Manipur: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಭದ್ರತೆ ಬಗ್ಗೆ ಅಮಿತ್ ಶಾ ಸಭೆ
ಮಣಿಪುರದಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಬಿಕ್ಕಟ್ಟು ಹೆಚ್ಚುತ್ತಿರುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ದೆಹಲಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಕುಕಿ ಬಂಡುಕೋರರಿಂದ ಒಂದೇ ಕುಟುಂಬದ ಆರೂ ಜನರನ್ನು ಅಪಹರಿಸಲಾಗಿತ್ತು ಎನ್ನುವ ಆರೋಪದ ಬೆನ್ನಲ್ಲೇ ಎಲ್ಲಾ ಆರು ಜನರ ಶವಗಳನ್ನು ಪತ್ತೆ ಹಚ್ಚಲಾಗಿದ್ದು, ಸಂಘರ್ಷ ಹೆಚ್ಚಲು ಕಾರಣವಾಗಿದೆ.
ಸಭೆಯಲ್ಲಿ ಮಣಿಪುರದ ಭದ್ರತೆಯ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇಂದು ಸಮಾಲೋಚನೆ ನಡೆಸಿದ ಬಳಿಕ ಸೋಮವಾರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ಜೊತೆ ಮತ್ತೊಂದು ಸಭೆ ಕರೆಯಲಾಗಿದೆ.

ಮಣಿಪುರದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಜನಾಂಗೀಯ ಘರ್ಷಣೆ ನಡೆಯುತ್ತಿದ್ದು ರಾಜ್ಯವು ನಿರಂತರ ಸಂಘರ್ಷದಿಂದ ತತ್ತರಿಸಿದೆ. ಹಿಂದೂ ಮೈತೇಯಿ ಸಮುದಾಯ ಮತ್ತು ಕ್ರಿಶ್ಚಿಯನ್ ಕುಕಿ ಸಮುದಾಯದ ನಡುವೆ ಜನಾಂಗೀಯ ಸಂಘರ್ಷ ಇಡೀ ರಾಜ್ಯಕ್ಕೆ ಹಬ್ಬಿದ್ದು ದಿನೇ ದಿನೇ ಒಂದಿಲ್ಲೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ.
ಜಿರಿಬಾಮ್ ಜಿಲ್ಲೆಯಲ್ಲಿ ಆರು ಜನ ಅಪಹರಣ
ಜಿರಿಬಾಮ್‌ನ ನದಿಯಿಂದ ಆರು ಜನರ ಶವಗಳನ್ನು ಹೊರತೆಗೆಯಲಾಗಿದೆ. ಶುಕ್ರವಾರ ಮತ್ತು ಶನಿವಾರ 4 ಶವಗಳು ಪತ್ತೆಯಾಗಿದ್ದು, ಭಾನುವಾರ ಇನ್ನು ಎರಡು ಶವಗಳು ಪತ್ತೆಯಾಗಿದ್ದು, ಅದರಲ್ಲಿ ಒಂದು ಬಾಲಕಿಯ ರುಂಡವಿಲ್ಲದ ದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಹತ್ಯೆಗೀಡಾದ ಆರು ಮಂದಿಯನ್ನು ಕಳೆದ ಕುಕಿ ಬಂಡುಕೋರರು ಮತ್ತು ಮಣಿಪುರ ಪೊಲೀಸರ ನಡುವಿನ ಗುಂಡಿನ ಚಕಮಕಿಯ ನಂತರ ಜಿರಿಬಾಮ್ ಜಿಲ್ಲೆಯಲ್ಲಿ ಮೈತೇಯಿ ಸಮುದಾಯಕ್ಕೆ ಸೇರಿದವರು ಎನ್ನಲಾಗುತ್ತಿದೆ.
ಒಂದೇ ಕುಟುಂಬದ ಆರು ಜನರ ಅಪಹರಣವಾಗುತ್ತಿದ್ದಂತೆ ಮೈತೇಯಿ ಸಮುದಾಯದ ಜನ ಕೋಪಗೊಂಡು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಶನಿವಾರ ರಾಜಧಾನಿ ಇಂಫಾಲ್‌ನಲ್ಲಿ ಪ್ರತಿಭಟನಾಕಾರರು ಟೈರ್ ಗಳನ್ನು ಸುಟ್ಟು ರಸ್ತೆ ತಡೆ ನಡೆಸಿದರು. ಮಾತ್ರವಲ್ಲದೆ ಶಾಸಕರು, ಸಚಿವರ ಮನೆ ಮೇಲೂ ಕೂಡ ದಾಳಿ ಮಾಡಲಾಗಿದ್ದು, ಸಿಎಂ ನಿವಾಸಕ್ಕೂ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಯತ್ನಿಸಿದ್ದರು.












Click it and Unblock the Notifications