Smriti Irani: ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಭಾರೀ ಹಿನ್ನಡೆ, ಕ್ಷೇತ್ರ ವಾಪಸ್ ಪಡೆಯುವತ್ತಾ ಕಾಂಗ್ರೆಸ್
ಲಕ್ನೋ, ಜೂನ್. 04: ರಾಹುಲ್ ಗಾಂಧಿಗೆ ಬಹಿರಂಗ ಸವಾಲು ಹಾಕಿ ತಮ್ಮ ವಿರುದ್ಧ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದ ಸಚಿವ ಸ್ಮೃತಿ ಇರಾನಿ ಅಮೇಥಿಯಲ್ಲಿ ಸದ್ಯ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ 57,911 ಮತಗಳ ಅಂತರದಿಂದ ಮುಂದಿದ್ದಾರೆ.
2019 ಕ್ಕೆ ಹೋಲಿಸಿದರೆ 2024 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರ ಭಾರಿ ಕುತೂಹಲ ಕೆರಳಿಸಿದೆ. ಕಳೆದ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದ ಸ್ಮೃತಿ ಇರಾನಿ ಈ ಬಾರಿ ಕ್ಷೇತ್ರ ಕಳೆದುಕೊಳ್ಳುವ ಭಯದಲ್ಲಿದ್ದಾರೆ.

ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಹಿನ್ನಡೆ
ಸುಮಾರು 60 ಸಾವಿರ ಮತಗಳ ಅಂತರದಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ ಸಚಿವೆ ಸ್ಮೃತಿ ಇರಾನಿ. ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ2,09,510 ಮತಗಳನ್ನು ಪಡೆದಿದು ಮುಂದಿದ್ದು, ಸ್ಮೃತಿ ಇರಾನಿ 1,51,599 ಮತಗಳನ್ನು ಪಡೆದಿದ್ದಾರೆ. ಆರಂಭದಿಂದಲೂ ಸ್ಮೃತಿ ಇರಾನಿ ಹಿನ್ನಡೆ ಅನುಭವಿಸಿದ್ದಾರೆ. ಹೀಗಾಗಿ ಕ್ಷೇತ್ರ ವಾಪಸ್ ಪಡೆಯುವತ್ತಾ ಕಾಂಗ್ರೆಸ್ ಹೆಜ್ಜೆಯಿಟ್ಟಿದೆ.
2019 ರಲ್ಲಿ ಸ್ಮೃತಿ ಇರಾನಿಯವರ ಗಮನಾರ್ಹ ಗೆಲುವು
ಕಾಂಗ್ರೆಸ್‌ನ ಭದ್ರಕೋಟೆಯಾದ ಅಮೇಥಿ ಲೋಕಸಭಾ ಕ್ಷೇತ್ರವು 2019 ರಲ್ಲಿ ಬಿಜೆಪಿ ಪಾಲಾಗಿತ್ತು. ಸ್ಮೃತಿ ಇರಾನಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು 50,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಇತಿಹಾಸ ಬರೆದಿದ್ದರು. ಈ ಬಾರಿ ಕಾಂಗ್ರೆಸ್ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿದ್ದು, ಅವರು ಸ್ಮೃತಿ ಇರಾನಿ ಅವರನ್ನು ಸೋಲಿಸುವತ್ತ ಮುನ್ನುಗ್ಗುತ್ತಿದ್ದಾರೆ.
ಜೂನ್ 1 ರಂದು ಮತದಾನ ಮುಗಿದ ನಂತರ ಬಂದ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ಗಳು ಅಮೇಥಿಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ನಡುವೆ ನೆಕ್ ಟು ನೆಕ್ ಫೈಟ್ ಇರುತ್ತದೆ ಎಂದಿತ್ತು. ಜೊತೆಗೆ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಗೆಲುವು ಸಾಧಿಸುತ್ತಾರೆ ಎಂದಿದ್ದವು. ಆದರೆ, ಅದು ತಲೆಕೆಳಗಾಗಿದೆ.












Click it and Unblock the Notifications