Delhi Elections 2025: ದೆಹಲಿ ಚುನಾವಣೆ ಎರಡು ಸಿದ್ಧಾಂತಗಳ ಯುದ್ಧ : ಅರವಿಂದ್ ಕೇಜ್ರಿವಾಲ್
ನವದೆಹಲಿ, ಜನವರಿ 26: ದೆಹಲಿ ವಿಧಾನಸಭೆ ಚುನಾವಣೆ ಕೇವಲ ರಾಷ್ಟ್ರ ರಾಜಧಾನಿಯ ಸ್ಪರ್ಧೆಯಲ್ಲ ಇಡೀ ದೇಶಕ್ಕೆ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಚುನಾವಣೆಯು ಎರಡು ಸಿದ್ಧಾಂತಗಳ ಯುದ್ಧವಾಗಿದ್ದು, ಒಂದು ಸಾಮಾನ್ಯ ಸಾರ್ವಜನಿಕರ ಕಲ್ಯಾಣ ಮತ್ತು ಇನ್ನೊಂದು ಆಯ್ದ ಶ್ರೀಮಂತ ವ್ಯಕ್ತಿಗಳ ಲಾಭದ ಮೇಲೆ ಕೇಂದ್ರೀಕರಿಸಿದೆ ಎಂದು ಕೇಜ್ರವಾಲ್ ಅವರು ಹೇಳಿದರು.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಈ ಚುನಾವಣೆಯು ತೆರಿಗೆದಾರರ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದನ್ನು ನಿರ್ಧರಿಸುತ್ತದೆ. ಬಿಜೆಪಿ ಪ್ರತಿನಿಧಿಸುವ ಒಂದು ಸಿದ್ಧಾಂತವು ತನ್ನ ಸ್ನೇಹಿತರ ಸಾವಿರಾರು ಕೋಟಿಗಳ ಸಾಲವನ್ನು ಮನ್ನಾ ಮಾಡಲು ಸಾರ್ವಜನಿಕ ಹಣವನ್ನು ಬಳಸುತ್ತದೆ. ಇನ್ನೊಂದು, ನಮ್ಮ ಪಕ್ಷದ ಮಾದರಿಯು ಉಚಿತ ವಿದ್ಯುತ್ ಒದಗಿಸುವತ್ತ ಗಮನಹರಿಸುತ್ತದೆ. ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾರಿಗೆ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.

ಬಿಜೆಪಿ ನೇತೃತ್ವದ ಕೇಂದ್ರವನ್ನು ವಿರುದ್ದ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದು, ಕಳೆದ ಐದು ವರ್ಷಗಳಲ್ಲಿ 400-500 ಕೈಗಾರಿಕೋದ್ಯಮಿಗಳ 10 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಮಾದರಿಯು ಜನರ ಹಣವನ್ನು ತನ್ನ ಸ್ನೇಹಿತರಿಗೆ ಸಾಲವಾಗಿ ನೀಡುತ್ತದೆ ಮತ್ತು ಎರಡು ಮೂರು ವರ್ಷಗಳಲ್ಲಿ ಆ ಸಾಲಗಳನ್ನು ಮನ್ನಾ ಮಾಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಎಎಪಿ ಮಾದರಿಯು ಸಾರ್ವಜನಿಕರಿಗೆ ನೇರ ಪ್ರಯೋಜನಗಳನ್ನು ಒದಗಿಸುತ್ತದೆ, ದೆಹಲಿಯ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸುಮಾರು 25,000 ರೂ ಖರ್ಚು ಮಾಡುತ್ತಿದೆ. ಒಂದು ವೇಳೆ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಎಪಿ ಪ್ರಾರಂಭಿಸಿದ ಎಲ್ಲಾ ಕಲ್ಯಾಣ ಯೋಜನೆಗಳನ್ನು ಕೊನೆಗೊಳಿಸಲು ಬಿಜೆಪಿ ಯೋಜಿಸುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
"ಬಿಜೆಪಿಯು ಈಗಾಗಲೇ ದೆಹಲಿ ಸರ್ಕಾರದಿಂದ ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ (ಮಹಿಳೆಯರಿಗೆ) ಮತ್ತು ಇತರ ಸೌಲಭ್ಯಗಳನ್ನು ನಿಲ್ಲಿಸುವುದಾಗಿ ಸ್ಪಷ್ಟಪಡಿಸಿದೆ. ನಾನು ಜನರನ್ನು ಕೇಳುತ್ತೇನೆ, ಬಿಜೆಪಿ ಆಯ್ಕೆಯಾದರೆ ಈ ವೆಚ್ಚವನ್ನು ಅವರು ಭರಿಸಲು ಸಾಧ್ಯವಾಗುತ್ತದೆಯೇ? ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದರು.
ದೆಹಲಿಯಲ್ಲಿ ಚುನಾವಣಾ ಆಯೋಗವು ಪಂಜಾಬ್ ಪೊಲೀಸರನ್ನು ತೆಗೆದು ಹಾಕಿದೆ, ಗುಜರಾತ್ ಪೊಲೀಸರನ್ನು ನಿಯೋಜಿಸಿದೆ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಈ ಹಿನ್ನೆಲೆ ದೆಹಲಿ ಪೊಲೀಸರ ಉನ್ನತ ಮೂಲಗಳು ಸ್ಪಷ್ಟೀಕರಣವನ್ನು ನೀಡಿವೆ. CRPF, BSF, SSB, ITBP, CISF ಮತ್ತು RPF ಸೇರಿದಂತೆ 220 ಕಂಪನಿಗಳ ಭದ್ರತಾ ಸಿಬ್ಬಂದಿಯನ್ನು ದೆಹಲಿಯಲ್ಲಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಅಂತ ಎನ್ಡಿಟಿವಿ ವರದಿ ಮಾಡಿದೆ.
ಇನ್ನೂ ದೆಹಲಿ ವಿಧಾನಸಭಾ ಚುನಾವಣೆ ಕಣ ರಂಗೇರಿದ್ದು, ಈ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಆಡಳಿತರೂಢ ಎಎಪಿ ಪಕ್ಷವು ಭರ್ಜರಿ ಗ್ಯಾರಂಟಿ ಯೋಜನೆಗಳನ್ನ ನೀಡಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 5 ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications