ಆಪರೇಷನ್ ಸಿಂಧೂರದ ವೇಳೆ ಗೋಲ್ಡನ್ ಟೆಂಪಲ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆ ಮಾಡಿರಲಿಲ್ಲ ಎಂದ ಸೇನೆ
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪಾಕಿಸ್ತಾನದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಎದುರಿಸಲು ಅಮೃತಸರದ ಗೋಲ್ಡನ್ ಟೆಂಪಲ್ ಒಳಗೆ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ ಎನ್ನುವ ವದಂತಿಗಳನ್ನು ಭಾರತೀಯ ಸೇನೆ ನಿರಾಕರಿಸಿದೆ.
ಗೋಲ್ಡನ್ ಟೆಂಪಲ್‌ನಲ್ಲಿ ಎಡಿ ಗನ್‌ಗಳ ನಿಯೋಜನೆಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮ ವರದಿಗಳು ಪ್ರಸಾರವಾಗುತ್ತಿವೆ. ಶ್ರೀ ದರ್ಬಾರ್ ಸಾಹಿಬ್ ಅಮೃತಸರ (ಗೋಲ್ಡನ್ ಟೆಂಪಲ್) ಆವರಣದಲ್ಲಿ ಯಾವುದೇ ಎಡಿ (Anti Drone) ಗನ್‌ಗಳು ಅಥವಾ ಯಾವುದೇ ಇತರ ಎಡಿ ಸಂಪನ್ಮೂಲಗಳನ್ನು ನಿಯೋಜಿಸಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಭಾರತೀಯ ಸೇನೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಪ್ರಾರಂಭಿಸಿದ ಆಪರೇಷನ್ ಸಿಂಧೂರ್‌ಗೆ ಪ್ರತಿಕ್ರಿಯೆಯಾಗಿ ಅಮೃತಸರವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಡ್ರೋನ್‌ಗಳು ಮತ್ತು ಸ್ಪೋಟಕಗಳು ಹಲವು ಬಾರಿ ದಾಳಿ ಮಾಡಿದ್ದವು.
ವದಂತಿಗಳ ಬಗ್ಗೆ ಸ್ಪಷ್ಟೀಕರಣ
ಗೋಲ್ಡನ್ ಟೆಂಪಲ್‌ನ ಮುಖ್ಯ ಗ್ರಂಥಿ ಸಿಂಗ್ ಸಾಹಿಬ್ ಗಿಯಾನಿ ರಘುಬೀರ್ ಸಿಂಗ್ ಸಹ ದೇವಾಲಯ ಆವರಣದಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳ ನಿಯೋಜನೆಯನ್ನು ತಳ್ಳಿಹಾಕಿದರು. "ಭಾರತೀಯ ಸೇನೆ ನಮ್ಮನ್ನು ಸಂಪರ್ಕಿಸಿದೆ ಎಂಬ ಮಾಹಿತಿ ನನಗಿಲ್ಲ. ನಾನು ರಜೆಯಲ್ಲಿದ್ದೆ ಮತ್ತು ವಿದೇಶಕ್ಕೆ ಪ್ರಯಾಣಿಸುತ್ತಿದ್ದೆ. ಈ ವಿಷಯದ ಬಗ್ಗೆ ನಾನು ಸಂಪೂರ್ಣ ತನಿಖೆಯನ್ನು ಬಯಸುತ್ತೇನೆ. ಇದರ ಹಿಂದೆ ಭಾರತೀಯ ಸೇನೆಯ ನಿಜವಾದ ಉದ್ದೇಶ ಏನೆಂದು ಸ್ಪಷ್ಟಪಡಿಸಬೇಕು" ಎಂದು ಹೇಳಿದ್ದಾರೆ.
ಪವಿತ್ರ ಆವರಣದಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಲು ಸ್ವರ್ಣ ಮಂದಿರದ ಮುಖ್ಯ ಗ್ರಂಥಿ ನಮಗೆ ಅನುಮತಿ ನೀಡಿದ್ದಾರೆ ಎಂದು ವಾಯು ರಕ್ಷಣಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸುಮರ್ ಇವಾನ್ ಡಿ'ಕುನ್ಹಾ ಹೇಳಿದ್ದಾರೆ ಎಂದು ಹಲವು ವರದಿಗಳು ತಿಳಿಸಿದ್ದರಿಂದ ವಿವಾದ ಶುರುವಾಗಿತ್ತು.
"ಸುವರ್ಣ ಮಂದಿರದ ಮುಖ್ಯ ಗ್ರಂಥಿ ನಮ್ಮ ಬಂದೂಕುಗಳನ್ನು ನಿಯೋಜಿಸಲು ನಮಗೆ ಅವಕಾಶ ಮಾಡಿಕೊಟ್ಟಿದ್ದು ತುಂಬಾ ಸಂತೋಷವಾಯಿತು. ಡ್ರೋನ್ ಬರುವುದನ್ನು ನಾವು ನೋಡುವಂತೆ ಅವರು ಸ್ವರ್ಣ ಮಂದಿರದ ದೀಪಗಳನ್ನು ಆಫ್ ಮಾಡಿರುವುದು ಬಹುಶಃ ಹಲವು ವರ್ಷಗಳಲ್ಲಿ ಮೊದಲ ಬಾರಿಗೆ ಆಗಿರಬಹುದು" ಎಂದು ಲೆಫ್ಟಿನೆಂಟ್ ಜನರಲ್ ಸುಮರ್ ಇವಾನ್ ಡಿ'ಕುನ್ಹಾ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
15 ನೇ ಪದಾತಿ ದಳದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ ಅವರು ಸ್ವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಸೇನಾ ವಾಯು ರಕ್ಷಣಾ ಗನ್ನರ್‌ಗಳು ಯಶಸ್ವಿಯಾಗಿ ತಡೆಹಿಡಿದಿದ್ದಾರೆ ಎಂದು ಬಹಿರಂಗಪಡಿಸಿದ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿದ ಡಿ'ಕುನ್ಹಾ, ಕಾನೂನುಬದ್ಧ ಮಿಲಿಟರಿ ಗುರಿಗಳ ಅನುಪಸ್ಥಿತಿಯಲ್ಲಿ ಪಾಕಿಸ್ತಾನವು ಗಡಿಯ ಸಮೀಪವಿರುವ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಳ್ಳಬಹುದು ಎಂದು ಭಾರತೀಯ ಸೇನೆಯು ನಿರೀಕ್ಷಿಸಿತ್ತು ಎಂದು ಹೇಳಿದರು.












Click it and Unblock the Notifications