ಮತ್ತೆ ಉಗ್ರರ ದಾಳಿ : ಜಮ್ಮುನಲ್ಲಿ ಹೈ ಅಲರ್ಟ್
ಶ್ರೀನಗರ, ಸೆ. 28 : ಭಾರತ-ಪಾಕ್ ಗಡಿಯಲ್ಲಿ ಭಾರತೀಯ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ 12 ಜನರನ್ನು ಭಯೋತ್ಪಾದಕರು ಹತ್ಯೆಗೈದ ಬೆನ್ನಲ್ಲೇ ಶ್ರೀನಗರದಲ್ಲಿ ಶಂಕಿತ ಉಗ್ರರಿಂದ ಮತ್ತೊಂದು ದಾಳಿ ಶನಿವಾರ ಮಧ್ಯಾಹ್ನ ನಡೆದಿದೆ.
ಶ್ರೀನಗರದ ರಾವಲ್ಪೋರಾ ಎಂಬ ಪ್ರದೇಶದ ಮಾರುಕಟ್ಟೆಯಲ್ಲಿ ಸ್ಕೂಟರಲ್ಲಿ ಬಂದ ಉಗ್ರನೊಬ್ಬ ಗುಂಡಿನ ಸುರಿಮಳೆಗೈದಿರುವ ವರದಿ ಬಂದಿದೆ. ಆತನಿಗಾಗಿ ಭಾರತೀಯ ಸೇನೆ ಮತ್ತು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಒಟ್ಟು 10ರಿಂದ 15 ಸುತ್ತು ಗುಂಡು ಹಾರಿಸಲಾಗಿದ್ದು, ಓರ್ವ ನಾಗರಿಕ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು ಸೆ.26ರಂದು ನಡೆದ ದಾಳಿಯ ಸನಿಹದಲ್ಲೇ ಇರುವ ಶಾಲೆಯ ಬಳಿ ಶಂಕಿತ ಉಗ್ರರು, ಸೇನಾ ಸಮವಸ್ತ್ರದಲ್ಲಿ ಬಂದು ಅಡುಗೆ ಮಾಡುವವಳನ್ನು, ಶಾಲೆ ಎಷ್ಟೊತ್ತಿಗೆ ಬಿಡುತ್ತದೆ ಎಂಬಿತ್ಯಾದಿ ವಿಚಾರಿಸಿದ್ದಾರೆ. ಅವರ ಕುರಿತು ಶಂಕೆ ವ್ಯಕ್ತವಾಗುತ್ತಿದ್ದಂತೆ ಆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಆಗ ಆ ಪ್ರದೇಶದಲ್ಲಿ ಯಾವುದೇ ಸೇನಾಪಡೆಯನ್ನು ನಿಯೋಜಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೆ ಎಲ್ಲ ಪ್ರದೇಶವನ್ನು ಸೇನಾಪಡೆ ಮತ್ತು ಪೊಲೀಸರು ಸುತ್ತುವರಿದಿದ್ದು, ಶಂಕಿತ ಉಗ್ರರಿಗಾಗಿ ಬಲೆ ಬೀಸಿದ್ದಾರೆ. ಆ ಶಂಕಿತ ಉಗ್ರರು ಹತ್ತಿರದ ಅರಣ್ಯ ಪ್ರದೇಶದಲ್ಲಿ ಇರಬಹುದು ಎಂದು ಊಹಿಸಲಾಗಿದೆ.
ಗುರುವಾರ, ಸೆ.26ರಂದು ನಾಲ್ವರು ಉಗ್ರರು ಸೇನಾ ಸಮವಸ್ತ್ರ ಧರಿಸಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐವರು ಪೊಲೀಸರು ಸೇರಿದಂತೆ ಒಟ್ಟು ಹನ್ನೆರಡು ಜನರು ಹತರಾಗಿದ್ದರು. ನಂತರ ನಡೆಸಿದ ಪ್ರತಿದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿತ್ತು.
ಅಮೆರಿಕಾದಲ್ಲಿ ಅಧ್ಯಕ್ಷ ಬರಾಕ್ ಒಬಾಮಾರನ್ನು ಭಾರತದ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಭೇಟಿಯಾಗಿ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿದ ಸಂದರ್ಭದಲ್ಲಿಯೇ ಉಗ್ರರಿಂದ ದಾಳಿ ನಡೆದಿದೆ. ಈ ಸಂದರ್ಭದಲ್ಲಿ, ಪಾಕಿ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಶಾಂತಿ ಮಾತುಕತೆಯನ್ನು ಸಿಂಗ್ ಮುಂದುವರಿಸಬೇಕು ಎಂದು ಒಬಾಮಾ ಹೇಳಿದ್ದಾರೆ.












Click it and Unblock the Notifications