ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ನೀಡುವ AFSPA ನಾಗಾಲ್ಯಾಂಡ್‌ನಲ್ಲಿ 6 ತಿಂಗಳು ವಿಸ್ತರಣೆ
ಕೊಹಿಮಾ, ಡಿಸೆಂಬರ್ 30: ವಿವಾದದ ನಡುವೆಯೂ ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ನೀಡುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾನೂನನ್ನು (AFSPA) ನಾಗಾಲ್ಯಾಂಡ್‌ನಲ್ಲಿ 6 ತಿಂಗಳುಗಳ ಕಾಲ ವಿಸ್ತರಣೆ ಮಾಡಿದೆ. ಭದ್ರತಾ ಪಡೆಗಳ ಗುಂಡಿನ ದಾಳಿಗೆ ಡಿಸೆಂಬರ್ 4 ರಂದು ನಾಗಾಲ್ಯಾಂಡ್‌ನಲ್ಲಿ 14 ನಾಗರಿಕರು ಸಾವನ್ನಪ್ಪಿದರು ಮತ್ತು 30 ಜನರು ಗಾಯಗೊಂಡಿದ್ದು ಈಗ ಈ ಕಾನೂನನ್ನು ವಿಸ್ತರಣೆ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಪ್ರಮುಖವಾಗಿ ಆಂತರಿಕ ಗಲಭೆಯನ್ನು ತಡೆಯಲು ಅಸಮರ್ಥವಾಗಿರುವ ರಾಜ್ಯದಲ್ಲಿ ಈ AFSPA ಕಾನೂನು ಜಾರಿಯಲ್ಲಿದೆ. ಈ ಕಾನೂನು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ನೀಡುತ್ತದೆ. ಹಾಗೂ ಕಾನೂನು ವಿನಾಯಿತಿಯನ್ನು ಕೂಡಾ ನೀಡುತ್ತದೆ. ಈ ಕಾನೂನನ್ನು ನಾಗಾಲ್ಯಾಂಡ್‌ನಲ್ಲಿ ರದ್ದು ಮಾಡಬೇಕು ಎಂದು ಈ ಕಾನೂನು ವಿರೋಧ ಹೋರಾಟ ಮಾಡುತ್ತಿರುವ ಮಾನವ ಹಕ್ಕು ಹೋರಾಟಗಾರರು ಮಾತ್ರವಲ್ಲದೇ ನಾಗಾಲ್ಯಾಂಡ್ ಸರ್ಕಾರವು ಕೂಡಾ ಕೇಂದ್ರ ಸರ್ಕಾರವನ್ನು ಆಗ್ರಹ ಮಾಡಿದೆ. ಈ ನಡುವೆ ಕೇಂದ್ರ ಸರ್ಕಾರ ಈ ಕಾನೂನನ್ನು ನಾಗಾಲ್ಯಾಂಡ್‌ನಲ್ಲಿ ಆರು ತಿಂಗಳುಗಳ ಕಾಲ ವಿಸ್ತರಣೆ ಮಾಡಿದೆ.
ನಾಗಾಲ್ಯಾಂಡ್ ಸೇನಾ ಕಾರ್ಯಾಚರಣೆ ವೇಳೆ 14 ನಾಗರಿಕರ ಹತ್ಯೆ ನಡೆದಿದೆ. ಕಳೆದ ಡಿಸೆಂಬರ್ 4 ರಂದು ಮಯನ್ಮಾರ್ ಗಡಿಗೆ ಹೊಂದಿಕೊಂಡಿರುವ ನಾಗಾಲ್ಯಾಂಡ್ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನಾಗರಿಕರನ್ನೇ ಉಗ್ರರು ಎಂದು ತಪ್ಪಾಗಿ ಭಾವಿಸಿದ ಯೋಧರು ಗುಂಡಿನ ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ರಾಜ್ಯದಲ್ಲಿ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ನೀಡುವ ಈ ಕಾನೂನನ್ನು ರದ್ದು ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಯೋಧರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲು ವಿಶೇಷ ತನಿಖಾ ತಂಡಕ್ಕೆ ಭಾರತೀಯ ಸೇನೆಯು ಅನುಮತಿಯನ್ನು ನೀಡಿದೆ ಎಂದು ಮೂಲಗಳು ಹೇಳಿದೆ. ನಾಗಾಲ್ಯಾಂಡ್ ಹತ್ಯಾಕಾಂಡಕ್ಕೆ ಸಂಬಂಧಿಸಿ ವಿಚಾರಣೆ ಮಾಡುತ್ತಿರುವ ವಿಶೇಷ ತನಿಖಾ ತಂಡವು ಅಧಿಕಾರಿಗಳು ಈ ಹಿಂದೆ ಸೇನಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಯೋಧರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದಾರೆ. ಇನ್ನು ಈಗಾಗಲೇ ಈ ವಿಶೇಷ ತನಿಖಾ ತಂಡವು 21 ಪ್ಯಾರಾ ಸ್ಪೆಷಲ್ ಫೋರ್ಸ್ ಯೋಧರ ಹೇಳಿಕೆಯನ್ನು ಸಂಗ್ರಹಿಸಿದೆ. ಈ ನಡುವೆ ಈ ಕಾನೂನನ್ನು ಮಣಿಪುರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ.
ಮಣಿಪುರ ವಿಧಾನಸಭೆ ಚುನಾವಣೆಗೂ ಈ ಕಾನೂನಿಗೂ ಏನು ನಂಟು?
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾನೂನು (AFSPA) ಜಾರಿಯಲ್ಲಿರುವ ನಾಗಾಲ್ಯಾಂಡ್‌ನಲ್ಲಿ ಈ ಅಧಿಕಾರದಿಂದಾಗಿಯೇ 14 ನಾಗರಿಕರು ಸಾವನ್ನಪ್ಪಿದ ಬಳಿಕ ಮಣಿಪುರದಲ್ಲಿ ಈ ಕಾನೂನು ಭಾರೀ ಸದ್ದು ಮಾಡುತ್ತಿದೆ. ಅದಕ್ಕೆ ಮುಖ್ಯ ಕಾರಣ ವಿಧಾನಸಭೆ ಚುನಾವಣೆ ಆಗಿದೆ. ಮುಂದಿನ ವರ್ಷ ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನಾಗಾಲ್ಯಾಂಡ್‌ನಂತೆಯೇ ಮಣಿಪುರದಲ್ಲಿಯೂ ಈ AFSPA ಕಾನೂನು ಇದೆ. ನಾಗಾಲ್ಯಾಂಡ್‌ನಲ್ಲಿ ಹತ್ಯಾಕಾಂಡ ನಡೆದ ಬಳಿಕ ಮಣಿಪುರದಲ್ಲಿ ಈ ಕಾನೂನನ್ನು ರದ್ದು ಮಾಡಬೇಕು ಎಂಬುವುದು ಪ್ರಮುಖ ಚುನಾವಣಾ ವಿಚಾರವಾಗಿದೆ. ಬಿಜೆಪಿಯ ಎರಡು ಪ್ರಮುಖ ಮಿತ್ರ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಈಗಾಗಲೇ ಎಎಫ್‌ಎಸ್‌ಪಿಎ ಅನ್ನು ರದ್ದು ಮಾಡುವಂತೆ ಆಗ್ರಹ ಮಾಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಕೂಡಾ ಈ ಕಾಯ್ದೆ ರದ್ದು ಮಾಡಲು ಆಗ್ರಹ ಮಾಡಿದೆ. ಇನ್ನು ಈ ಕಾಯ್ದೆ ರದ್ಧತಿಯನ್ನೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. "2022 ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ಮೊದಲ ಕ್ಯಾಬಿನೆಟ್ ಸಭೆಯಲ್ಲಿ AFSPA ರದ್ಧತಿ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ," ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications