ಭಯವಿಲ್ಲದೇ ವರದಿ ಮಾಡುವುದನ್ನು ಮುಂದುವರಿಸುತ್ತೇವೆ: ಮೋದಿ ಸರ್ಕಾರಕ್ಕೆ BBC ಸವಾಲು- ಸಂಘರ್ಷಕ್ಕೆ ಮತ್ತೆ ಸಿದ್ದತೆ?
ನಾವು ಭಯವಿಲ್ಲದೇ ಅಥವಾ ಯಾರ ಪರವಾಗಿಯೂ ಇಲ್ಲದೇ ವರದಿ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಬಿಬಿಸಿ ಹೇಳಿದೆ. ಈ ಮೂಲಕ ಮೋದಿ ಸರ್ಕಾರಕ್ಕೆ ಮತ್ತೆ ಸವಾಲು ಹಾಕಿದೆ.
ನವದೆಹಲಿ, ಫೆಬ್ರವರಿ 17: ಆದಾಯ ತೆರಿಗೆ ಅಧಿಕಾರಿಗಳು ತನ್ನ ಕೆಲವು ಸಿಬ್ಬಂದಿಯನ್ನು ಮೂರು ದಿನಗಳ ಕಾಲ 'ಸುದೀರ್ಘ ವಿಚಾರಣೆ' ಮಾಡಿದ್ದಾರೆ. ಆ ನಂತರ ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳನ್ನು ತೊರೆದಿದ್ದಾರೆ ಎಂದು ಯುಕೆಯಲ್ಲಿರುವ ಬಿಬಿಸಿಯ ಪ್ರಧಾನ ಕಚೇರಿ ಗುರುವಾರ ತಿಳಿಸಿದೆ.
ತನ್ನ ಸಿಬ್ಬಂದಿಯನ್ನು ಬೆಂಬಲಿಸುವುದು ಈಗ ಬಿಬಿಸಿಯ ಆದ್ಯತೆಯಾಗಿದೆ. ಅವರಲ್ಲಿ ಹಲವರು IT ವಿಚಾರಣೆಯ ಸಮಯದಲ್ಲಿ ರಾತ್ರಿಯಿಡೀ ಕಚೇರಿಗಳಲ್ಲಿ ಉಳಿಯಬೇಕಾಯಿತು. ನಾವು ಭಯವಿಲ್ಲದೇ ಅಥವಾ ಯಾರ ಪರವಾಗಿಯೂ ಇಲ್ಲದೇ ವರದಿ ಮಾಡುವುದನ್ನು ಮುಂದುವರಿಸುತ್ತವೆ ಎಂದು ಹೇಳಿದೆ.
'ಆದಾಯ ತೆರಿಗೆ ಅಧಿಕಾರಿಗಳು ದೆಹಲಿ ಮತ್ತು ಮುಂಬೈನಲ್ಲಿರುವ ನಮ್ಮ ಕಚೇರಿಗಳನ್ನು ತೊರೆದಿದ್ದಾರೆ' ಎಂದು ಬಿಬಿಸಿ ವಕ್ತಾರರು ಗುರುವಾರ ಸಂಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ನಾವು ಅಧಿಕಾರಿಗಳೊಂದಿಗೆ ಸಹಕರಿಸುವುದನ್ನು ಮುಂದುವರಿಸುತ್ತೇವೆ. ಸಾಧ್ಯವಾದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭಾವಿಸುತ್ತೇವೆ. ನಾವು ಸಿಬ್ಬಂದಿಯನ್ನು ಬೆಂಬಲಿಸುತ್ತಿದ್ದೇವೆ. ಅವರಲ್ಲಿ ಕೆಲವರು ಸುದೀರ್ಘ ವಿಚಾರಣೆಯನ್ನು ಎದುರಿಸಿದ್ದಾರೆ. ರಾತ್ರಿಯಿಡೀ ಕಚೇರಿಯಲ್ಲಿಯೇ ಉಳಿದಿದ್ದಾರೆ. ಅವರ ಪರ ನಿಲ್ಲುವುದು ನಮ್ಮ ಆದ್ಯತೆಯಾಗಿದೆ,' ಎಂದು ವಕ್ತಾರರು ಹೇಳಿದ್ದಾರೆ.
ಕಚೇರಿಯ ವಾತಾವರಣವು ಸಾಮಾನ್ಯ ಸ್ಥಿತಿಗೆ ಮರಳಿದೆ. ಭಾರತ ಮತ್ತು ಅದರಾಚೆ ಇರುವ ವೀಕ್ಷಕರಿಗೆ ಸೇವೆ ನೀಡಲು ನಾವು ಬದ್ದರಾಗಿದ್ದೇವೆ ಎಂದು ವಕ್ತಾರರು ಪುನರುಚ್ಚರಿಸಿದ್ದಾರೆ.

'ಬಿಬಿಸಿ ವಿಶ್ವಾಸಾರ್ಹ, ಸ್ವತಂತ್ರ ಮಾಧ್ಯಮ ಸಂಸ್ಥೆಯಾಗಿದೆ. ನಾವು ನಮ್ಮ ಸಹೋದ್ಯೋಗಿಗಳು ಮತ್ತು ಪತ್ರಕರ್ತರಿಗೆ ಬೆಂಬಲ ನೀಡುತ್ತೇವೆ. ಅವರು ಭಯವಿಲ್ಲದೇ, ಯಾರ ಪರವಾಗಿಯೂ ನಿಲ್ಲದೇ ವರದಿ ಮಾಡುವುದನ್ನು ಮುಂದುವರಿಸುತ್ತಾರೆ' ಎಂದು ವಕ್ತಾರರು ತಿಳಿಸಿದ್ದಾರೆ.
ಈ ಪರಿಸ್ಥಿತಿಯನ್ನು 'ವಿಚ್ಛಿದ್ರಕಾರಕ' ಎಂದು ಬಿಬಿಸಿ ವಿವರಿಸಿದೆ. ಬಿಬಿಸಿಯ ಕನಿಷ್ಠ 10 ಹಿರಿಯ ಉದ್ಯೋಗಿಗಳು ತಮ್ಮ ಭಾರತೀಯ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ 'ಸಮೀಕ್ಷೆ' ಆರಂಭಿಸಿದಾಗಿನಿಂದ ಮನೆಗೆ ಹೋಗಿಲ್ಲ ಎಂದು ಮೂಲಗಳು ತಿಳಿಸಿವೆ. ಕಾರ್ಯಾಚರಣೆ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು 2002 ರ ಗುಜರಾತ್ ಗಲಭೆಗಳ ಕುರಿತು ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ವಾರಗಳ ನಂತರ ಅಧಿಕಾರಿಗಳು ಸಿಬ್ಬಂದಿಗಳಿಂದ ಹಣಕಾಸಿನ ಡೇಟಾವನ್ನು ಸಂಗ್ರಹಿಸಿದರು. ಸುದ್ದಿ ಸಂಸ್ಥೆಯ ದಾಖಲೆಗಳ ಪ್ರತಿಗಳನ್ನು ಪಡೆದುಕೊಂಡರು.
ಬಿಬಿಸಿ ಎಂದಿನಂತೆ ತಮ್ಮ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ. ಅನೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ದೆಹಲಿಯ ಬಿಬಿಸಿ ಸಿಬ್ಬಂದಿಯೊಬ್ಬರು 'ಎನ್‌ಡಿಟಿವಿ'ಗೆ ಹೇಳಿದ್ದಾರೆ.












Click it and Unblock the Notifications