2019 ರಿಂದ 2024: ಚಂದ್ರಬಾಬು ನಾಯ್ಡು ನೋವು, ಸವಾಲು, ಸಾಧನೆ
ಅಮರಾವತಿ, ಜೂನ್ 05: ಸಾಲು ಸಾಲು ಚುನಾವಣೆಗಳ ಸೋಲು, ವಿಧಾನಸಭೆಯಲ್ಲಿ ಅವಮಾನ, ಹಗರಣದ ಆರೋಪದಲ್ಲಿ ಬಂಧನ, ಚುನಾವಣೆ ಘೋಷಣೆ, ರಾಜ್ಯ ಪ್ರವಾಸ, ವಿಧಾನಸಭೆ & ಲೋಕಸಭೆ ಚುನಾವಣೆಯಲ್ಲಿ ಜಯಭೇರಿ. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಪ್ರಮುಖ ಪಾಲುದಾರ ಪಕ್ಷ.
ಇದು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷ (ಟಿಡಿಪಿ) ರಾಷ್ಟ್ರೀಯ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು (74) ಅವರ 2019 ರಿಂದ 2024ರ ರಾಜಕೀಯ ಪಯಣದ ಚಿತ್ರಣ.

2024ರ ಲೋಕಸಭೆ ಚುನಾವಣೆ ಫಲಿತಾಂಶ, ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಮಂಗಳವಾರ ಘೋಷಣೆಯಾಗಿದೆ. ಆಂಧ್ರ ಪ್ರದೇಶದ 25 ಲೋಕಸಭಾ ಕ್ಷೇತ್ರಗಳ ಪೈಕಿ ಟಿಡಿಪಿ 16 ಕ್ಷೇತ್ರಗಳಲ್ಲಿ ಜಯಗಳಿಸಿದೆ. 175 ಸದಸ್ಯ ಬಲದ ವಿಧಾನಸಭೆಯಲ್ಲಿ 135 ಸ್ಥಾನಗಳಲ್ಲಿ ಪಕ್ಷ ವಿಜಯಸಾಧಿಸಿದೆ.
ಟಿಡಿಪಿ ಪಕ್ಷದ ಪ್ರಚಂಡ ಜಯದ ಜೊತೆಗೆ ಎನ್. ಚಂದ್ರಬಾಬು ನಾಯ್ಡು ಮತ್ತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ಟಿಡಿಪಿಗೆ ಕೇಂದ್ರದಲ್ಲಿಯೂ ಮಹತ್ವದ ಸ್ಥಾನಗಳು ಸಿಗಲಿವೆ. ಈ ಮೂಲಕ ಎನ್. ಚಂದ್ರಬಾಬು ನಾಯ್ಡು 2019ರ ಸೋಲು, ಅವಮಾನದಿಂದ ಹೊರ ಬಂದಿದ್ದಾರೆ.
ಶಪಥ ಮಾಡಿದ್ದ ಎನ್. ಚಂದ್ರಬಾಬು ನಾಯ್ಡು: 2019ರ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರ ಪ್ರದೇಶದಲ್ಲಿ ಟಿಡಿಪಿ ಅಧಿಕಾರ ಕಳೆದುಕೊಂಡಿತು. 175 ಸ್ಥಾನಗಳಲ್ಲಿ ಕೇವಲ 23 ಸೀಟುಗಳಿಸಿತು. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ ಸರ್ಕಾರ ರಚನೆ ಮಾಡಿತು. ಬಳಿಕ ವಿಧಾನಸಭೆ ಅಧಿವೇಶನದಲ್ಲಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಅವಮಾನಿಸಲಾಯಿತು.
ಆಗ ಎನ್. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿಯೇ ವಿಧಾನಸಭೆಗೆ ಪ್ರವೇಶ ಮಾಡುತ್ತೇನೆ ಎಂದು ಶಪಥವನ್ನು ಮಾಡಿದರು. 2024ರ ಚುನಾವಣೆಯಲ್ಲಿ ಪಕ್ಷ ಪ್ರಚಂಡ ಬಹುಮತ ಪಡೆದಿದ್ದು, ಈಗ ಎನ್. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿಯೇ ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ.
2019ರ ಚುನಾವಣೆ ಸೋಲಿನ ಬಳಿಕ ಎನ್. ಚಂದ್ರಬಾಬು ನಾಯ್ಡು, ಟಿಡಿಪಿ ಪಕ್ಷದ ಕಥೆ ಮುಗಿದಂತೆಯೇ ಎಂಬ ಮಾತು ಕೇಳಿ ಬಂತು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಟಿಡಿಪಿ ಸೋಲು ಕಂಡಿತು, 23 ಶಾಸಕರು ಸಹ ವೈಎಸ್‌ಆರ್‌ಸಿ ಬೆಂಬಲಿಸಲು ಆರಂಭಿಸಿದರು. ಆದರೆ ಚಿತ್ರಣ ಬದಲಾಯಿತು. ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಗಳಲ್ಲಿ ಟಿಡಿಪಿ ಗೆಲುವು ಕಂಡಿತು. ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಗಳಲ್ಲೂ ನಾಲ್ವರು ಬಂಡಾಯ ಶಾಸಕರ ಬೆಂಬಲದಿಂದ ಪಕ್ಷ ಜಯಗಳಿಸಿತು.
9 ಸೆಪ್ಟೆಂಬರ್ 2023ರಲ್ಲಿ 2014 ಮತ್ತು 2019ರ ನಡುವಿನ ಟಿಡಿಪಿ ಆಡಳಿತದಲ್ಲಿ ನಡೆದಿದೆ ಎನ್ನಲಾದ ಕೌಶಲ್ಯ ಅಭಿವೃದ್ಧಿ ನಿಗಮಕ್ಕೆ ಸೇರಿದ ಸುಮಾರು 371 ಕೋಟಿ ರೂ. ಮೊತ್ತದ ಹಗರಣದಲ್ಲಿ ಎನ್. ಚಂದ್ರಬಾಬು ನಾಯ್ಡು ಬಂಧಿಸಲಾಯಿತು. ಟಿಡಿಪಿಯ ಕಾರ್ಯಕರ್ತರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಆಕ್ರೋಶಗೊಂಡರು.
ಜನಸೇನಾ ಪಕ್ಷದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಆಂಧ್ರ ಪ್ರದೇಶ ರಾಜಕೀಯದಲ್ಲಿ ಸಕ್ರಿಯರಾದರು. ತೆಲುಗು ದೇಶಂ ಪಕ್ಷದ ಜೊತೆ ಮೈತ್ರಿ ಘೋಷಣೆ ಮಾಡಿದರು. ಟಿಡಿಪಿ ಮತ್ತು ಜನಸೇನಾ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದವು. ಈಗ ಎನ್‌ಡಿಎ ಮೈತ್ರಿಕೂಟದಲ್ಲಿ ಅತಿ ಹೆಚ್ಚು ಸ್ಥಾನಗಳಿಸಿರುವ ಪಕ್ಷಗಳಲ್ಲಿ ಟಿಡಿಪಿಯೂ ಒಂದು.
ಜೈಲಿನಿಂದ ಹೊರಬಂದ ಎನ್. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ರಣಕಹಳೆ ಮೊಳಗಿಸಿದರು. ರಾಜ್ಯಾದ್ಯಂತ ಪ್ರವಾಸ ಮಾಡಿದರು. ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರು. ಚುನಾವಣೆಯಲ್ಲಿ ಜನರು ಎನ್. ಚಂದ್ರಬಾಬು ನಾಯ್ಡು ಬೆಂಬಲಿಸಿದರು.












Click it and Unblock the Notifications