Arvind Kejriwal: ಮುಖ್ಯ ಚುನಾವಣೆ ಆಯುಕ್ತರ ಬಾಸ್ ಪ್ರಧಾನಿ ಮೋದಿ.. ಅವರನ್ನ ರಾಜೀನಾಮೆ ಕೇಳಿ: ಸಿಜೆಪಿಗೆ ಕೇಜ್ರಿವಾಲ್ ಸೂಚನೆ
Arvind Kejriwal: ದೇಶದಲ್ಲಿ ಸದ್ಯ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಇದೇ ವೇಳೆ ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆಯಲೇಬೇಕು. ಈ ಬೇಡಿಕ ಈಡೇರುವವರೆಗೂ ಹಿಂದೆ ಸರಿಯುಯುವ ಮಾತೇ ಇಲ್ಲ ಸಿಜೆಪಿ ಪಟ್ಟುಹಿಡಿದಿದೆ. ಈ ಕುರಿತು ಪ್ರತಿಕ್ರಿಯಿಸಿದ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕಾಕ್ರೋಚ್ ಜನತಾ ಪಾರ್ಟಿಗೆ ಮಹತ್ವದ ಸಂದೇಶ ರವಾನಿಸಿದ್ದಾರೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿಯ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ಅದರ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. ಮುಖ್ಯ ಚುನಾವಣೆ ಆಯುಕ್ತರ ರಾಜೀನಾಮೆಗೆ ಪಟ್ಟು ಹಿಡಿಯುವ ಬದಲು, ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿ ಎಂದು ಅವರು ಕರೆ ನೀಡಿದ್ದಾರೆ.

'ನೇರವಾಗಿ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹಿಸಿ'
ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 2ರಂದು ಸಿಜೆಪಿ ಪ್ರತಿಭಟನೆಗೆ ಕರೆ ನೀಡಿದೆ. ಈ ಕುರಿತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಜ್ರಿವಾಲ್ ಅವರು, 'ನೀವು ಮೊದಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳಿದ್ದೀರಿ.
ಕೇಜ್ರಿವಾಲ್ ವಿಡಿಯೋ ವೈರಲ್
'ಈಗ ಮುಖ್ಯ ಚುನಾವಣೆ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದೀರಿ. ಆದರೆ ನನ್ನ ಸಲಹೆಯೇನೆಂದರೆ, ನೀವು ನೇರವಾಗಿ ಅವರ ಬಾಸ್ ಪ್ರಧಾನಿ ಮೋದಿ ರಾಜೀನಾಮೆಯನ್ನೇ ಕೇಳಿ. ಏಕೆಂದರೆ ದೇಶದಲ್ಲಿ ಏನೇ ನಡೆಯುತ್ತಿದ್ದರೂ ಅದು ಅವರ ನಿರ್ದೇಶನದಂತೆಯೇ ನಡೆಯುತ್ತಿದೆ,' ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಈ ವೀಡಿಯೋವನ್ನು ಕೇಜ್ರಿವಾಲ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲೂ ಕೂಡ ಹಂಚಿಕೊಂಡಿದ್ದು, ಇದು ಭಾರಿ ವೈರಲ್ ಆಗುತ್ತಿದೆ.
ಸಿಜೆಪಿಗೆ ಕೇಜ್ರಿವಾಲ್ ಮಹತ್ವದ ಮಾಹಿತಿ
ಜನರು ಪದೇ ಪದೇ ಎಷ್ಟು ಬಾರಿ ಜಂತರ್ ಮಂತರ್‌ಗೆ ಹೋಗಿ ಪ್ರತಿಭಟನೆ ನಡೆಸುತ್ತಾರೆ? ಮುಖ್ಯ ಚುನಾವಣೆ ಆಯುಕ್ತರು ಏನೇ ನಿರ್ಧಾರ ತೆಗೆದುಕೊಂಡಿದ್ದರೂ ಅದು ಅವರ 'ಬಾಸ್' ಪ್ರಧಾನಿ ಮೋದಿಯವರ ಸೂಚನೆಯಂತೆ ಆಗಿದೆ. ಆದ್ದರಿಂದ ನೀವು ಪ್ರಧಾನಿ ಮೋದಿ ಅವರ ರಾಜೀನಾಮೆಯನ್ನು ಪ್ರತಿಭಟನೆಯ ಮುಖ್ಯ ಅಜೆಂಡಾ ಮಾಡಿಕೊಳ್ಳಬೇಕು,' ಎಂದು ಸಿಜೆಪಿಗೆ ಕಿವಿಮಾತನ್ನ ಹೇಳಿದ್ದಾರೆ.
'ನೈಜ ಹೊಣೆಗಾರಿಕೆ ಪ್ರಧಾನಿಯವರದ್ದಾಗಿದೆ'
ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಹಲವು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಸಿಜೆಪಿ ಆಗ್ರಹಿಸುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, 'ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದ್ದು, ನೈಜ ಹೊಣೆಗಾರಿಕೆ ಪ್ರಧಾನಿಯವರದ್ದಾಗಿದೆ,' ಎಂದಿದ್ದಾರೆ.
ಸಿಜೆಪಿಗೆ ಕೇಜ್ರಿವಾಲ್ ಬೆಂಬಲ
ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನ ಪರವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಕೇಜ್ರಿವಾಲ್, 'ಜೆನ್-ಝಿ' (Gen-Z) ಪಡೆ ಸರ್ಕಾರವನ್ನು ಪ್ರಶ್ನಿಸುತ್ತಿರುವುದು ಸ್ವಾಗತಾರ್ಹ. ಆಡಳಿತಗಾರರ ವೈಫಲ್ಯಗಳಿಗೆ ಅಧಿಕಾರಿಗಳನ್ನು ಹೊಣೆ ಮಾಡುವ ಬದಲು, ನಿಜವಾದ ಅಧಿಕಾರ ಕೇಂದ್ರವಾಗಿರುವ ಪ್ರಧಾನಿಯವರನ್ನೇ ನೇರವಾಗಿ ಪ್ರಶ್ನಿಸಬೇಕು,' ಎಂದು ಹೇಳುವ ಮೂಲಕ ಸಿಜೆಪಿಗೆ ಬೆಂಬಲ ವ್ಯಕ್ತಡಿಸಿದ್ದಾರೆ.
ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗಿದೆ ಎಂಬ ಗಂಭೀರ ಆರೋಪವನ್ನು ಸಿಜೆಪಿ ಮುಖ್ಯ ಚುನಾವಣಾ ಆಯುಕ್ತರ ಮೇಲೆ ಹೊರಿಸಿದೆ. ಅಲ್ಲದೆ, ಅವರು ರಾಜೀನಾಮೆ ನೀಡಲೇಬೇಕೆಂದು ಪಟ್ಟು ಹಿಡಿದಿದೆ. ಇನ್ನು ಮುಂದಿನ ದಿನಗಳಲ್ಲಿ ಇದು ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆಯೋ ಎಂದು ಕಾದುನೋಡಬೇಕಿದೆ.


Click it and Unblock the Notifications
