊಂಡಿರುವ ಸಂದರ್ಭದಲ್ಲೇ ಎಜಿಪಿ ಕೂಡಾ ಬಿಜೆಪಿ ಸಖ್ಯ ತೊರೆಯುತ್ತಿರುವುದು ಭಾರಿ ಹಿನ್ನಡೆಯಾಗಲಿದೆ.
ಪರದೇಶಗಳಿಂದ ಬಂದು ಅಸ್ಸಾಂನಲ್ಲಿ ನೆಲೆಸಿರುವವರಿಗೆ ಪೌರತ್ವ ನೀಡಿದರೆ, ಎನ್ಡಿಎ ಮೈತ್ರಿ ತೊರೆಯುವುದಾಗಿ ಅಸ್ಸೋಂ ಗಣ ಪರಿಷತ್ (ಎಜಿಪಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಪ್ರಫುಲ್ಲಾ ಕುಮಾರ್ ಮಹಾಂತ ಈ ಮುಂಚೆಯೇ ಎಚ್ಚರಿಕೆ ನೀಡಿದ್ದರು.

2016ರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲೂ ಎಜಿಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. 126 ವಿಧಾನಸಭಾ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ 61 ಸ್ಥಾನ ಗೆದ್ದರೆ, ಎಜಿಪಿ 14 ಸ್ಥಾನ, ಬೋಡೋ ಪಾರ್ಟಿ ಫ್ರಂಟ್ 12 ಗೆಲುವು ಸಾಧಿಸಿತ್ತು. ಒಟ್ಟಾರೆ, ಬಿಜೆಪಿ ಮೈತ್ರಿಕೂಟ 87 ಸ್ಥಾನ ಗಳಿಸಿತ್ತು. ಸರ್ಬಾನಂದ ಸೋನೊವಾಲ್ ಮುಖ್ಯಮಂತ್ರಿಯಾದರು. ಈಗ ಎಜಿಪಿ ಮೈತ್ರಿ ತೊರೆದರೂ ಸೋನೊವಾಲ್ ಸರ್ಕಾರಕ್ಕೇನು ಧಕ್ಕೆ ಉಂಟಾಗುವುದಿಲ್ಲ. ಆದರೆ, ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ.
ನಾಗರಿಕ ತಿದ್ದುಪಡಿ ಕಾಯ್ದೆ ಜಾರಿಯಾದರೆ, ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವವರಿಗೆ ಪೌರತ್ವ ಸಿಗಲಿದೆ ಎಂಬುದು ಎಜಿಪಿ ವಾದ. ಇದಕ್ಕೆ ಸಾರ್ವಜನಿಕ ವಲಯದಲ್ಲೂ ಭಾರಿ ಬೆಂಬಲ ವ್ಯಕ್ತವಾಗಿದೆ.












Click it and Unblock the Notifications