ಮುಗ್ಗರಿಸಿದ ಕೇಜ್ರಿಗೆ ಮತ್ತೆ ತಲೆ ಎತ್ತಿ ನಿಲ್ಲುವುದೇ ಸವಾಲ್: ಸೋಲಿಗೆ ಪ್ರಮುಖ ಕಾರಣಗಳು ಇಲ್ಲಿವೆ
ಬೆಂಗಳೂರು, ಫೆಬ್ರವರಿ, 09: ದೆಹಲಿ ಚುನಾವಣೆ ಫಲಿತಾಂಶದ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದಂಡಯಾತ್ರೆ ಸುಗಮವಾಗಿ ಸಾಗುತ್ತಿರುವ ಲಕ್ಷಣ ಕಾಣಿಸುತ್ತಿದ್ದರೆ, ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು ಹೊರಟ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಮುಗ್ಗರಿಸಿರುವುದು ಗೋಚರಿಸಿದೆ. ಅದರಾಚೆಗೆ ಕಾಂಗ್ರೆಸ್ ಗೆ ಏನೇ ತಂತ್ರ ಮಾಡಿದರೂ ಅದು ಫಲಕೊಡುವಂತೆ ಕಾಣಿಸುತ್ತಿಲ್ಲ.
ಇದೆಲ್ಲದರ ನಡುವೆ ಗೆದ್ದೇ ಗೆಲ್ಲುತ್ತೇವೆ ಎನ್ನುವ ಬಿಜೆಪಿಯ ಹಠ ಗೆದ್ದಿದೆ, ನಮ್ಮನ್ನು ಯಾರಿಗೂ ಸೋಲಿಸಲು ಸಾಧ್ಯವಿಲ್ಲ ಎನ್ನುವ ಎಎಪಿಯ ಅಹಂ ಸೋತಿದೆ. ಸಂತೆ ವೇಳೆಗೆ ಮೂರು ಮೊಳ ನೇಯುವ ಕಾಂಗ್ರೆಸ್ ನ ತಂತ್ರ ವಿಫಲವಾಗಿದೆ. ರಾಜಕೀಯ ನಾಯಕರು ಹೇಳಿದ್ದಕ್ಕೆಲ್ಲ ಶಿಳ್ಳೆ, ಚಪ್ಪಾಳೆ ಹೊಡೆದ ತಕ್ಷಣಕ್ಕೆ ಅದುವೇ ಮತವಾಗಿ ಪರಿವರ್ತನೆಯಾಗಲ್ಲ. ಜೊತೆಗೆ ಅದನ್ನೇ ಸತ್ಯವೆಂದು ಜನ ನಂಬುತ್ತಾರೆ ಎನ್ನುವುದು ಕೂಡ ಸುಳ್ಳೇ.

ಇವತ್ತಿನ ಮತದಾರರು ವಿದ್ಯಾವಂತರಾಗಿದ್ದಾರೆ, ಬುದ್ದಿವಂತರಾಗಿದ್ದಾರೆ. ಹೀಗಾಗಿ ರಾಜಕಾರಣಿಗಳು ಏನೇ ಮಾಡಿದರೂ ಅದೆಲ್ಲವನ್ನು ಒಪ್ಪಿಕೊಂಡು ಮತ ಹಾಕುವುದಿಲ್ಲ. ಜೊತೆಗೆ ಅದನ್ನು ವಿಮರ್ಶಿಸಿ ಯಾವುದು ತಪ್ಪು? ಯಾವುದು ಸರಿ? ಎಂಬುದನ್ನು ಅರಿತು ತಮಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನೇ ಮಾಡುತ್ತಾರೆ ಎಂಬುದು ಈ ಬಾರಿಯ ದೆಹಲಿ ಚುನಾವಣೆ ಮೂಲಕ ಜನ ತೋರಿಸಿಕೊಟ್ಟಿದ್ದಾರೆ. ತಾವು ಏನೇ ಮಾಡಿದರೂ ಮತದಾರರು ನಮ್ಮನ್ನು ಕೈ ಹಿಡಿಯುತ್ತಾರೆ ಎಂಬ ಎಎಪಿ ನಾಯಕರಲ್ಲಿದ್ದ ತಪ್ಪು ಕಲ್ಪನೆಗೆ ಉತ್ತರ ಸಿಕ್ಕಂತಾಗಿದೆ.
ಭ್ರಷ್ಟಾಚಾರವನ್ನು ಜನ ಯಾವತ್ತಿಗೂ ಸಹಿಸಲ್ಲ ಎಂಬುದನ್ನು ಎಎಪಿ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸೋಲುಣಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ. ಇಲ್ಲಿ ಬಿಜೆಪಿ ಗೆಲುವಿಗೆ ಏನೆಲ್ಲ ಬೇಕೋ ಅದೆಲ್ಲವನ್ನು ಮಾಡಿದೆ. 27 ವರ್ಷಗಳ ಕಾಲ ತಳಮಟ್ಟದಿಂದಲೇ ಪಕ್ಷವನ್ನು ಬಲಪಡಿಸುತ್ತಾ ಬಂದಿದ್ದಾರೆ. ಪ್ರತಿ ಚುನಾವಣೆಯ ಸೋಲನ್ನು ಸವಾಲ್ ಆಗಿ ತೆಗೆದುಕೊಂಡೇ ಪಕ್ಷಸಂಘಟನೆ ಮಾಡಿದ್ದು ಇವತ್ತು ಗೆಲುವಿಗೆ ಕಾರಣವಾಗಿದೆ.
ಜನರ ಬಯಕೆಗೆ ಎಳ್ಳುನೀರು ಬಿಟ್ಟ ಕೇಜ್ರಿವಾಲ್: ಇಲ್ಲಿ ಜನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಲೇ ಬಂದಿದ್ದಾರೆ ಎನ್ನುವುದಕ್ಕೆ ಲೋಕಸಭೆಯಲ್ಲಿ ಎಲ್ಲಾ 7 ಸ್ಥಾನಗಳನ್ನು ಗೆದ್ದಿರುವುದೇ ಸಾಕ್ಷಿಯಾಗಿದೆ. ಜೊತೆಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಪ್ರಾಬಲ್ಯ ಸಾಧಿಸುತ್ತಿತ್ತು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಅರವಿಂದ್ ಕೇಜ್ರಿವಾಲ್ ಮೇಲೆ ಜನರು ಇಟ್ಟಿದ್ದ ಭರವಸೆಯೇ ಕಾರಣವಾಗಿತ್ತು. ಆದರೆ ಕೇಜ್ರಿವಾಲ್ ಮತ್ತು ಅವರ ಸಂಪುಟದ ಸದಸ್ಯರ ನಡೆ ಜನರಲ್ಲಿ ಭ್ರಮನಿರಸನ ಮೂಡಿಸಿತ್ತು. ಅದರ ಪರಿಣಾಮಗಳು ಸೋಲನ್ನು ಎಳೆದು ತರುವಂತಾಯಿತು.
ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯರ ನಡುವೆ ನಿಂತು ಹೋರಾಟ ಮಾಡಿ, ಎಎಪಿ ಪಕ್ಷ ಕಟ್ಟಿ ಬೆಳೆಸಿದ್ದ ಕೇಜ್ರಿವಾಲ್ ಅಧಿಕಾರಕ್ಕೆ ಬಂದ ನಂತರ ಹೋರಾಟವನ್ನು ಮರೆತು ಬಿಟ್ಟರು. ಕೇವಲ ಆರೋಪ ಮಾಡುವುದರಲ್ಲಿಯೇ ಸಮಯ ಕಳೆದು ಬಿಟ್ಟರು. ಉಚಿತ ಯೋಜನೆಗಳನ್ನು ಜಾರಿಗೆ ತಂದರಾದರೂ ಅದರಿಂದ ಯಶಸ್ಸು ಕಾಣಲು ಸಾಧ್ಯವಾಗಲೇ ಇಲ್ಲ.
ಜೊತೆಗೆ ದೆಹಲಿ ಮಟ್ಟದಲ್ಲಿದ್ದ ಎಎಪಿಯನ್ನು ದೆಹಲಿ ಆಚೆಗೂ ಬೆಳೆಸಲು ಮುಂದಾದರು. ಆ ಮೂಲಕ ಪ್ರಧಾನಿ ಹುದ್ದೆಯ ಕನಸು ಕಾಣಲು ಆರಂಭಿಸಿದರು. ಒಬ್ಬ ಹೋರಾಟಗಾರನಾಗಿರ ಬೇಕು, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರಬೇಕು, ಅದರಿಂದ ಜನಸಾಮಾನ್ಯರಿಗೆ ಒಳಿತಾಗಬೇಕೆಂದು ಜನ ಬಯಸಿದ್ದರು.
ಮೂಲ ಉದ್ದೇಶ ಮರೆತ ಎಎಪಿ ನಾಯಕರು: ಕಳೆದ ಹತ್ತು ವರ್ಷಗಳಲ್ಲಿ ಕೇಜ್ರಿವಾಲ್ ಸೇರಿದಂತೆ ಎಎಪಿ ನಾಯಕರು ತಮ್ಮ ಉದ್ದೇಶವನ್ನು ಮರೆತು ಬಿಟ್ಟರು. ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸುವ ಸಲುವಾಗಿ ಸಂಪನ್ಮೂಲ ಕ್ರೋಢೀಕರಿಸಲು ಮುಂದಾದರು. ಅದಕ್ಕಾಗಿ ಮೈಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಎಳೆದುಕೊಂಡರು. ಜನ ಸಾಮಾನ್ಯರ ನಡುವೆ ಬರಲೇ ಇಲ್ಲ. ಸರಳತೆ ಗೋಲಿ ಹೊಡೆದು ಐಷಾರಾಮಿ ಬದುಕಿಗೆ ಹೊರಳಿದರು.
ಇದರ ನಡುವೆ ಭ್ರಷ್ಟಾಚಾರದ ಆರೋಪ ಹೊತ್ತು ಜೈಲ್ ಸೇರಿದ್ದಲ್ಲದೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮಟ್ಟಕ್ಕೆ ಹೋದರು. ಆರಂಭದಿಂದ ಅವರನ್ನು ಮೆಚ್ಚಿ ಅವರಿಗೆ ಜೈ ಎಂದವರಿಗೆ ಇದು ಆಘಾತ ನೀಡಿತ್ತು. ಕೇಜ್ರಿವಾಲ್ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಪಕ್ಷವನ್ನು ವಿಸ್ತರಣೆ ಮಾಡಿದ್ದು, ಪಂಜಾಬ್ ನಲ್ಲಿ ಕಾಂಗ್ರೆಸ್ ಅನ್ನು ಧೂಳಿಪಟ ಮಾಡಿ ಅಧಿಕಾರ ಹಿಡಿಯುವ ಮಟ್ಟಕ್ಕೆ ಹೋಗಿದ್ದು ನಿಜಕ್ಕೂ ಸಾಧನೆಯೇ ಸರಿ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನು ಎಂದರೆ ಎಎಪಿ ವಿಸ್ತರಿಸುತ್ತಾ ಹೋದಂತೆಲ್ಲ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಲೇ ಹೋಯಿತು ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ದೆಹಲಿ ಮತ್ತು ಪಂಜಾಬ್ ಎರಡು ರಾಜ್ಯದಲ್ಲೂ ಎಎಪಿ ಕಾಂಗ್ರೆಸ್‌ನಿಂದಲೇ ಅಧಿಕಾರವನ್ನು ಕಿತ್ತು ಕೊಂಡಿದ್ದು ಎನ್ನುವುದು ನಮ್ಮ ಮುಂದಿರುವ ಸತ್ಯ.
ಇನ್ಮುಂದೆ ಕೇಜ್ರಿವಾಲ್‌ಗೆ ಅಗ್ನಿಪರೀಕ್ಷೆ: ಇವತ್ತು ದೆಹಲಿಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಪಡೆದುಕೊಂಡಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್ ಆಗಿದೆ. ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಎಎಪಿ ಅಭ್ಯರ್ಥಿಯ ಮತವನ್ನು ಕಿತ್ತು ಹಾಕಿದೆ. ಹೀಗಾಗಿ ಬಿಜೆಪಿಗೆ ಸುಲಭ ಜಯವಾಗಿದೆ. ಈ ಚುನಾವಣೆಯ ಬಳಿಕ ಕಾಂಗ್ರೆಸ್ ಮತ್ತು ಎಎಪಿ ಒಂದಾಗಿ ಇಂಡಿಕೂಟದಲ್ಲಿ ಮುನ್ನೆಡೆಯುವುದು ಕಷ್ಟಸಾಧ್ಯವಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ನೇರವಾಗಿ ಕೇಜ್ರಿವಾಲ್ ಅವರನ್ನೇ ಟಾರ್ಗೆಟ್ ಮಾಡಿದ ಕಾರಣದಿಂದಾಗಿ ಸೋಲು ಕಾಣುವಂತಾಗಿದೆ. ಹೋರಾಟದ ಮೂಲಕ ಮುನ್ನಲೆಗೆ ಬಂದು ಪಕ್ಷ ಕಟ್ಟಿ ಸೋಲಿಲ್ಲದ ಸರದಾರನಂತೆ ವಿಜೃಂಭಿಸಿದ ನಾಯಕ ಇಂತಹ ಸೋಲನ್ನು ಅರಗಿಸಿಕೊಳ್ಳುವುದು ಸುಲಭವೇನಲ್ಲ. ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳು ಒಮ್ಮೆ ಮುಗ್ಗರಿಸಿದರೆ ಮತ್ತೆ ತಲೆ ಎತ್ತುವುದು ಅಷ್ಟೊಂದು ಸುಲಭವಲ್ಲ. ಇದೀಗ ಕೇಜ್ರಿವಾಲ್ ಗೆ ಅಗ್ನಿಪರೀಕ್ಷೆ ಶುರುವಾಗಿದೆ. ಅದನ್ನು ನಿಭಾಯಿಸಿಕೊಂಡು ಮತ್ತೆ ಹೇಗೆ ಮೇಲೆದ್ದು ನಿಲ್ಲುತ್ತಾರೆ ಎಂಬುದೇ ಮುಖ್ಯವಾಗಿದೆ. ಅಧಿಕಾರ ಕಳೆದುಕೊಂಡ ಮೇಲೆ ಪಕ್ಷವನ್ನು ಕಟ್ಟಿ ಬೆಳೆಸುವುದು ಸುಲಭವಲ್ಲ. ಜನ ಕೂಡ ಅಷ್ಟು ಸುಲಭವಾಗಿ ಮತ್ತೆ ಒಪ್ಪಿಕೊಳ್ಳಲಾರರು. ಆದ್ದರಿಂದ ಮುಂದೆ ಎಎಪಿಯ ಕಥೆ ಏನು? ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications