ಚಿತ್ತೂರು ಕಾರ್ಯಾಚರಣೆ ಯಶಸ್ವಿ: 2 ಉಗ್ರರು ಅರೆಸ್ಟ್
ಚಿತ್ತೂರು, ಅ.5: ಪುತ್ತೂರಿನ ಮೇದರ ಬೀದಿಯಲ್ಲಿರುವ ಮನೆಯಲ್ಲಿ ಅಡಗಿದ್ದ ಉಗ್ರರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸರು ಉಗ್ರರಾದ ಬಿಲಾಲ್ ಮಲಿಕ್ ಮತ್ತು ಪನ್ನಾ ಇಸ್ಮಾಯಿಲನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆದರೆ ಕಾರ್ಯಾಚರಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತಮಿಳುನಾಡು ಪೊಲೀಸ್ ಇನ್ಸ್ ಪೆಕ್ಟರ್ ಲಕ್ಷ್ಮಣ್ ಅವರು ಚೆನ್ನೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಕೆಳಗಿನ ಚಿತ್ರದಲ್ಲಿರುವ ಮೂವರೂ ಉಗ್ರರು ಈಗ ಪೊಲೀಸ್ ವಶದಲ್ಲಿದ್ದಾರೆ.

ನಿನ್ನೆ ತಮಿಳುನಾಡು ಪೊಲೀಸರು ಫಕ್ರುದ್ದೀನ್ ಅಲಿಯಾಸ್ ಪೊಲೀಸ್ ಫಕ್ರುದ್ದೀನ್ ಎಂಬ ಉಗ್ರನನ್ನು ಬಂಧಿಸಿದ್ದರು, ಅವನು ನೀಡಿದ್ದ ಖಚಿತ ಸುಳಿವಿನ ಮೇರೆಗೆ ತಮಿಳುನಾಡು ಮತ್ತು ಆಂಧ್ರ ಪೊಲೀಸರು ಇಂದು ಬೆಳಗಿನ ಜಾವದಿಂದ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಉಗ್ರರಿಬ್ಬರೂ ಶರಣಾಗುವ ಮುನ್ನ ಉಗ್ರ ಬಿಲಾಲನ ಇಬ್ಬರು ಮಕ್ಕಳು, ಪತ್ನಿ ಸೇರಿದಂತೆ ನಾಲ್ಕು ಮಂದಿ ಪೊಲೀಸರಿಗೆ ಶರಣಾಗಿದ್ದರು. ಆದರೆ ಮನೆಯೊಳಗೆಯೇ ಅಡಗಿದ್ದ ಇನ್ನಿಬ್ಬರು ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರಿಸಿದ್ದರು.
ಹಿಂದಿನ ಸುದ್ದಿ: ಪುತ್ತೂರು ಪಟ್ಟಣದ ಮೇದರ ಬೀದಿಯಲ್ಲಿ 5 ಮಂದಿ ಉಗ್ರರು ಅಡಗಿದ್ದಾರೆನ್ನಲಾದ ಮನೆಯ ಮೇಲೆ ತಮಿಳುನಾಡು ಮತ್ತು ಆಂಧ್ರ ಪೊಲೀಸರು ಇಂದು ಬೆಳಗಿನ ಜಾವದಿಂದ ಜಂಟಿ ಕಾರ್ಯಾಚರಣೆ ನಡೆಸಿದ್ದು, ತಾಜಾ ವರದಿಗಳ ಪ್ರಕಾರ ಬಿಲಾಲ್ ಮಲಿಕ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆದರೆ ಉಳಿದವರ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ. ಆಂಧ್ರದ ಅಕ್ಟೋಪಸ್ ತಂಡ ಮತ್ತು ತಮಿಳುನಾಡಿನ ಕಮಾಂಡೋ ಪಡೆ ಅಂತಿಮ ಕಾರ್ಯಾಚರಣೆಗೆ ಸನ್ನದ್ಧರಾಗಿದ್ದು, ಯಾವುದೇ ಕ್ಷಣ ಅಂತಿಮ ಕಾರ್ಯಾಚರಣೆ ನಡೆಯುವ ಸಾಧ್ಯತೆಯಿದೆ. ಚಿತ್ತೂರು, ತಿರುಪತಿಯಿಂದ 30 ಕಿಮೀ ದೂರದಲ್ಲಿದ್ದು, ತಮಿಳುನಾಡಿಗೆ ಹತ್ತಿರದಲ್ಲಿದೆ.
ಬಿಲಾಲ್ ಮಲಿಕ್, ತಮಿಳುನಾಡಿನ ಬಿಜೆಪಿ ನಾಯಕ ರಮೇಶ್ ಹತ್ಯೆಯ ಪ್ರಮುಖ ಆರೋಪಿ. ಜತೆಗೆ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಿಜೆಪಿ ಕಚೇರಿ ಎದುರು ಏಪ್ರಿಲ್ 17ರಂದು ನಡೆದ ಬಾಂಬ್ ಸ್ಫೋಟದ ಸೂತ್ರಧಾರನೂ ಹೌದು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಲಾಲ್ ತನ್ನ ಸಹಚರರ ಜತೆಗೂಡಿ ಪುತ್ತೂರು ಪಟ್ಟಣಕ್ಕೆ ಬಂದು ನೆಲೆಸಿದ್ದರು. ಕಬ್ಬಿಣದ ವ್ಯಾಪಾರಿಗಳಾಗಿದ್ದು ಯಾರಿಗೂ ಅನುಮಾನದ ಬಾರದ ರೀತಿಯಲ್ಲಿ ಇಲ್ಲಿ ನೆಲೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬೆಳಗಿನ ಸುದ್ದಿ: ಆರೆಸ್ಸೆಸ್ ಮುಖಂಡರೊಬ್ಬರ ಹತ್ಯೆ ಪ್ರಕರಣದ ಬೆನ್ನುಹತ್ತಿದ್ದ ತಮಿಳುನಾಡು ಪೊಲೀಸರಿಗೆ ಐಎಸ್ ಐ ಉಗ್ರರ ದರುಶನವಾಗಿದ್ದು, ಆಂಧ್ರದ ಚಿತ್ತೂರು ಜಿಲ್ಲೆಯ ಪುತ್ತೂರು ಪಟ್ಟಣದಲ್ಲಿ ಮೇದರ ಬೀದಿಯಲ್ಲಿರುವ ಮನೆಯೊಂದರಲ್ಲಿ ಅಡಗಿರುವ ಉಗ್ರರು ಮತ್ತು ಪೊಲೀಸರ ಮಧ್ಯೆ ಶನಿವಾರ ಬೆಳಗಿನ ಜಾವದಿಂದ ಕಾರ್ಯಾಚರಣೆ ನಡೆದಿದೆ. ಸ್ಥಳಕ್ಕೆ ಉನ್ನತಾಧಿಕಾರಿಗಳು ಸ್ಥಳದಲ್ಲಿ ಮೊಕ್ಕಾ ಹೂಡಿದ್ದಾರೆ.
ಕಳೆದ ಜುಲೈನಲ್ಲಿ ಸೇಲಂನಲ್ಲಿ ಬಿಜೆಪಿ ಮುಖಂಡ 52 ವರ್ಷದ ವಿ ರಮೇಶ್ ಅವರನ್ನು ಭೀಕರವಾಗಿ ಹತ್ಯೆ ಮಾಡಗಿತ್ತು. ತಮಿಳುನಾಡು ಪೊಲೀಸರು ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದರು. ಆದರೆ ಆಂಧ್ರದ ಪ್ರಶಾಂತ ಪ್ರದೇಶವಾದ ಪುತ್ತೂರು ಗ್ರಾಮದಲ್ಲಿ ಪಾತಕಿಗಳು ಅಡಗಿದ್ದಾರೆ ಎಂಬ ಸುಳಿವು ದೊರೆತು, ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಆ ಮನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಐವರು ಉಗ್ರರು ಅಡಗಿದ್ದಾರೆ ಎನ್ನಲಾಗಿದೆ. ಜತೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಹ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಬೆಳಗ್ಗೆ 3 ಗಂಟೆಯಿಂದ ನೂರಾರು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆಂಧ್ರ ಪೊಲೀಸರು ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಂದೆರಡು ಬಾರಿ ಪರಸ್ಪರ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ತೆಲಂಗಾಣ ವಿಷಯವಾಗಿ ಈಗಾಗಲೇ ಆಂಧ್ರ ಹೊತ್ತಿ ಉರಿಯುತ್ತಿದ್ದು, ಆ ವೇಳೆ ಮತ್ತಷ್ಟು ಭಯೋತ್ಪಾದನೆ ಕೃತ್ಯಗಳನ್ನು ಎಸಗಲು ಈ ಉಗ್ರರು ಹೊಂಚುಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ ರಮೇಶ್ ಅವರ ಹತ್ಯೆ ಪ್ರಕರಣದಲ್ಲಿ ಉಗ್ರರಾದ ಮದುರೈನ ಫಕ್ರುದ್ದೀನ್ ಅಲಿಯಾಸ್ ಪೊಲೀಸ್ ಫಕ್ರುದ್ದೀನ್, ಬಿಲಾಲ್ ಮಲಿಕ್ ಮತ್ತು ಮೇಲಪಾಳಯಂನ ಪನ್ನಾ ಇಸ್ಮಾಯಿಲ್ ಆರೋಪಿಗಳಾಗಿದ್ದಾರೆ. ಇವರ ಪೈಕಿ ಉಗ್ರ ಬಿಲಾಲ್ ಮಲಿಕ್ 'ಚಿತ್ತೂರಿನ ಮನೆಯಲ್ಲಿ ತನ್ನ ಸಹಚರರ ಜತೆ ಅಡಗಿದ್ದಾನೆ' ಎಂಬ ಮಾಹಿತಿ ತಮಿಳುನಾಡು ಪೊಲೀಸರಿಗೆ ಲಭ್ಯವಾಗಿದೆ. OCTOPUS (Organisation To Counter Terrorist Operations - AP's anti-terror organisation).












Click it and Unblock the Notifications