ಎನ್‌ಡಿಎ ಮೈತ್ರಿ ಪಕ್ಷಗಳನ್ನು ಮೋದಿ ಮತ್ತು ಅಮಿತ್ ಶಾ ಒಡೆಯುತ್ತಾರೆ!
ನವದೆಹಲಿ, ಜೂನ್. 16: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಇದೇ ವೇಳೆ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬಣ ಕೂಡ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಮೋದಿ ಸರ್ಕಾರ ಪತನವಾಗುವ ಬಗ್ಗೆ ಭವಿಷ್ಯ ನುಡಿಯುತ್ತಿದೆ.
ಹೌದು... ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಯಾವಾಗ ಬೇಕಾದರೂ ಪತನವಾಗಬಹುದು ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಮಹಾರಾಷ್ಟ್ರದ ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಮೋದಿ, ಅಮಿತ್ ಶಾ ಮೇಲೆ ಸಂಜಯ್ ರಾವತ್ ಆರೋಪ
ಶಿವಸೇನೆಯ ಯುಬಿಟಿ ನಾಯಕ ಸಂಜಯ್ ರಾವುತ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಎನ್‌ಡಿಎ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿಯ ಎನ್‌ಡಿಎ ಮಿತ್ರಪಕ್ಷಗಳಿಗೆ ಎಚ್ಚರಿಕೆ ನೀಡಿರುವ ಅವರು, ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಅವುಗಳನ್ನು ಒಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಎನ್‌ಡಿಎ ಅಭ್ಯರ್ಥಿಯೊಬ್ಬರು ಲೋಕಸಭೆಯ ಸ್ಪೀಕರ್ ಸ್ಥಾನವನ್ನು ಪಡೆಯದಿದ್ದರೆ, ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟಿಡಿಪಿ, ಜೆಡಿಯು ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಅನ್ನು ಒಡೆಯುತ್ತಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಜೊತೆಗೆ ಇಷ್ಟು ದಿನ ಬಿಜೆಪಿ ಜೊತೆಗಿದ್ದ ಅನುಭವದಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದಾರೆ.

2014 ಮತ್ತು 2019 ರಲ್ಲಿ ಇದ್ದಂತೆ ಈಗೀರುವ ಎನ್‌ಡಿಎ ಸರ್ಕಾರವು ಅಸ್ಥಿರವಾಗಿದೆ. ಈ ಬಾರಿ, ಪರಿಸ್ಥಿತಿಯು 2014 ಮತ್ತು 2019 ರಂತೆಯೇ ಇಲ್ಲ. ಸರ್ಕಾರವು ಸ್ಥಿರವಾಗಿಲ್ಲ ಎಂದಿರುವ ಅವರು, ಟಿಡಿಪಿಯ ಚಂದ್ರಬಾಬು ನಾಯ್ಡು ಅವರಿಗೆ ಸ್ಪೀಕರ್ ಸ್ಥಾನ ನೀಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಇಂಡಿಯಾ ಮೈತ್ರಿ ಕೂಟದ ಶಕ್ತಿ!
ಪರಿಸ್ಥಿತಿ ಬದಲಾದರೆ, ಇಂಡಿಯಾ ಮೈತ್ರಿಕೂಟವು ಲೋಕಸಭೆಯಲ್ಲಿ ತಮ್ಮ ಶಕ್ತಿಯನ್ನು ತೋರಿಸಲಿದೆ. ಇಡೀ ಭಾರತ ಮೈತ್ರಿಕೂಟ ಒಟ್ಟಾಗಿ ಸಭೆ ಸೇರಿ ಚರ್ಚಿಸಿ ಚಂದ್ರಬಾಬು ನಾಯ್ಡು ಅವರ ಬೆನ್ನಿಗೆ ನಿಲ್ಲಲಿದೆ ಎಂದಿದ್ದಾರೆ. ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಂದ ಉಂಟಾದ ಯಾವುದೇ ಹಾನಿಗೆ ಆರ್‌ಎಸ್‌ಎಸ್ ಸಮಾನ ಹೊಣೆಗಾರರು ಎಂದು ತಿಳಿಸಿದ್ದಾರೆ.












Click it and Unblock the Notifications