ಸೋಮವಾರ ದೆಹಲಿ ಸೇವಾ ಮಸೂದೆ ಮಂಡಿಸಲಿರುವ ಅಮಿತ್ ಶಾ
ನವದೆಹಲಿ, ಆಗಸ್ಟ್ 6: ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಅಂಗೀಕರಿಸಲಾಗಿರುವ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ (ತಿದ್ದುಪಡಿ) ಮಸೂದೆ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಆಗಸ್ಟ್ 07ರಂದು ರಾಜ್ಯಸಭೆಯಲ್ಲಿ ಮಂಡಿಸಲು ಸಜ್ಜಾಗಿದ್ದಾರೆ.
ಮುಂಗಾರು ಸಂಸತ್ ಅಧಿವೇಶನದಲ್ಲಿ ಕಳೆದ ಆಗಸ್ಟ್ 3 ರಂದು I.N.D.I.A (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ) ದ ಸದಸ್ಯರು ಸಭಾತ್ಯಾಗ ಮಾಡಿದ್ದರು. ಬಳಿಕ ಮಸೂದೆಯನ್ನು ಧ್ವನಿ ಮತದ ಮೂಲಕ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

ಸದ್ಯ ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೆಹಲಿಯಲ್ಲಿ ಸೇವೆಗಳ ನಿಯಂತ್ರಣದ ಸುಗ್ರೀವಾಜ್ಞೆಯನ್ನು ಮೇ ತಿಂಗಳಲ್ಲಿ ಪ್ರಕಟಿಸಲಾಗಿತ್ತು. ಅಧಿಕಾರಿಗಳು ಮತ್ತು ನೌಕರರ ಸೇವೆಯ ಕಾರ್ಯಗಳು, ನಿಯಮಗಳು ಹಾಗೂ ಇನ್ನಿತರ ಅಂಶಗಳನ್ನು ಒಳಗೊಂಡಂತೆ ದೆಹಲಿ ಆಡಳಿತದ ಮೇಲೆ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಮಾಡಲು ಮಸೂದೆಯು (Ordinance) ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
ದೆಹಲಿ ಎಎಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಸುಗ್ರೀವಾಜ್ಞೆ ವಿರುದ್ಧ ತಿಂಗಳುಗಳಿಂದ ವಿರೋಧ ಪಕ್ಷಗಳ ಬೆಂಬಲ ಪಡೆಯಲು ಸಾಕಷ್ಟು ಮುಖಂಡರು ಬೇಟಿ ಮಾಡಿ ಚರ್ಚಿಸಿದರು. ಬೆಂಬಲಕ್ಕೆಕೋರಿದರು. ಈ ವೇಳೆ ಕಾಂಗ್ರೆಸ್ ಹೊರತಾಗಿ ಉಳಿದೆಲ್ಲವು ತ್ವರಿತ ಒಪ್ಪಿಗೆ ಸೂಚಿಸಿದರೆ, ಕೊನೆಯ ದಾಗಿ ಕಾಂಗ್ರೆಸ್ ತನ್ನ ಬೆಂಬಲ ಸೂಚಿಸಿತು.
ಪ್ರತಿಭಟಿಸುತ್ತಿರುವ ವಿಪಕ್ಷಗಳಿಗೆ ಕಾಳಜಿ ಇಲ್ಲ
ವಿಶೇಷವಾಗಿ ಲೋಕಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅಮಿತ್ ಶಾ ಅವರು, ಸದನದಲ್ಲಿ ಅಂಗೀಕರಿಸಿದ ಯಾವುದೇ ಮಸೂದೆಯ ಚರ್ಚೆಯಲ್ಲಿ ವಿರೋಧ ಪಕ್ಷಗಳು ಭಾಗವಹಿಸಿಲ್ಲ. ಇನ್ನೂ ಮಣಿಪುರದ ಜನಾಂಗೀಯ ಹಿಂಸಾಚಾರ ಕುರಿತು ನಡೆದ ಚರ್ಚೆ ಮೇಲಿನ ಬೇಡಿಕೆಗಳ ಕುರಿತು ವಿಪಕ್ಷಗಳು ಪ್ರತಿಭಟಿಸುತ್ತಲೇ ಇವೆ ಎಂದು ಅವರು ತಿಳಿಸಿದರು.

ಪ್ರತಿಪಕ್ಷಗಳ ಪೀಠಗಳತ್ತ ಕೈ ತೋರಿಸಿದ ಅವರು ವಾಗ್ದಾಳಿ ನಡೆಸಿದರು. ದೆಹಲಿ ಕುರಿತ ಸುಗ್ರೀವಾಜ್ಞೆ ಕುರಿತು ವಿಪಕ್ಷಗಳ ಭಾಗವಹಿಸುವುದರಲ್ಲಿ ಏನು ಬದಲಾವಣೆ ಆಗಿದೆ ಎಂದು ಪ್ರಶ್ನಿಸಿದರು. ಕೇವಲ ಮೈತ್ರಿಯನ್ನು ಉಳಿಸುವುದು ಮಾತ್ರವೇ ವಿರೋಧ ಪಕ್ಷದ ಆದ್ಯತೆಯಾಗಿದೆ.
ಪ್ರತಿಪಕ್ಷಗಳಿಗೆ ಮಣಿಪುರದ ಚಿಂತೆ ಇಲ್ಲ. ಒಂದು ರಾಜ್ಯದ ಹಕ್ಕುಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಯಾವ ರಾಜ್ಯ? ದೆಹಲಿ ರಾಜ್ಯವಲ್ಲ ಕೇಂದ್ರಾಡಳಿತ ಪ್ರದೇಶ. ದೆಹಲಿಗೆ ಕಾನೂನು ರೂಪಿಸುವ ಹಕ್ಕು ಸಂಸತ್ತಿಗೆ ಇದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.
ದೆಹಲಿ ಸುಗ್ರೀವಾಜ್ಞೆ ಮತ್ತು ಮಣಿಪುರ ವಿಚಾರವಾಗಿ ವಿಪಕ್ಷಗಳು ಬಾವಿಗಿಳಿದು, ಸಂಸತ್ ಹೊರಗೆ ಪ್ರತಿಭಟಿಸಿವೆ. ನಾಳೆ ದೆಹಲಿ ಮಸೂದೆ ಮಂಡನೆ ಆಗಬೇಕಿದೆ. ನಾಳೆ ಸೋಮವಾರ ಏನೆಲ್ಲ ರಾಜಕೀಯ ಬೆಳವಣಿಗೆ ನಡೆಯಬಹುದು ಎಂಬ ಕುತೂಹಲ ದೇಶದ ಜನರಲ್ಲಿದೆ.












Click it and Unblock the Notifications