Arvind Kejriwal : ಜಾಮೀನಿಗೆ ಹೈಕೋರ್ಟ್ ತಡೆಯಾಜ್ಞೆ, ಸುಪ್ರೀಂ ಕೋರ್ಟ್ ಕದ ತಟ್ಟಿದ ಅರವಿಂದ್ ಕೇಜ್ರಿವಾಲ್
ನವದೆಹಲಿ, ಜೂನ್.23: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಪರ ಬರಲು ಪ್ರಯತ್ನ ಪಟ್ಟಷ್ಟು ಅವರಿಗೆ ತಡೆ ಹಾಕಲಾಗುತ್ತಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಇದರ ವಿರುದ್ಧ ಭಾನುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಪರ ವಕೀಲರು ಸೋಮವಾರ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ದೆಹಲಿ ನ್ಯಾಯಾಲಯದಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿಗೆ ಜಾಮೀನು ನೀಡಲಾಗಿತ್ತು. ಆದರೆ ಅವರ ಜಾಮೀನನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತನ್ನ ಆದೇಶ ನೀಡುವವರೆಗೆ ಜಾಮೀನಿಗೆ ತಡೆ ನೀಡಿದೆ.

"ತೀರ್ಪು ಘೋಷಣೆಯಾಗುವವರೆಗೆ, ದೋಷಾರೋಪಣೆ ಮಾಡಲಾದ ಆದೇಶದ ಕಾರ್ಯಾಚರಣೆಯನ್ನು ತಡೆಹಿಡಿಯಲಾಗುತ್ತದೆ" ಎಂದು ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರ ಹೈಕೋರ್ಟ್ ರಜಾಕಾಲದ ಪೀಠವು ಇಡಿ ತಡೆಯಾಜ್ಞೆ ಅರ್ಜಿಯ ಆದೇಶವನ್ನು ಘೋಷಿಸಲು 2-3 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.
ಶುಕ್ರವಾರ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು 'ಲೋಪ್‌ಸೈಡ್' ಮತ್ತು ಏಕಪಕ್ಷೀಯ ಎಂದು ವಾದಿಸಿದ್ದರು.

'ದಾಖಲೆಗಳನ್ನು ಪರಿಗಣಿಸದೆಯೇ ನಿರ್ಧಾರ ಕೈಗೊಳ್ಳಲಾಗಿದೆ. ದಾಖಲೆಗಳನ್ನು ಪರಿಗಣಿಸದೆ ಅವು ಸಂಬಂಧಿತ ಅಥವಾ ಅಪ್ರಸ್ತುತ ಎಂದು ಹೇಗೆ ತೀರ್ಮಾನಿಸುತ್ತೀರಿ ಎಂದು ಇಡಿ ಪರ ವಕೀಲ ರಾಜು ವಾದಿಸಿದ್ದರು. ವಿಚಾರಣಾ ನ್ಯಾಯಾಲಯದ ರಜಾಕಾಲದ ನ್ಯಾಯಾಧೀಶ ನ್ಯಾಯ್ ಬಿಂದು ಅವರು ಗುರುವಾರ ಅರವಿಂದ್ ಕೇಜ್ರಿವಾಲ್ ಅವರಿಗೆ 1 ಲಕ್ಷ ರೂಪಾಯಿ ಜಾಮೀನು ಬಾಂಡ್ ಅನ್ನು ಒದಗಿಸಿ ಜಾಮೀನು ನೀಡಿದ್ದರು. ಜಾಮೀನು ಬಾಂಡ್ ಸಲ್ಲಿಸುವ ಪ್ರಕ್ರಿಯೆಯನ್ನು 48 ಗಂಟೆಗಳ ಕಾಲ ಮುಂದೂಡುವಂತೆ ಇಡಿ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತು. ಈಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಏಜೆನ್ಸಿಯ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ಮಾಡಲಾಗಿದ್ದ ಒಂಬತ್ತು ಸಮನ್ಸ್‌ಗಳನ್ನು ತಪ್ಪಿಸಿದರು ಎಂದು ಆರೋಪಿಸಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 10 ರಂದು ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಬಳಿಕ ಜೂನ್ 2 ರಂದು ಶರಣಾಗಲು ತಿಳಿಸಲಾಯಿತು. ಮುಖ್ಯಮಂತ್ರಿ ಕಚೇರಿ ಮತ್ತು ದೆಹಲಿ ಸಚಿವಾಲಯಕ್ಕೆ ಭೇಟಿ ನೀಡದಂತೆ ಅವರಿಗೆ ಸೂಚನೆ ನೀಡಿತ್ತು. 2022 ರಲ್ಲಿ ಅಬಕಾರಿ ನೀತಿಯನ್ನು ರದ್ದುಗೊಳಿಸಲಾಗಿದೆ.












Click it and Unblock the Notifications