ಹಿಂದೆಂದೂ ಕಾಣದಷ್ಟು ಕನಿಷ್ಟ ಮಟ್ಟಕ್ಕೆ ಕುಸಿದ ಪ್ರಧಾನಿ ಮೋದಿ ಜನಪ್ರಿಯತೆ: ಸರ್ವೆಯಲ್ಲಿ ಬಹಿರಂಗ
ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲೇ ಸಾಗುತ್ತಿದ್ದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಕೊರೊನಾ ವೈರಸ್ ಹಿನ್ನಡೆಯುಂಟು ಮಾಡಿದೆ. ಕೊರೊನಾ ವೈರಸ್‌ನ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ಸರ್ಕಾರದ ಕೆಲ ನಡೆಗಳು ಕಾರಣವಾಯಿತು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ.
ಈ ಮಧ್ಯೆ ಯುನೈಟೆಡ್ ಸ್ಟೇಟ್ಸ್‌ನ ಸಂಸ್ಥೆಯೊಂದು ನಡೆಸಿದ ಸರ್ವೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಬಹಿರಂಗಪಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮೇಲೆ ಜನರ ಸದಾಭಿಪ್ರಾಯದ ಪ್ರಮಾಣ ಹಿಂದೆಂದಿಗಿಂತಲೂ ಕನಿಷ್ಟ ಮಟ್ಟವನ್ನು ತಲುಪಿದೆ ಎಂದು ಈ ಅಧ್ಯಯನ ಹೇಳುತ್ತಿದೆ.

ಯುಎಸ್ ಮೂಲದ ಸಂಸ್ಥೆಯ ಸರ್ವೇ
'ಮಾರ್ನಿಂಗ್ ಕನ್ಸಲ್ಟ್' ಎಂಬ ಯುಎಸ್ ಮೂಲದ ಅಂಕಿಅಂಶಗಳ ಗುಪ್ತಚರ ಸಂಸ್ಥೆ ಈ ಸರ್ವೆಯನ್ನು ನಡೆಸಿದೆ. ಭಾರತದಲ್ಲಿ ಕೊರೊನಾ ವೈರಸ್‌ಗಳ ಪ್ರಕರಣ ಕಳೆದ ಒಂದು ವಾರದಲ್ಲಿ 25 ಮಿಲಿಯನ್‌ಗೆ ಹೆಚ್ಚಾಗಿರುವುದು ಎರಡನೇ ಅಲೆಯ ಕೊರೊನಾ ವೈರಸ್ ತಡೆಗೆ ಭಾರತ ಸೂಕ್ತ ಸಿದ್ಧತೆಯನ್ನು ಮಾಡಿಕೊಂಡಿಲ್ಲ ಎಂಬುದನ್ನು ಬಹಿರಂಗಪಡಿಸುತ್ತದೆ. ಇದು ಮೋದಿ ಜನಪ್ರಿಯತೆ ಕುಸಿಯುವಂತೆ ಮಾಡಿದೆ ಎಂದು ಈ ವರದಿ ಹೇಳಿದೆ.

ಕನಿಷ್ಟ ಅಂಕಪಡೆದ ಮೋದಿ
2019ರಿಂದ ವಿಶ್ವದ ಅಗ್ರನಾಯಕರ ಜನಪ್ರಿಯತೆಯನ್ನು ಈ ಸಂಸ್ಥೆ ಲೆಕ್ಕಾಚಾರ ಮಾಡುತ್ತಿದೆ. ಈ ವಾರದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಒಟ್ಟಾರೆ ಅಂಕಗಳಲ್ಲಿ 63 ಶೇಕಡಾ ಪಡೆದುಕೊಂಡಿದ್ದಾರೆ. ಇದು ಈ ಸಂಸ್ಥೆ ಲೆಕ್ಕಾಚಾರವನ್ನು ಆರಂಭಿಸಿದ ನಂತರ ಭಾರತದ ಪ್ರಧಾನಿ ಪಡೆದುಕೊಂಡ ಕನಿಷ್ಟ ಪ್ರಮಾಣವಾಗಿದೆ ಎಂದು ತಿಳಿಸಿದೆ.

ಜನಪ್ರಿಯತೆ ಕುಸಿಯಲು ಕಾರಣ
ರಾಷ್ಟ್ರದ ರಾಜಧಾನಿ ದೆಹಲಿಯಂತಾ ದೊಡ್ಡ ನಗರದಲ್ಲಿ ಜನರು ಆಸ್ಪತ್ರೆಯಲ್ಲಿ ಬೆಡ್, ಆಮ್ಲಜನಕ ಹಾಗೂ ವೈದ್ಯಕೀಯ ಸೌಲಭ್ಯಗಳ ದೊಡ್ಡ ಕೊರತೆಯನ್ನು ಅನುಭವಿಸಿತು. ಪಾರ್ಕಿಂಗ್ ಪ್ರದೇಶಗಳಲ್ಲಿಯೇ ಜನರು ಉಸಿರು ಚೆಲ್ಲಿದ ಘಟನೆಗಳು ನಡೆದಿತ್ತು. ಈ ಭೀಕರ ಕಾಯಿಲೆಯಿಂದ ಮೃತಪಟ್ಟ ಜನರ ಮೃತದೇಹಗಳು ಶವಾಗಾರದಲ್ಲಿ, ಸ್ಮಶಾನಗಳಲ್ಲಿ ತುಂಬಿದ ಪರಿಣಾಮವಾಗಿ ಜನರ ಆಕ್ರೋಶಗಳು ಸಾಮಾಜಿಕ ಜಾಲತಾಣದಲ್ಲಿ ಕಟ್ಟೆಯೊಡೆದಿತ್ತು. ಇದೆಲ್ಲವೂ ಪ್ರಧಾನಿ ಮೋದಿ ಜನಪ್ರಿಯತೆ ಕುಸಿತಕ್ಕೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗಿದೆ.

ಸಾವಿನ ಸಂಖ್ಯೆಯಲ್ಲಿ ದಾಖಲೆ
ಸದ್ಯ ದೇಶದಲ್ಲಿ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ ಕೆಳಮುಖವಾಗಿ ಸಾಗುತ್ತಿದೆ. ಆದರೆ ನಿತ್ಯ ಸಾವಿನ ಅಂಕಿಅಂಶಗಳಲ್ಲಿ ಪ್ರತಿ ದಿನವೂ ದಾಖಲೆಯನ್ನು ಬರೆಯುತ್ತಿದೆ. ನಗರಗಳ ನಂತರ ಈಗ ಗ್ರಾಮೀಣ ಭಾಗಗಳಲ್ಲಿ ವೈರಸ್‌ನ ಅಟ್ಟಹಾಸ ಹೆಚ್ಚಾಗುತ್ತಿರುವುದು ಮತ್ತಷ್ಟು ಆತಂಕ ಹೆಚ್ಚುವಂತೆ ಮಾಡಿದೆ.












Click it and Unblock the Notifications