ಹೈದರಾಬಾದ್‌ನಲ್ಲಿ ಪೊಲೀಸರ ಮೇಲೂ ಗುಂಡು ಹಾರಿಸಿದ ಬೀದರ್ ಎಟಿಎಂ ದರೋಡೆಕೋರರು
ಹಾಡು ಹಗಲೆ ಬೀದರ್‌ನಲ್ಲಿ ಎಸ್‌ಬಿಐನ ಬ್ಯಾಂಕ್‌ನ ಎಟಿಎಂನಲ್ಲಿ ಹಣ ಜಮೆ ಮಾಡಲು ಬಂದಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ ದರೋಡೆಕೋರರು ಇಬ್ಬರನ್ನು ಕೊಂದು 93 ಲಕ್ಷ ರೂಪಾಯಿ ಎಗರಿಸಿದ್ದ ಖದೀಮರು ಇದೀಗ ಹೈದರಾಬಾದ್‌ನಲ್ಲಿ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಅಂತಾರಾಜ್ಯ ದರೋಡೆಕೋರರ ಕೃತ್ಯ ಕಂಡು ಎರಡೂ ರಾಜ್ಯದ ಜನ ಬೆಚ್ಚಿಬಿದ್ದಿದ್ದಾರೆ.
ಬೀದರ್ ಪೊಲೀಸರು ಅಪರಾಧಿಗಳನ್ನು ಹಿಡಿಯಲು ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಬೀದರ್ ನಲ್ಲಿ ದರೋಡೆ ಮಾಡಿರುವ ದುಷ್ಕರ್ಮಿಗಳು ಇಲ್ಲಿಂದ ತಪ್ಪಿಸಿಕೊಂಡ ಬಳಿಕ ಹೈದರಾಬಾದ್ ತಲುಪಿದ್ದಾರೆ. ಶಸ್ತ್ರಸಜ್ಜಿತ ದರೋಡೆಕೋರರು ಹೈದರಾಬಾದ್‌ನ ಅಫ್ಜಲ್‌ಗಂಜ್‌ನಲ್ಲಿ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾರೆ.

ಜನನಿಬಿಡ ಪ್ರದೇಶದಲ್ಲೇ ಪೊಲೀಸರ ಮೇಲೆ ಗುಂಡು ಹಾರಿಸಿದ ಘಟನೆ ಈ ಪ್ರದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಬೀದರ್ ನಿಂದ ಓಡಿಹೋದ ಕಳ್ಳರನ್ನು ಹಿಡಿಯಲು ಪೊಲೀಸ್ ತಂಡಗಳು ಬೆನ್ನು ಬಿದ್ದಿದ್ದು ಹೈದರಾಬಾದ್‌ನ ಅಫ್ಜಲ್‌ಗಂಜ್‌ನಲ್ಲಿ ಮುಖಾಮುಖಿಯಾಗಿದ್ದು ಗುಂಡಿನ ದಾಳಿ ನಡೆದಿದೆ.
ದರೋಡೆ ಮಾಡಿದ್ದ ತಂಡದ ಇಬ್ಬರು ಸದಸ್ಯರನ್ನು ಹೈದರಾಬಾದ್‌ನ ಅಫ್ಜಲ್‌ಗಂಜ್‌ನಲ್ಲಿ ಗುರುತಿಸಲಾಗಿದ್ದು ಪೊಲೀಸರು ಅವರನ್ನು ಹಿಡಿಯಲು ಯತ್ನಿಸಿದಾಗ ಒಬ್ಬ ದುಷ್ಕರ್ಮಿ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಡಹಗಲೇ ದರೋಡೆ
ಬೀದರ್ ನಗರದಲ್ಲಿ ಗುರುವಾರ ಬೆಳಗ್ಗೆ ನಡೆದ ಶೂಟೌಟ್ ವಿಚಾರ ತಿಳಿದು ರಾಜ್ಯದ ಜನತೆಯೇ ಬೆಚ್ಚಿಬಿದ್ದಿದ್ದಾರೆ. ಎಸ್‌ಬಿಐ ಮುಖ್ಯ ಕಚೇರಿ ಎದುರಿನಲ್ಲಿ ಗುಂಡಿನ ದಾಳಿ ನಡೆದಿದೆ. ಸಮೀಪದಲ್ಲೇ ಜಿಲ್ಲಾಧಿಕಾರಿಗಳ ಕಚೇರಿಯೂ ಇದ್ದು, ಆದರೂ ದರೋಡೆಕೋರರು ನಿರ್ಭಯವಾಗಿ ನಡುರಸ್ತೆಯಲ್ಲಿ ಪಿಸ್ತೂಲ್ ಹಿಡಿದು ಇಬ್ಬರು ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 93 ಲಕ್ಷ ರೂಪಾಯಿ ಹಣ ಇದ್ದ ಪೆಟ್ಟಿಗೆಯನ್ನು ತೆಗೆದುಕೊಂಡಿ ಪರಾರಿಯಾಗಿದ್ದರು.
ನೂರಾರು ಜನ ಈ ಭೀಕರ ದೃಶ್ಯವನ್ನು ಮೂಕ ಪ್ರೇಕ್ಷಕರಂತೆ ನೋಡಿದರು. ದುಷ್ಕರ್ಮಿಗಳ ಕೈಯಲ್ಲಿ ಪಿಸ್ತೂಲ್ ಇರುವ ಕಾರಣ ಜನ ಭಯಬೀತರಾಗಿದ್ದರು. ಘಟನೆಯನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ದರೋಡೆಕೋರರನ್ನು ಬಂಧಿಸಲು ವಿಶೇಷ ತಂಡಗಳನ್ನು ರಚನೆ ಮಾಡಿದೆ.
ಬೀದರ್ ಘಟನೆಗೆ ವಿಪಕ್ಷಗಳು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಕಿಡಿಕಾರಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಘಟನೆಯನ್ನು ಖಂಡಿಸಿದ್ದು, ರಾಜಯದಲ್ಲಿ ಕಾನೂನು ಸುವ್ಯವಸ್ಥೆ ತಳಕಚ್ಚಿದ್ದು, ದುಷ್ಟ ಶಕ್ತಿಗಳಿಗೆ ಉತ್ತೇಜನ ನೀಡುತ್ತಿರುವುದು ಇಂತಹ ಕ್ರಿಮಿನಲ್ ಅಪರಾಧಗಳು, ಮಾಫಿಯಾಗಳು, ಅಟ್ಟಹಾಸ ಮೆರೆಯುತ್ತಿವೆ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ಕೊಡಿಸುವಂತೆ ಆಗ್ರಹಿಸಿದ್ದಾರೆ.












Click it and Unblock the Notifications