National Highway: ಹೆದ್ದಾರಿಗೆ ಭೂಮಿ ನೀಡುವ ಆಸ್ತಿ ಮಾಲೀಕರಿಗೆ ಗುಡ್‌ನ್ಯೂಸ್
ಬೆಂಗಳೂರು, ಮಾರ್ಚ್ 18: ಕೇಂದ್ರ ಸರ್ಕಾರ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುತ್ತದೆ. ಆಸ್ತಿ ಮಾಲೀಕರು ಪರಿಹಾರವನ್ನು ಪಡೆದು, ಆಸ್ತಿಯನ್ನು ನೀಡುತ್ತಾರೆ. ಆದರೆ ಯೋಜನೆ ಅಂದುಕೊಂಡ ಹಾಗೆ ಸಾಗದಿದ್ದರೆ ಆಸ್ತಿ ಮಾಲೀಕರು ತಮ್ಮ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಇನ್ನು ಮುಂದೆ ಇಂತಹ ಯೋಜನೆಗೆ ಭೂಮಿ ನೀಡುವ ಆಸ್ತಿ ಮಾಲೀಕರಿಗೆ ನೆಮ್ಮದಿ ತರುವ ವಿಚಾರವೊಂದಿದೆ.
ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಕಾಯ್ದೆಗೆ ತಿದ್ದುಪಡಿಯನ್ನು ತರಲು ಮುಂದಾಗಿದೆ. ಈಗಿರುವ ಕಾಯ್ದೆಯಲ್ಲಿ ಹಲವು ನಿಯಮಗಳನ್ನು ಬದಲಾವಣೆ ಮಾಡುತ್ತಿದ್ದು, ಒಂದು ವೇಳೆ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಯೋಜನೆ 5 ವರ್ಷಗಳ ತನಕ ಜಾರಿಯಾಗದಿದ್ದರೆ ಭೂಮಿಯನ್ನು ಮೂಲ ಮಾಲೀಕರಿಗೆ ವಾಪಸ್ ನೀಡುವ ನಿಯಮ ಕುರಿತು ಶಿಫಾರಸು ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಕಳಿಸಲಾಗಿದೆ. ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ಘೋಷಣೆ ಮಾಡಿದ ಮೂರು ತಿಂಗಳ ಬಳಿಕ ಪರಿಹಾರ ಸಂಬಂಧ ಹೆದ್ದಾರಿ ಪ್ರಾಧಿಕಾರ ಅಥವ ಭೂ ಮಾಲೀಕರು ಯಾವುದೇ ಆಕ್ಷೇಪಣೆ ಸಲ್ಲಿಕೆ ಮಾಡಲು ಅವಕಾಶವಿಲ್ಲ ಎಂದು ನಿಯಮದಲ್ಲಿ ಬದಲಾವಣೆ ಮಾಡಲಾಗುತ್ತದೆ.
ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆಗೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಭೂ ಸ್ವಾಧೀನವನ್ನು ತ್ವರಿತಗೊಳಿಸುವುದು, ಈ ವಿಚಾರದಲ್ಲಿ ಮಧ್ಯಸ್ಥಿಕೆ ಕಡಿಮೆ ಮಾಡಲು ಸಚಿವಾಲಯ ಹಲವಾರು ಕ್ರಮಗಳನ್ನು ಶಿಫಾರಸು ಮಾಡಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ಅನುಮೋದನೆ ಪಡೆಯಲಾಗುತ್ತದೆ.
ಈ ತಿದ್ದುಪಡಿ ನಿಯಮಗಳಲ್ಲಿ ಪ್ರಮುಖವಾಗಿರುವುದು ಆಸ್ತಿಯನ್ನು ವಾಪಸ್ ನೀಡುವುದು. ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು 5 ವರ್ಷಗಳ ತನಕ ಬಳಕೆ ಮಾಡದಿದ್ದರೆ ಅದನ್ನು ಭೂ ಮಾಲೀಕರಿಗೆ ವಾಪಸ್ ನೀಡುವ ಶಿಫಾರಸು ಆಸ್ತಿ ಮಾಲೀಕರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಅಂದಾಜಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ರೈಲ್ವೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಆಸ್ತಿಗಳ ಸ್ವಾಧೀನ ಸಹ ವಿಳಂಬವಾಗುತ್ತಿದೆ. ಆದ್ದರಿಂದ ಹೊಸ ತಿದ್ದುಪಡಿಯಂತೆ ರೈಲ್ವೆ, ವಾಯುಪಡೆ ಸೇರಿದಂತೆ ಇತರ ಆಸ್ತಿಗಳ ಹಸ್ತಾಂತರಕ್ಕೆ ಸಹ ಪರಿಷ್ಕೃತ ನಿಯಮವನ್ನು ರೂಪಿಸಲಾಗಿದೆ.
ಒಮ್ಮೆ ಆಸ್ತಿಯನ್ನು ಗುರುತಿಸಿ, ಭೂ ಸ್ವಾಧೀನದ ಅಧಿಸೂಚನೆ ಹೊರಡಿಸಿದ ಬಳಿಕ ಆ ಜಾಗದಲ್ಲಿ ಹೊರೆ ಹೆಚ್ಚಿಸುವ ಯಾವುದೇ ವಹಿವಾಟು ನಡೆಸಲು ಸಹ ಅನುಮತಿ ಇರುವುದಿಲ್ಲ. ಇದರಿಂದಾಗಿ ಭೂ ಸ್ವಾಧೀನ ಮಾಡಿಕೊಂಡ ಬಳಿಕ ಆಸ್ತಿ ಮಾಲೀಕರು ಅಲ್ಲಿ ಮನೆ, ಅಂಗಡಿ ನಿರ್ಮಾಣ ಮಾಡಿ ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆ ಇಡುವುದು ತಪ್ಪಲಿದೆ.
ರಾಷ್ಟ್ರೀಯ ಹೆದ್ದಾರಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ವಿವಿಧ ಇಲಾಖೆಗಳ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ನಾಗರಿಕ ವಿಮಾನಯಾನ, ರಕ್ಷಣೆ, ರೈಲ್ವೆ, ಹಡಗು, ಕಂದಾಯ, ಗಣಿ ಮತ್ತು ಪರಿಸರ ಇಲಾಖೆಗಳು ತಮ್ಮ ಅಭಿಪ್ರಾಯಗಳನ್ನು ಸಲ್ಲಿಕೆ ಮಾಡಿದ್ದವು. ಎಲ್ಲವನ್ನೂ ಒಟ್ಟುಗೂಡಿಸಿ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ನಿಯಮಗಳ ತಿದ್ದುಪಡಿ ಕರಡು ರೂಪಿಸಿದೆ.
ಹೊಸ ನಿಯಮದ ಪ್ರಕಾರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಯೋಜನೆ ಭೂ ಸ್ವಾಧೀನಕ್ಕಾಗಿ ಪೋರ್ಟಲ್ ಆರಂಭಿಸಲಿದೆ. ಟೋಲ್ ನಿರ್ಮಾಣ, ಹೆದ್ದಾರಿ ಪಕ್ಕದ ಮೂಲ ಸೌಲಭ್ಯ ನಿರ್ಮಾಣ ಮಾಡಲು ಸಹ ಸರ್ಕಾರ ಭೂ ಸ್ವಾಧೀನವನ್ನು ಮಾಡಿಕೊಳ್ಳಲಿದೆ. ಇದಕ್ಕೂ ಸಹ ಹೊಸ ನಿಯಮಗಳು ಜಾರಿಗೆ ಬರಲಿವೆ.












Click it and Unblock the Notifications