ರಾಮಗೋಪಾಲ್ ವರ್ಮಾ ಬಂಧನಕ್ಕೆ ಬಂದ ಆಂಧ್ರಪ್ರದೇಶ ಪೊಲೀಸರು, ವರ್ಮಾ ಮಾಡಿದ್ದೇನು ?
Ram Gopal Varma: ಒಂದಿಲ್ಲೊಂದು ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಇದೀಗ ಯಾವುದೇ ಕ್ಷಣದಲ್ಲಾದರೂ ಬಂಧನಕ್ಕೆ ಒಳಪಡುವ ಸಾಧ್ಯತೆ ಇದೆ. ರಾಮ್‌ಗೋಪಾಲ್ ವರ್ಮಾ ಅವರ ಮನೆಯ ಮುಂದೆ ಆಂಧ್ರ ಪ್ರದೇಶದ ಪೊಲೀಸರು ಜಮಾಯಿಸಿದ್ದು, ಯಾವುದೇ ಕ್ಷಣದಲ್ಲಾದರೂ ಬಂಧನಕ್ಕೆ ಒಳಪಡುವ ಸಾಧ್ಯತೆ ಇದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರ ಸಚಿವ ಮತ್ತು ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಹಾಗೂ ಅವರ ಪತ್ನಿ ಬ್ರಹ್ಮಿಣಿ ಅವರ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಿದ್ದು, ಕೆಟ್ಟ (ಅವಾಚ್ಯ) ಶಬ್ದಗಳನ್ನು ಬಳಸಿರುವ ಆರೋಪ ಅವರ ಮೇಲೆ ಇದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಅವರ ಕುಟುಂಬದ ಬಗ್ಗೆ ಕೀಳಾಗಿ ಮಾತನಾಡಿ ಎಗರಾಡಿದ್ದ ರಾಮ್‌ಗೋಪಾಲ್ ವರ್ಮಾ ಈಗ ಬಿಟ್ಟು ಬಿಡಿ ಪ್ಲೀಸ್ ಎನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ಆದರೆ, ಆಂಧ್ರಪ್ರದೇಶದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ವರ್ಮಾಗೆ ಆಂಧ್ರಪ್ರದೇಶ ಹಾಗೂ ಭಾರತದ ಸಿನಿಮಾರಂಗದಲ್ಲಿ ದೊಡ್ಡ ಹೆಸರು ಇದೆ. ಆದರೆ, ಅವರು ಚಿತ್ರರಂಗದ ಹಾಗೂ ಅವರ ಸಿನಿಮಾದ ವಿಚಾರಗಳಿಗಿಂತಲೂ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗಿದ್ದಾರೆ. ಆಂಧ್ರಪ್ರದೇಶದ ಚುನಾವಣೆಯ ಸಂದರ್ಭದಲ್ಲಿ ವರ್ಮಾ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದ ಪೋಸ್ಟ್‌ಗಳು ಭಾರೀ ವಿವಾದವನ್ನೇ ಸೃಷ್ಟಿ ಮಾಡಿದ್ದವು.

ಈಗ ಕಳೆದ ಒಂದು ತಿಂಗಳಿನಿಂದ ಆಂಧ್ರಪ್ರದೇಶದಲ್ಲಿ ಈ ವಿಷಯ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ. ಆಂಧ್ರಪ್ರದೇಶದ ಪೊಲೀಸರು ಸೈಬರ್ ಕಾಯ್ದೆಯ (ಐಟಿ) ಅಡಿ ರಾಮ್‌ಗೋಪಾಲ್ ವರ್ಮಾ ಅವರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಆದರೆ, ವರ್ಮಾ ಅವರು ವಿಚಾರಣೆಗೆ ಹಾಜರಾಗಿಲ್ಲ. ಇದರ ಬೆನ್ನಲ್ಲೇ ಆಂಧ್ರಪ್ರದೇಶದ ಪೊಲೀಸರು ವರ್ಮಾ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ನೋಟಿಸ್
ಇನ್ನು ರಾಮ್‌ಗೋಪಾಲ್ ವರ್ಮಾ ಅವರು ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಚಂದ್ರಬಾಬು ನಾಯ್ಡು ಬಗ್ಗೆ ಪೋಸ್ಟ್ ಮಾಡಿರುವುದಕ್ಕೆ ವರ್ಮಾ ಮೇಲೆ ಈಗಾಗಲೇ ಆಂಧ್ರದಲ್ಲಿ ಕೇಸ್ ದಾಖಲಾಗಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಪೊಲೀಸರು ವಿಚಾರಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಆಂಧ್ರ ಪೊಲೀಸರು ರ್ಮಾಗೆ 41ಎ ನೋಟಿಸ್ ನೀಡಿದ್ದರು. ಈ ನಡುವೆ ವರ್ಮಾ ಅವರು ಆಂಧ್ರಪ್ರದೇಶ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆಗೆ ಹಾಜರಾಗುವಂತೆ ಸೂಚನೆ ಬಂದ ಬೆನ್ನಲ್ಲೇ ಅವರು ಇನ್ನೊಂದು ವಾರ ಕಾಲಾವಕಾಶ ನೀಡುವಂತೆ ಕೇಳಿದ್ದಾರೆ.
ಆಂಧ್ರಪ್ರದೇಶದ ಪೊಲೀಸರ ಸೂಚನೆಯಂತೆ ನವೆಂಬರ್ 19ಕ್ಕೆ ವರ್ಮಾ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿತ್ತು. ಕಾಲಾವಕಾಶ ಕೋರಿದ್ದ ಹಿನ್ನೆಲೆಯಲ್ಲಿ ನವೆಂಬರ್ 25ರಂದು ವಿಚಾರಣೆಗೆ ಹಾಜರಾಗುವಂತೆ ವರ್ಮಾಗೆ ಎರಡನೇ ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಇಂದು ಸಹ ಅವರು ನಾನು ಶೂಟಿಂಗ್‌ನಲ್ಲಿ ಇದ್ದೇನೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಅವರ ವಕೀಲರ ಮೂಲಕ ಪೊಲೀಸರಿಗೆ ಉತ್ತರಿಸಿದ್ದಾರೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಮೊದಲ ಬಾರಿ ನೋಟಿಸ್ ನೀಡಿದ್ದಾಗಲೂ ಅವರು ನಾನು ಶೂಟಿಂಗ್‌ನಲ್ಲಿ ಇರುವುದರಿಂದ ಸ್ವಲ್ಪ ಕಾಲಾವಕಾಶ ಕೊಡಿ ಅಂತ ಕೇಳಿದ್ದರು. ಆದರೆ, ಎರಡನೇ ಬಾರಿಯೂ ಅವರು ಕಾಲಾವಕಾಶ ಕೇಳುವುದರೊಂದಿಗೆ ಆಂಧ್ರಪ್ರದೇಶದ ಪೊಲೀಸರು ಫೀಲ್ಡ್‌ಗೆ ಇಳಿದಿದ್ದಾರೆ.
ಮನೆಯಲ್ಲೇ ಇದ್ದು ಹೊರಗೆ ಬಾರದ ವರ್ಮಾ
ಆಂಧ್ರಪ್ರದೇಶದ ಪೊಲೀಸರು ತೆಲಂಗಾಣದ ಹೈದರಾಬಾದ್‌ನಲ್ಲಿರುವ ರಾಮ್‌ಗೋಪಾಲ್ ವರ್ಮಾ ಅವರ ಮನೆಯ ಮುಂದೆ ಬಂದು ಕಾಯುತ್ತಿದ್ದಾರೆ. ಇಂದು ವಿಚಾರಣೆಗೆ ಹಾಜರಾಗಲೇಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಅಲ್ಲದೇ ವಿಚಾರಣೆಗೆ ಹಾಜರಾಗದೆ ಇದ್ದರೆ, ಬಂಧಿಸುವುದಾಗಿಯೂ ಆಂಧ್ರಪ್ರದೇಶದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇನ್ನು ಆಂಧ್ರಪ್ರದೇಶದ ಪೊಲೀಸರ ಮೂಲಗಳ ಪ್ರಕಾರ, ರಾಮ್‌ಗೋಪಾಲ್ ವರ್ಮಾ ಮನೆಯಲ್ಲೇ ಇದ್ದು, ಇಲ್ಲ ಅಂತ ಹೇಳಿಕೊಳ್ಳುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಇನ್ನು ಕೆಲವೇ ಕ್ಷಣಗಳಲ್ಲಿ ಯಾವುದೇ ಮಹತ್ವದ ಬೆಳವಣಿಗೆಯಾಗಬಹುದು ಎನ್ನಲಾಗುತ್ತಿದೆ.
ರಾಮ್‌ಗೋಪಾಲ್ ವರ್ಮಾ ಕೇಸ್ ಹಿನ್ನೆಲೆ ಏನು
ರಾಮ್‌ಗೋಪಾಲ್ ವರ್ಮಾ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ವ್ಯಕ್ತಿ. ಆಂಧ್ರಪ್ರದೇಶದ ಸಿ.ಎಂ ಚಂದ್ರಬಾಬು ನಾಯ್ಡು ಅವರು ಹಾಗೂ ಅವರ ಫ್ಯಾಮಿಲಿ ಬಗ್ಗೆ ಫೇಸ್‌ಬುಕ್ ಹಾಗೂ ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಬರೆದು ಪೋಸ್ಟ್ ಮಾಡಿದ್ದು ಹಾಗೂ ಮಾತನಾಡಿರುವ ಆರೋಪ ವರ್ಮಾ ಮೇಲೆ ಇದೆ.
ಈ ಸಂಬಂಧ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಪೊಲೀಸರು ರಾಮ್‌ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲ್ಲಿನ ತೆಲುಗು ದೇಶಂ ಪಕ್ಷದ (ಟಿಡಿಪಿ) ಸ್ಥಳೀಯ ಮುಖಂಡರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.












Click it and Unblock the Notifications