Amarnath Yatra 2024: ಅಮರಾನಾಥ ಯಾತ್ರೆಯ ಮೊದಲ ದಿನ ಗುಹಾ ದೇಗುಲಕ್ಕೆ ಭೇಟಿ ನೀಡಿದ ಭಕ್ತರೆಷ್ಟು?
ಶ್ರೀನಗರ, ಜೂನ್. 30: ಬಿಗಿ ಭದ್ರತೆಯ ನಡುವೆ ನಡೆಸಲಾಗುತ್ತಿರುವ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ ವಾರ್ಷಿಕ ಯಾತ್ರೆಯ ಮೊದಲ ದಿನವಾದ ಶನಿವಾರ 13,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಮರನಾಥನ ಪವಿತ್ರ ಗುಹಾ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಮೊದಲ ಬ್ಯಾಚ್ ಯಾತ್ರಿಕರು ಬಾಲ್ಟಾಲ್ ಮತ್ತು ನುನ್ವಾನ್‌ನಲ್ಲಿರುವ ಬೇಸ್ ಕ್ಯಾಂಪ್‌ಗಳಿಂದ 3,880 ಮೀಟರ್ ಎತ್ತರದಲ್ಲಿರುವ ಗುಹಾ ದೇಗುಲಕ್ಕೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅಮರನಾಥ ಯಾತ್ರೆಯ ಪ್ರಾರಂಭದಲ್ಲಿ ಯಾತ್ರಾರ್ಥಿಗಳನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, ಭಗವಾನ್ ಶಿವನ ದರ್ಶನವು ಭಕ್ತರಲ್ಲಿ ಅಪಾರ ಶಕ್ತಿ ತುಂಬುತ್ತದೆ ಎಂದು ಹೇಳಿದ್ದಾರೆ.

"ಪವಿತ್ರ ಅಮರನಾಥ ಯಾತ್ರೆಯ ಪ್ರಾರಂಭದಲ್ಲಿ ಎಲ್ಲಾ ಯಾತ್ರಾರ್ಥಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಬಾಬಾ ಬರ್ಫಾನಿಯ ದರ್ಶನದೊಂದಿಗೆ ಸಂಬಂಧಿಸಿದ ಈ ಯಾತ್ರೆಯು ಭಗವಾನ್ ಶಿವನ ಭಕ್ತರಲ್ಲಿ ಅಪಾರ ಶಕ್ತಿಯನ್ನು ತುಂಬುತ್ತದೆ. ಎಲ್ಲಾ ಭಕ್ತರು ಶಿವನ ಆಶೀರ್ವಾದದಿಂದ ಸಮೃದ್ಧಿಯಾಗಲಿ. ಜೈ ಬಾಬಾ ಬರ್ಫಾನಿ" ಎಂದು ಪ್ರಧಾನಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಗುಹಾ ದೇಗುಲಕ್ಕೆ ಸುರಕ್ಷಿತ, ಸುಗಮ ಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. "ಶ್ರೀ ಅಮರನಾಥ ಯಾತ್ರೆಯು ಭಾರತೀಯ ಸಂಸ್ಕೃತಿಯ ಸಾಂಪ್ರದಾಯಿಕತೆ ಮತ್ತು ನಿರಂತರತೆಯ ಶಾಶ್ವತ ಸಂಕೇತವಾಗಿದೆ. ಈ ದೈವಿಕ ಯಾತ್ರೆಯು ಇಂದಿನಿಂದ ಪ್ರಾರಂಭವಾಗುತ್ತಿದೆ. ಎಲ್ಲಾ ಭಕ್ತರ ದರ್ಶನಕ್ಕಾಗಿ ನಾನು ಶುಭ ಹಾರೈಸುತ್ತೇನೆ" ಎಂದು ಅಮಿತ್ ಶಾ ಹೇಳಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ನಮ್ಮ ಸರ್ಕಾರವು ಭಕ್ತರ ಸುರಕ್ಷಿತ, ಸುಗಮ ಪ್ರಯಾಣಕ್ಕೆ ಬದ್ಧವಾಗಿದೆ. ಭಕ್ತರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಸರ್ಕಾರವು ಸಾಧ್ಯವಿರುವ ಎಲ್ಲ ವ್ಯವಸ್ಥೆಯನ್ನು ಮಾಡಿದೆ. ಹರಹರ ಮಹಾದೇವ್" ಎಂದಿದ್ದಾರೆ.

ಕಡಿದಾದ ಮಾರ್ಗದ ಅಮರನಾಥ ಯಾತ್ರೆ
ಅಮರನಾಥ್ ಯಾತ್ರೆಯು ಮುಂಜಾನೆ ಪ್ರಾರಂಭವಾಯಿತು. ಅನಂತನಾಗ್‌ನ ಸಾಂಪ್ರದಾಯಿಕ 48 ಕಿಮೀ ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂದರ್‌ಬಾಲ್‌ನಲ್ಲಿ 14-ಕಿಮೀ ಕಡಿಮೆ ಆದರೆ ಕಡಿದಾದ ಬಾಲ್ಟಾಲ್ ಮಾರ್ಗದಲ್ಲಿ ಯಾತ್ರೆ ಆರಂಭವಾಗಿದೆ. "ಮೊದಲ ದಿನ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗದ ದರ್ಶನಕ್ಕಾಗಿ 13,736 ಯಾತ್ರಿಕರು ಗುಹಾ ದೇಗುಲಕ್ಕೆ ಭೇಟಿ ನೀಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾತ್ರಾರ್ಥಿಗಳಲ್ಲಿ 3,300 ಮಹಿಳೆಯರು, 52 ಮಕ್ಕಳು, 102 ಸಾಧುಗಳು ಮತ್ತು 682 ಭದ್ರತಾ ಸಿಬ್ಬಂದಿ ಎರಡು ಮಾರ್ಗಗಳಿಂದ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶುಕ್ರವಾರ ಜಮ್ಮುವಿನ ಭಗವತಿ ನಗರದ ಯಾತ್ರಿ ನಿವಾಸ ಬೇಸ್ ಕ್ಯಾಂಪ್‌ನಿಂದ 4,603 ಯಾತ್ರಿಗಳ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದ್ದರು.
ಸುಗಮ ಯಾತ್ರೆಗಾಗಿ ಬಿಗಿ ಭದ್ರತೆ
ಅಮರನಾಥ ಯಾತ್ರೆ ಸುಗಮವಾಗಿ ನಡೆಯಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸರು, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಮತ್ತು ಇತರ ಅರೆಸೇನಾ ಪಡೆಗಳ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ಮಾರ್ಗದುದ್ದಕ್ಕೂ ನಿಯೋಜಿಸಲಾಗಿದೆ. ವೈಮಾನಿಕ ಕಣ್ಗಾವಲು ಕೂಡ ನಡೆಸಲಾಗುತ್ತಿದೆ. 52 ದಿನಗಳ ಯಾತ್ರೆಯು ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.
ಮುನ್ನೆಚ್ಚರಿಕೆಯಾಗಿ ಕೇಂದ್ರ ಸಾರ್ವಜನಿಕ ವಲಯದ ಒಎನ್‌ಜಿಸಿ ಕಾಶ್ಮೀರದ ಅಮರನಾಥ ಬೇಸ್ ಕ್ಯಾಂಪ್‌ಗಳಲ್ಲಿ ಎರಡು 100 ಹಾಸಿಗೆಗಳ ಆಸ್ಪತ್ರೆಗಳನ್ನು ರೆಡಿ ಮಾಡಿದೆ. ಕಳೆದ ವರ್ಷ 4.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಗುಹಾ ದೇಗುಲಕ್ಕೆ ಪೂಜೆ ಸಲ್ಲಿಸಿದ್ದರು.












Click it and Unblock the Notifications