ಅಮಿತ್ ಶಾ-ನಿತೀಶ್ ಕುಮಾರ್ ಭೇಟಿ, ಲೋಕಸಭೆ ಚುನಾವಣೆ ಸೀಟು ಹಂಚಿಕೆ ಚರ್ಚೆ
ಪಾಟ್ನಾ, ಜುಲೈ 12: ತೆರೆ ಮರೆ ಮುನಿಸು ಹೊಂದಿರುವ ಮಿತ್ರ ಪಕ್ಷಗಳಾದ ಜೆಡಿಯು ಹಾಗೂ ಬಿಜೆಪಿಯ ರಾಷ್ಟ್ರಾಧ್ಯಕ್ಷರು ಇಂದು ಪಾಟ್ನಾದಲ್ಲಿ ಭೇಟಿಯಾಗುತ್ತಿದ್ದು. ಲೋಕಸಭೆ ಚುನಾವಣೆ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಈಗಾಗಲೇ ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಸರ್ಕಾರ ನಡೆಸುತ್ತಿದ್ದು, ಇದೇ ಮೈತ್ರಿಯನ್ನು ಲೋಕಸಭೆ ಚುನಾವಣೆಗೆ ವಿಸ್ತರಿಸುವ ಉಮೇದಿನಿಂದ, ಇರುವ 40 ಸೀಟುಗಳಲ್ಲಿ ಬಿಜೆಪಿ ಹಾಗೂ ಜೆಡಿಯು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕೆಂಬುದರ ಬಗ್ಗೆ ಇಂದು ಇಬ್ಬರೂ ನಾಯಕರು ಮಾತುಕತೆಯಾಡಲಿದ್ದಾರೆ.
ಕೆಲವು ತಿಂಗಳುಗಳ ಹಿಂದೆಯಷ್ಟೆ ಎರಡೂ ಪಕ್ಷಗಳೂ ಸ್ವತಂತ್ರ್ಯವಾಗಿ ಲೋಕಸಭೆ ಚುನಾವಣೆ ಎದುರಿಸುವದಾಗಿ ಹೇಳಿದ್ದವು. ಆದರೆ ತೃತೀಯರಂಗ ಗಟ್ಟಿಯಾದ ಕಾರಣ ಎರಡೂ ಪಕ್ಷಗಳು ನಿರ್ಣಯ ಬದಲಿಸಿ ಒಟ್ಟಿಗೆ ಚುನಾವಣೆ ಎದುರಿಸುವ ನಿರ್ಣಯಕ್ಕೆ ಬಂದಿವೆ.

ಇಂದು ಬೆಳಿಗ್ಗೆ ಅಮಿತ್ ಶಾ ಅವರು ಪಾಟ್ನಾ ತಲುಪಿದ್ದು, ಸರ್ಕಾರಿ ವಸತಿ ಗೃಹದಲ್ಲಿ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ರಾಷ್ಟ್ರಾಧ್ಯಕ್ಷ ನಿತೀಸ್ ಕುಮಾರ್ ಅವರೊಂದಿಗೆ ಉಪಹಾರ ಸೇವಿಸಿದ್ದಾರೆ. ಅವರ ಜೊತೆಗೆ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಸಹ ಹಾಜರಿದ್ದರು.
ಒಂದೇ ದಿನದಲ್ಲಿ ಎರಡು ಬಾರಿ ಈ ಇಬ್ಬರೂ ನಾಯಕರು ಭೇಟಿ ಆಗುತ್ತಿದ್ದು, ಬೆಳಗಿನ ಉಪಹಾರದ ನಂತರ ರಾತ್ರಿ ಮುಖ್ಯಮಂತ್ರಿ ನಿತೇಶ್ ಕುಮಾರ್ ಅವರು ತಮ್ಮ ನಿವಾಸದಲ್ಲಿ ಅಮಿತ್ ಶಾ ಅವರಿಗಾಗಿ ಭೋಜನಕೂಟ ಏರ್ಪಡಿಸಿದ್ದಾರೆ.
2013ರಲ್ಲಿ ಎನ್‌ಡಿಎ ತೊರೆದು ತೃತೀಯರಂಗ ಸೇರಿದ್ದ ನಿತೇಶ್ ಕುಮಾರ್ ಕಳೆದ ವರ್ಷವಷ್ಟೆ ಲಾಲೂ ಪ್ರಸಾದ್ ಜೊತೆ ಮೈತ್ರಿ ಮುರಿದುಕೊಂಡು ಬಿಜೆಪಿ ಜೊತೆ ಕೈಜೋಡಿಸಿದ್ದರು. ಆ ನಂತರವೂ ಎರಡೂ ಪಕ್ಷಗಳಿಗೆ ಮುನಿಸು ಇದ್ದೇ ಇತ್ತು. ಆದರೆ ಇಂದಿನ ಭೇಟಿ ಅದನ್ನು ಬದಿಗೆ ಸರಿಸಿದೆ.
ಬಿಜೆಪಿಯು, ಜೆಡಿಯುಗೆ ಗೌರವಯುತ ಎನ್ನಬಹುದಾದಷ್ಟು ಸ್ಥಾನಗಳನ್ನು ಬಿಟ್ಟುಕೊಡಲು ಒಪ್ಪಿದೆ, ಎನ್ನಲಾಗುತ್ತಿದೆ. ಎನ್‌ಡಿಎ ಯಿಂದ ಹೊರಬಂದಿದ್ದ ಜೆಡಿಯುಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಸೀಟು ಮಾತ್ರವೇ ಗೆದ್ದಿತ್ತು.
ಇಂದಿನ ಅಮಿತ್ ಶಾ ಹಾಗೂ ನಿತೀಶ್ ಕುಮಾರ್ ಭೇಟಿ ಬಿಹಾರದಲ್ಲಿ ಆರ್‌ಜೆಡಿ ಪಕ್ಷಕ್ಕೆ ದೊಡ್ಡ ಹಿನ್ನಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಬಿಹಾರ ಕಾಂಗ್ರೆಸ್ ಹಣೆಯ ಮೇಲೂ ಚಿಂತೆಯ ಗೆರೆಗಳನ್ನು ಮೂಡಿಸಿದೆ.











Click it and Unblock the Notifications