ಆಂಧ್ರಪ್ರದೇಶ: ತನ್ನ ಜೀವನಕ್ಕೆ ಮುಳುವಾಗುತ್ತಾರೆ ಎಂದು ಹೆತ್ತ ಮಗುವನ್ನು ಕಾಲುವೆಗೆ ಎಸೆದ ತಾಯಿ
ಅಮರಾವತಿ, ಏಪ್ರಿಲ್. 06: ಅದೆಷ್ಟೇ ಕಷ್ಟ ಬಂದರೂ ಸರಿ ಹೆತ್ತ ಮಕ್ಕಳಿಗಾಗಿ ತಾಯಿ ಎಂತಹ ತ್ಯಾಗಕ್ಕೂ ಸಿದ್ದಳಾಗಿರುತ್ತಾಳೆ ಎಂಬುದು ನಂಬಿಕೆ. ತನ್ನ ಮಕ್ಕಳ ಸಂತೊಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ತಾಯಂದಿರು ಹೆಚ್ಚು. ಆದರೆ, ಆಂಧ್ರಪ್ರದೇಶದ ಈ ಘಟನೆ ನಿಮ್ಮ ಎಲ್ಲಾ ಆಯೋಚನೆಗಳನ್ನು ಬುಡಮೇಲು ಮಾಡಿಬಿಡುತ್ತದೆ.
ಹೌದು, ಜೀವನ ನಿರ್ವಹಣೆ ಕಷ್ಟ, ತನ್ನ ವ್ಯಾಸಂಗಕ್ಕೆ, ಜೀವನಕ್ಕೆ ಮುಳುವಾಗುತ್ತಾರೆ ಎಂದು ಒಂದೂವರೆ ವರ್ಷದ ಕಂದಮ್ಮನನ್ನು ಹೆತ್ತ ತಾಯಿಯೇ ಕಾಲುವೆಗೆ ಎಸೆದು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಅಪಹರಣ ಪ್ರಕರಣ ಎಂದು ವರದಿಯಾಗಿದ್ದ ಕೇಸ್‌ನ ತನಿಖೆ ಕೈಗೆತ್ತಿಕೊಂಡ ಎರಡು ದಿನಗಳ ಬಳಿಕ ನಗರದ ಸರ್ವಪಲ್ಲಿ ನಾಲೆಯಲ್ಲಿ ಪುಟ್ಟ ಮಗುವಿನ ಶವ ಪತ್ತೆಯಾಗಿದೆ.

ಮಗುವಿನ ತಾಯಿಯೇ ತನ್ನ ಮಗುವನ್ನು ಕಾಲುವೆಗೆ ಎಸೆದು ಕೊಲೆಯ ಅಪರಾಧವನ್ನು ಅಪಹರಣ ಪ್ರಕರಣದಂತೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ಕೂಲಪಾಟಿ ಅನುಷಾ ಎಂದು ಗುರುತಿಸಲಾಗಿದ್ದು, ನೆಲ್ಲೂರು ಖಾಸಗಿ ಕಾಲೇಜಿನಲ್ಲಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ (ಎಂಸಿಎ) ಓದುತ್ತಿದ್ದಾರೆ.
ನೆಲ್ಲೂರು ನಗರದ ಗುರ್ರಾಳಮಡುಗು ಸಂಗಮದ ನಿವಾಸಿಯಾಗಿರುವ ಈಕೆ ನಾಲ್ಕು ವರ್ಷಗಳ ಹಿಂದೆ ರಾಪುಎ ಗ್ರಾಮದ ಮಣಿಕಂಠ ಎಂಬುವವರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೆತ್ತಿದ್ದಾರೆ. ಮಣಿಕಂಠ ರಾಪುರದ ಖಾಸಗಿ ಹೋಟೆಲ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ವಿಚಾರಣೆ ವೇಳೆ ಆಕೆ ತನ್ನ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸಲು ಕಷ್ಟಪಡುತ್ತಿರುವ ಕಾರಣ ಮಗಳು ಲಕ್ಷ್ಮಿ ಹರಿಕಾಳನ್ನು ಮನೆಯ ಹಿತ್ತಲಿನಲ್ಲಿದ್ದ ಕಾಲುವೆಗೆ ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣದ ಕುರಿತು ವಿವರಿಸಿದ ನೆಲ್ಲೂರು ನಗರ ಪೊಲೀಸ್ ಉಪಾಧೀಕ್ಷಕ (ಡಿಎಸ್‌ಪಿ) ಡಿ ಶ್ರೀನಿವಾಸ ರೆಡ್ಡಿ, ಸೋಮವಾರ ಮುಂಜಾನೆ 22 ವರ್ಷದ ಯುವತಿ ತೊಟ್ಟಿಲಲ್ಲಿ ಮಲಗಿದ್ದ ತನ್ನ ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗು ಮಲಗಿದ್ದಾಗ ತನಗೂ ನಿದ್ದೆ ಬಂದಿತ್ತು ಎಂದು ಅನುಷಾ ದೂರಿನಲ್ಲಿ ತಿಳಿಸಿದ್ದರು.

ಮನೆಯಲ್ಲಿ ವಿದ್ಯುತ್ ಇಲ್ಲದ ಕಾರಣ ಗಾಳಿ ಬರಲಿ ಎಂದು ಮನೆಯ ಬಾಗಿಲು ತೆರೆದಿದ್ದೆ. ನಾನು ನಿದ್ದೆ ಮಾಡುತ್ತಿದ್ದ ಕಾರಣ ಯಾಎಓ ತೊಟ್ಟಿಲಿನಿಂದ ಮಗುವನ್ನು ಅಪಹರಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ದೂರಿನ ಮೇರೆಗೆ ಬಾಲಕಿಯ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಪೊಲೀಸರು ತನಿಖೆ ನಡೆಸುತ್ತಾ, ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲು ಪ್ರಾರಂಭಿಸಿದಾಗ, ಅನುಷಾ ಅವರ ಕೃತ್ಯ ಬೆಳಕಿಗೆ ಬಂದಿದೆ.
ಅನುಷಾ ತನ್ನ ತಾಯಿಯೊಂದಿಗೆ ಗುರ್ರಾಲಮಡುಗು ಸಂಗಮದಲ್ಲಿ ನೆಲೆಸಿದ್ದಳು ಎಂದು ಪೊಲೀಸರಿಗೆ ತಿಳಿದು ಬಂದಿದೆ. ಆರೋಪಿ ಮಹಿಳೆ ಈ ಕೃತ್ಯ ಎಸಗಿದಾಗ ಆಕೆಯ ತಾಯಿ ಮನೆಯಲ್ಲಿ ಇರಲಿಲ್ಲ. ಸಂಬಂಧಿಯೊಬ್ಬರ ಮನೆಯಲ್ಲಿ ಮಲಗುವುದಾಗಿ ಹೇಳಿ ಅನುಷಾ ಮಗಳು ಹರಿಕಾಳೊಂದಿಗೆ ಮನೆ ಬಿಟ್ಟಿದ್ದಳು. ನಂತರ ಮಗುವನ್ನು ಸರ್ವಪಲ್ಲಿ ಕಾಲುವೆಗೆ ಎಸೆದಿದ್ದಾರೆ.
" ತನ್ನ ಮಕ್ಕಳು ತನ್ನ ಉನ್ನತ ವ್ಯಾಸಂಗವನ್ನು ಮುಂದುವರಿಸುವ ಯೋಜನೆಯಲ್ಲಿ ಮಾತ್ರವಲ್ಲದೆ ತನ್ನ ಜೀವನದಲ್ಲಿಯೂ ಅಡ್ಡಿಯಾಗುತ್ತಾರೆ ಎಂದು ಅನುಷಾ ಭಾವಿಸಿದ್ದರು" ಎಂದು ಡಿಎಸ್ಪಿ ಹೇಳಿದ್ದಾರೆ. ಆರೋಪಿ ಅನುಷಾ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ನಗರದಲ್ಲಿ ಉದ್ಯೋಗವನ್ನು ಮುಂದುವರಿಸಲು ಬಯಸಿದ್ದಳು.
ಪೊಲೀಸರು ಮೃತ ಕಂದಮ್ಮ ಹರಿಕಾ ಶವವನ್ನು ಕಾಲುವೆಯಿಂದ ಹೊರತೆಗೆದಿದ್ದಾರೆ. ನೆಲ್ಲೂರು ನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಅನುಷಾಳನ್ನು ಬಂಧಿಸಿದ್ದಾರೆ.












Click it and Unblock the Notifications