ಒಡಿಶಾದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ!
ಭುವನೇಶ್ವರ ನವೆಂಬರ್ 27: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ಕಿಡಿಗೇಡಿಗಳು ಮತ್ತೆ ತಮ್ಮ ಕೃತ್ಯವನ್ನು ಮುಂದುವರೆಸಿದ್ದಾರೆ. ಒಡಿಶಾದ ಧೆಂಕನಲ್-ಅಂಗುಲ್ ರೈಲ್ವೆ ವಿಭಾಗದಲ್ಲಿ ಮೆರಮಂಡಲಿ ಮತ್ತು ಬುಧಪಾಂಕ್ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಇದರಿಂದಾಗಿ ರೂರ್ಕೆಲಾ-ಭುವನೇಶ್ವರ ವಂದೇ ಭಾರತ್ ಎಕ್ಸ್‌ಪ್ರೆಸ್ (20835) ರೈಲಿನ ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್‌ನ ಕಿಟಕಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ ಈ ಘಟನೆಯನ್ನು ಕರ್ತವ್ಯದಲ್ಲಿರುವ ಆರ್‌ಪಿಎಫ್ ಎಸ್ಕಾರ್ಟಿಂಗ್ ಸಿಬ್ಬಂದಿ ವರದಿ ಮಾಡಿದ್ದಾರೆ. ಮಾಹಿತಿಯ ನಂತರ ಪೂರ್ವ ಕರಾವಳಿ ರೈಲ್ವೆ ವಲಯದ (ಇಸಿಒಆರ್) ಭದ್ರತಾ ವಿಭಾಗವು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಗೆ ಎಚ್ಚರಿಕೆ ನೀಡಿದೆ. ಕಟಕ್‌ನಿಂದ ಆರ್‌ಪಿಎಫ್‌ನ ಸಹಾಯಕ ಭದ್ರತಾ ಆಯುಕ್ತರು ಸ್ಥಳಕ್ಕೆ ಧಾವಿಸಿ ಘಟನೆಯನ್ನು ಪರಿಶೀಲಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಕಲ್ಲು ತೂರಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ECoR ನ ಭದ್ರತಾ ವಿಭಾಗಗಳೆರಡೂ ಸ್ಥಳೀಯ ಪೊಲೀಸರೊಂದಿಗೆ ಸಮನ್ವಯದೊಂದಿಗೆ ಅಪರಾಧಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿವೆ ಎಂದು ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಗುರಿಯಾಗಿರುವುದು ದೇಶದಲ್ಲಿ ಇದೇ ಮೊದಲಲ್ಲ. ಇದೇ ರೀತಿಯ ಘಟನೆಗಳು ದೇಶದ ಇತರ ಭಾಗಗಳಲ್ಲಿ ಸಂಭವಿಸಿವೆ. ಆದರೆ ಇದುವರೆಗೆ ಯಾವುದೇ ಘಟನೆಯಲ್ಲಿ ಪ್ರಯಾಣಿಕರಿಗೆ ಹಾನಿಯಾಗಿಲ್ಲ.
ಭಾರತೀಯ ರೈಲ್ವೇ, ವಿಶೇಷವಾಗಿ ಈಸ್ಟ್ ಕೋಸ್ಟ್ ರೈಲ್ವೇ (ECoR) ನಿರಂತರವಾಗಿ ಸಾರ್ವಜನಿಕರಿಗೆ, ವಿಶೇಷವಾಗಿ ರೈಲು ಮಾರ್ಗಗಳ ಪ್ರದೇಶಗಳಲ್ಲಿ ವಾಸಿಸುವವರಿಗೆ, ಪ್ರಯಾಣಿಕರಿಗೆ ಹಾನಿಯುಂಟುಮಾಡುವ ರೈಲುಗಳ ಮೇಲೆ ಕಲ್ಲುಗಳನ್ನು ಎಸೆಯದಂತೆ ಜಾಗೃತಿ ಮೂಡಿಸಲು ಡ್ರೈವ್‌ಗಳನ್ನು ಮಾಡುತ್ತಿದೆ. ಆದಾಗ್ಯೂ ಭಾರತೀಯ ರೈಲ್ವೇ ಮತ್ತು ಕಾನೂನು ಜಾರಿ ಸಂಸ್ಥೆಗಳು ಅವುಗಳನ್ನು ತಡೆಯಲು ಪ್ರಯತ್ನಿಸಿದರೂ ರೈಲಿನ ಮೇಲೆ ಕಲ್ಲು ತೂರಾಟದ ಘಟನೆಗಳು ನಡೆಯುತ್ತಲೇ ಇವೆ.
ಹಿಂದೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ
ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಮೇಲೆ ಕಲ್ಲು ತೂರಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕಳೆದ ಆಗಸ್ಟ್‌ನಲ್ಲಿ ದೆಹಲಿ - ಭೋಪಾಲ್ ನಡುವೆ ಸಂಚಾರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದರಿಂದಾಗಿ ಹಾನಿಗೊಳಗಾಗಿದ್ದ ಐದು ತಿಂಗಳಲ್ಲಿ ವರದಿಯಾದ ಆರನೇ ಪ್ರಕರಣ ಇದಾಗಿತ್ತು.
ಇನ್ನೂ ಮೇ ತಿಂಗಳಲ್ಲೂ ಪ್ರಧಾನಿ ನರೇಂದ್ರ ಮೋದಿ (PM Narendra Modi) ಚಾಲನೆ ನೀಡಿದ ಕೇರಳದ (Kerala) ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ದಕ್ಷಿಣ ರೈಲ್ವೆ ಅಧಿಕಾರಿಗಳ ಪ್ರಕಾರ, ರೈಲು ತಿರುನಾವಯ ಮತ್ತು ತಿರೂರ್ ನಡುವೆ ಸಂಚರಿಸುತ್ತಿದ್ದಾಗ ಕಲ್ಲು ತೂರಾಟ (Stones Pelted) ನಡೆದಿದೆ. ಈ ರೈಲು ಕಾಸರಗೋಡಿನಿಂದ ತಿರುವನಂತಪುರಕ್ಕೆ ತೆರಳುತ್ತಿತ್ತು.












Click it and Unblock the Notifications