ಮನಮೋಹನ್ ಸಿಂಗ್ ಸ್ಮಾರಕ ವಿವಾದದ ನಡುವೆ ಪ್ರಣಬ್ ಮುಖರ್ಜಿ ಸ್ಮಾರಕ ನಿರ್ಮಿಸಲು ಮುಂದಾದ ಕೇಂದ್ರ
ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣ ಸ್ಥಳ ಆಯ್ಕೆ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ನಡೆಯುವಾಗಲೇ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
2012 ರಿಂದ 2017ರವರೆಗೆ ಭಾರತದ ರಾಷ್ಟ್ರಪತಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪ್ರಣಬ್ ಮುಖರ್ಜಿ 2020ರಲ್ಲಿ ನಿಧನರಾದರು. ಪ್ರಣಬ್ ಮುಖರ್ಜಿ ಅವರ ಮಗಳು ಶರ್ಮಿಷ್ಠಾ ಮುಖರ್ಜಿ ಮಂಗಳವಾರ ತಾವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದ ಫೋಟೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಣಬ್ ಮುಖರ್ಜಿಯವರ ಸ್ಮಾರಕ ನಿರ್ಮಾಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಧನ್ಯವಾದ ಅರ್ಪಿಸಿದರು. ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳ ನಿಯೋಜಿತ ಸ್ಮಾರಕ ಸಂಕೀರ್ಣವಾದ 'ರಾಷ್ಟ್ರೀಯ ಸ್ಮೃತಿ ಸ್ಥಳ'ದಲ್ಲಿ ಪ್ರಣಬ್ ಮುಖರ್ಜಿ ಅವರ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಿರುವ ಪತ್ರದ ಪ್ರತಿಯನ್ನು ಹಂಚಿಕೊಂಡಿರುವ ಅವರು, ನಮ್ಮ ಕುಟುಂಬ ಈ ನಿರ್ಧಾರವನ್ನು ಗೌರವಿಸುತ್ತದೆ ಎಂದು ಹೇಳಿದರು.
ಸ್ಮಾರಕ ನಿರ್ಮಾಣ ಮಾಡುವಂತೆ ಕೇಳಿಲ್ಲ ಎಂದು ನಮ್ಮ ಕುಟುಂಬ ಕೇಳಿಲ್ಲ, ಕೇಂದ್ರ ಸರ್ಕಾರದ ಈ ನಿರ್ಧಾರ ನಮ್ಮ ಹೃದಯ ಗೆದ್ದಿದೆ, ನನ್ನ ಹೃದಯದಿಂದ ಧನ್ಯವಾದ ಮತ್ತು ಕೃತಜ್ಞತೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಪಿಸುತ್ತೇನೆ ಎಂದು ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.
ಪ್ರಣಬ್ ಮುಖರ್ಜಿಯವರು ನಾವು ಗೌರವವನ್ನು ಕೇಳಬಾರದು ಅದೇ ಬರಬೇಕು ಎನ್ನುತ್ತಿದ್ದರು. ಅವರ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಸ್ಮಾರಕ ನಿರ್ಮಾಣಕ್ಕೆ ನಿರ್ಧಾರ ಮಾಡಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಅವರ ಮಗಳಾಗಿ ನನ್ನ ಸಂತೋಷವನ್ನು ವ್ಯಕ್ತಪಡಿಸಲು ಪದಗಳು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
ಮನಮೋಹನ್ ಸಿಂಗ್ ಸ್ಮಾರಕ ವಿವಾದ
ಡಿಸೆಂಬರ್ 26ರಂದು ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ದೆಹಲಿಯ ನಿಗಮಬೋಧ ಘಾಟ್‌ನಲ್ಲಿ ಯೋಜಿಸಲಾಗಿತ್ತು. ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣ ಮಾಡುವ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.
ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಕೂಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಾಜಿ ಪ್ರಧಾನಿಯೊಬ್ಬರಿಗೆ ಅಂತ್ಯಕ್ರಿಯೆ ಮತ್ತು ಸ್ಮಾರಕ ಸರ್ಕಾರ ಸೂಕ್ತ ಸ್ಥಳವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಭಾರತದ ಮೊದಲ ಸಿಖ್ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಉದ್ದೇಶಪೂರ್ವಕವಾದ ಅವಮಾನವಲ್ಲದೆ ಬೇರೇನೂ ಇಲ್ಲ ಎಂದು ಟೀಕಿಸಿದ್ದರು.












Click it and Unblock the Notifications