Delhi Election: ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿ ಚುನಾವಣಾ ಸಮಿತಿಗೆ ಪತ್ರ ಬರೆದ ಅರವಿಂದ್ ಕೇಜ್ರಿವಾಲ್
ದೆಹಲಿ ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು ಆರೋಪ ಪ್ರತ್ಯಾರೋಪ ಹೆಚ್ಚುತ್ತಿದೆ. ಬಿಜೆಪಿ ಮತ್ತು ಎಎಪಿ ನಡುವೆ ಪೈಪೋಟಿ ಹೆಚ್ಚಾಗುತ್ತಿದ್ದು, ಇದೀಗ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶನಿವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ದೆಹಲಿಯ ಮತದಾರರ ಪಟ್ಟಿಯನ್ನು ತಿರುಚುವ ಕೆಲಸ ಮಾಡುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಬಿಜೆಪಿಯು ದೆಹಲಿಯಲ್ಲಿ ವಾಸಿಸುತ್ತಿರುವ ಪಕ್ಷದ ಸಂಸದರು ಮತ್ತು ಸಚಿವರ ವಿಳಾಸಗಳನ್ನು ಬಳಸಿಕೊಂಡು ದೇಶಾದ್ಯಂತ ಹಲವು ಮತಗಳನ್ನು ನವದೆಹಲಿಗೆ ವರ್ಗಾವಣೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ದೇಶದ ವಿವಿಧ ಭಾಗಗಳಿಂದ ದೆಹಲಿಗೆ ವರ್ಗಾಯಿಸಲಾಗಿದೆ ಎನ್ನಲಾಗಿರುವ ಹಲವು ವಿಳಾಸಗಳ ಪಟ್ಟಿಯನ್ನು ಅವರು ಹಂಚಿಕೊಂಡಿದ್ದಾರೆ. ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನೇ ಬುಡಮೇಲು ಮಾಡುವ ಇಂತಹ ಪ್ರಯತ್ನಗಳನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಕೇಜ್ರಿವಾಲ್ ದೂರಿನಲ್ಲಿ ಏನಿದೆ?
ಬಿಜೆಪಿ ಅಭ್ಯರ್ಥಿಯಾಗಿರುವ ಪ್ರವೇಶ್ ವರ್ಮಾ ಅವರ ನಿವಾಸದ ವಿಳಾಸಕ್ಕೆ ಬದಲಾವಣೆ ಮಾಡುವಂತೆ 33 ಮತದಾರರು ಅರ್ಜಿ ಸಲ್ಲಿಸಿದ್ದಾರೆ. ರಾತ್ರೋರಾತ್ರಿ 33 ಜನ ದೇಶದ ವಿವಿಧ ಭಾಗಗಳಿಂದ ತಮ್ಮ ವಾಸಸ್ಥಳವನ್ನು ದೆಹಲಿಯ ಪ್ರವೇಶ್ ವರ್ಮಾ ಅವರ ನಿವಾಸಕ್ಕೆ ಬದಲಿಸಿದ್ದಾರೆ ಎಂದು ನಾವು ನಂಬಬೇಕೆ ಎಂದು ದೂರಿನಲ್ಲಿ ಪ್ರಶ್ನಿಸಿದ್ದಾರೆ.
ನವದೆಹಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರವೇಶ್ ವರ್ಮಾ ಅವರ ಆಜ್ಞೆಯ ಮೇರೆಗೆ ಮತದಾರರ ಪಟ್ಟಿಯನ್ನು ತಿರುಚಿದ್ದರೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅವರು ಚುನಾವಣೆಯಿಂದ ಸ್ಪರ್ಧಿಸುವುದನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿಯ ಉನ್ನತ ಮಟ್ಟದ ನಾಯಕರ ಗಮನಕ್ಕೆ ಬಾರದೆ ಇಷ್ಟೊಂದು ಸಂಖ್ಯೆಯ ಮತದಾರರು ಈ ನಿವಾಸಗಳಿಗೆ ತಮ್ಮ ವಾಸಸ್ಥಳ ಬದಲಾಯಿಸಲು ಹೇಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಊಹಿಸಲೂ ಸಾಧ್ಯವಿಲ್ಲ. ಇದು ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಮತದಾರರ ಪಟ್ಟಿಯನ್ನು ಬದಲಾವಣೆ ಮಾಡುವ ಸ್ಪಷ್ಟ ಪ್ರಯತ್ನದಂತೆ ಕಾಣಿಸುತ್ತಿದೆ ಎಂದು ಅವರು ಹೇಳಿದರು.
ಎಎಪಿ ಸಂಸದರ ಆರೋಪ
ನವದೆಹಲಿಯ ಜಿಲ್ಲಾ ಚುನಾವಣಾ ಅಧಿಕಾರಿ ತಮ್ಮ ಪತ್ನಿಯ ಹೆಸರು ಸೇರಿದಂತೆ ಹಲವು ಹೆಸರುಗಳನ್ನು ಚುನಾವಣಾ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಆರೋಪಿಸಿದ ಕೆಲವೇ ದಿನಗಳಲ್ಲಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.
70 ಸದಸ್ಯರ ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 5 ರಂದು ನಡೆಯಲಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ. ಎರಡು ಬಾರಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ ಮೂರನೇ ಬಾರಿ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದೆ.












Click it and Unblock the Notifications