Andhra Pradesh flood: ಆಗಸ್ಟ್ 7, 8ಕ್ಕೆ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪ್ರವಾಸ
ಅಮರಾವತಿ, ಆಗಸ್ಟ್. 04: ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಆಗಸ್ಟ್ 7 (ಸೋಮವಾರ) ಮತ್ತು 8 (ಮಂಗಳವಾರ) ರಂದು ಗೋದಾವರಿ ಜಲಾನಯನದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಪರಿಶೀಲಿಸಲಿದ್ದಾರೆ. ಆಂಧ್ರ ಪ್ರದೇಶದಲ್ಲಿ ಕಳೆದ ಕೆಲವು ವಾರಗಳಿಂದ ಸತತವಾಗಿ ಮಳೆಯಾಗುತ್ತಿದೆ.
ಗುರುವಾರ ತಾಡೆಪಲ್ಲಿಯ ಕ್ಯಾಂಪ್ ಕಚೇರಿಯಲ್ಲಿ ರಾಜ್ಯದ ಪ್ರವಾಹ ಪರಿಸ್ಥಿತಿ ಅವಲೋಕನಕ್ಕಾಗಿ ಅಲ್ಲೂರಿ ಸೀತಾರಾಮರಾಜು, ಏಲೂರು, ಡಾ.ಬಿ.ಆರ್.ಅಂಬೇಡ್ಕರ್ ಕೋಣಸೀಮೆ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಐದು ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯ ನಂತರ ಸಿಎಂ ಜಗನ್ ಮೋಹನ್ ರೆಡ್ಡಿ ಈ ಘೋಷಣೆ ಮಾಡಿದ್ದಾರೆ.

ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ನಿರ್ದೇಶಿಸಿದ ಮುಖ್ಯಮಂತ್ರಿಗಳು, ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮುಂಗಡವಾಗಿ ಮಂಜೂರಾದ ಟಿಆರ್ -27 ರ ಅಡಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
"ಕಳೆದ ನಾಲ್ಕು ವರ್ಷಗಳಿಂದ, ನಾವು ಇತರ ರಾಜ್ಯಗಳು ಅನುಕರಿಸುವ ಈ ವ್ಯವಸ್ಥೆಯನ್ನು ಅನುಸರಿಸುತ್ತಿದ್ದೇವೆ" ಎಂದು ಅವರು ವಿವರಿಸಿದ್ದಾರೆ. ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡುವುದನ್ನು ಮತ್ತು ಅಧಿಕಾರಿಗಳ ಜೊತೆಗೆ ಪರಿಸ್ಥಿತಿಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡುವುದನ್ನು ಒಂದು ಪ್ರಮುಖ ಕೆಲಸ ಎಂದು ಹೇಳಿದ್ದಾರೆ.
ಸಂತ್ರಸ್ತ ಕುಟುಂಬಗಳು ಮತ್ತು ವ್ಯಕ್ತಿಗಳನ್ನು ಪರಿಹಾರ ಶಿಬಿರಗಳಿಂದ ಮನೆಗೆ ಕಳುಹಿಸಿದಾಗ ಅವರಿಗೆ ಕ್ರಮವಾಗಿ ರೂ 2,000 ಮತ್ತು ರೂ 1,000 ನೀಡಬೇಕು ಎಂದು ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಾವುದೇ ಮನೆಗೆ ಪ್ರವಾಹದ ನೀರು ಬಂದರೆ ಆ ಕುಟುಂಬಕ್ಕೆ 2000 ರೂಪಾಯಿ ಪರಿಹಾರ ನೀಡಬೇಕು. ಅಲ್ಲದೆ, ಪ್ರವಾಹ ಸಂತ್ರಸ್ತರಿಗೆ 25 ಕೆಜಿ ಅಕ್ಕಿ, ಒಂದು ಕೆಜಿ ತರಕಾರಿ, ಒಂದು ಕೆಜಿ ಕೆಂಪುಬೇಳೆ ಮತ್ತು ಒಂದು ಲೀಟರ್ ಅಡುಗೆ ಎಣ್ಣೆಯನ್ನು ನೀಡಬೇಕು ಎಂದಿದ್ದಾರೆ.

"ಪ್ರವಾಹದಲ್ಲಿ ಯಾವುದೇ ಮನೆಗಳು ಹಾನಿಗೊಳಗಾಗಿದ್ದರೆ, ಹಾನಿಯ ಪ್ರಮಾಣವನ್ನು ಲೆಕ್ಕಿಸದೆ ದುರಸ್ತಿಗಾಗಿ ತಲಾ 10 ಸಾವಿರ ರೂ.ಗಳನ್ನು ನೀಡಬೇಕು. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪರ್ಯಾಯ ಮನೆ ನಿವೇಶನಗಳನ್ನು ಒದಗಿಸುವುದು ಮತ್ತು ಪಕ್ಕಾ ಮನೆಗಳನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ಬಿಕ್ಕಟ್ಟಿಗೆ ನಾವು ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು" ಎಂದು ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಾವು ಕಡಿತಕ್ಕೆ ಚಿಕಿತ್ಸೆ ನೀಡುವ ಔಷಧಗಳು ಸೇರಿದಂತೆ ಸಾಕಷ್ಟು ಔಷಧಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಮತ್ತು ಗ್ರಾಮ ಚಿಕಿತ್ಸಾಲಯಗಳಲ್ಲಿ ಲಭ್ಯವಿವೆ ಎಂದು ತಿಳಿದುಕೊಳ್ಳಲು ಸೂಚನೆ ನೀಡಿದ್ದಾರೆ. ಇದಲ್ಲದೆ, ಪ್ರವಾಹದ ಮಟ್ಟ ಕಡಿಮೆಯಾದ ನಂತರ ಕೆಲಸವನ್ನು ನಿರ್ವಹಿಸಲು ನೈರ್ಮಲ್ಯ ತಂಡಗಳನ್ನು ನಿಯೋಜಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ.
ಪ್ರವಾಹದಲ್ಲಿ ಹಾನಿಗೀಡಾದ ರಸ್ತೆಗಳು ಮತ್ತು ಚರಂಡಿಗಳನ್ನು ಸಹ ಸರಿಪಡಿಸಬೇಕು ಮತ್ತು ಜಾನುವಾರುಗಳ ಆಹಾರ, ಕುಡಿಯುವ ನೀರು ಮತ್ತು ಇತರ ಅಗತ್ಯ ವಸ್ತುಗಳ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಜನ ಜೀವನ ಸಹಜ ಸ್ಥಿತಿಗೆ ಬಂದ ನಂತರ ಬೆಳೆ ಮತ್ತು ಆಸ್ತಿ ನಷ್ಟದ ಲೆಕ್ಕಾಚಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ಸಚಿವ ಡಿ.ಪ್ರಸಾದ ರಾವ್, ಮುಖ್ಯ ಕಾರ್ಯದರ್ಶಿ ಡಾ.ಕೆ.ಎಸ್.ಜವಾಹರರೆಡ್ಡಿ, ಡಿಜಿಪಿ ಕೆ.ವಿ.ರಾಜೇಂದ್ರನಾಥ ರೆಡ್ಡಿ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications