ಐಸ್ ಕ್ರೀಮ್ ತಿಂದು ಆಸ್ಪತ್ರೆ ಸೇರಿದ 150 ಜನ! ಯಾಕೆ ಗೊತ್ತಾ?
ಒಡಿಶಾ: ಬೇಸಿಗೆ ಬಂತು ಅಂದ್ರೆ ಸಾಕು ಕೂಲ್ ಡ್ರಿಂಗ್ಸ್ ಹಾಗೂ ಐಸ್ ಕ್ರೀಮ್ ವ್ಯಾಪಾರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತದೆ. ಅದರಲ್ಲೂ ಬಿಸಿಯ ಧಗೆಯಿಂದ ಪಾರಾಗಲು ದೊಡ್ಡವರಿಂದ ಹಿಡಿದು ಪುಟಾಣಿ ಮಕ್ಕಳ ತನಕ ಎಲ್ಲರೂ ಐಸ್ ಕ್ರೀಮ್ ಮೊರೆ ಹೋಗುತ್ತಾರೆ. ಆದ್ರೆ ಹೀಗೆ ಬೇಸಿಗೆ ಅಂತಾ ಐಸ್ ಕ್ರೀಮ್ ತಿಂದ 150ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ಸೇರಿ ನರಳುತ್ತಿದ್ದಾರೆ.
ಭಾರತದಲ್ಲಿ ಐಸ್ ಕ್ರೀಮ್ ಬ್ಯುಸಿನೆಸ್ ದೊಡ್ಡದಾಗಿ ಬೆಳೆದಿದೆ. ಅದ್ರಲ್ಲೂ ತಳ್ಳೋ ಗಾಡಿಗಳ ಐಸ್ ಕ್ರೀಮ್‌ಗೆ ಭಾರಿ ಬೇಡಿಕೆ ಇದೆ. ಬೇಸಿಗೆ ಸಮಯದಲ್ಲಿ ತಳ್ಳೋ ಗಾಡಿ ಮೂಲಕವೇ ಲಕ್ಷ ಲಕ್ಷ ದುಡಿಯುತ್ತಾರೆ ವ್ಯಾಪಾರಿಗಳು. ಹೀಗೆ ತಳ್ಳೋ ಗಾಡಿಯಲ್ಲಿ ಬಂದ ಐಸ್ ಕ್ರೀಮ್ ತಿಂದ 150ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾ ರಾಜ್ಯದ ಕೊರಾಪುಟ್ ಜಿಲ್ಲೆ ಸಿಮಿಲಿಗುಡಾದಲ್ಲಿ ಘಟನೆ ನಡೆದಿದೆ. ಚಪ್ಪರಿಸಿಕೊಂಡು ಐಸ್ ಕ್ರೀಮ್ ತಿಂದ ಮಹಿಳೆಯರು ಮಕ್ಕಳು ಸೇರಿ 150ಕ್ಕೂ ಹೆಚ್ಚು ಜನ ಈಗ ಆಸ್ಪತ್ರೆಯಲ್ಲಿ ಗ್ಲೂಕೋಸ್ ಹಾಕಿಸಿಕೊಂಡು ಮಲಗಿದ್ದಾರೆ (Ice Cream).

ಐಸ್ ಕ್ರೀಮ್ ಘಟನೆ ನಡೆದಿದ್ದೇಗೆ?
ಅಷ್ಟಕ್ಕೂ ಕೊರಾಪುಟ್ ಜಿಲ್ಲೆಯ ಸಿಮಿಲಿಗುಡಾ ಪ್ರದೇಶದಲ್ಲಿ ಸಂಜೆ ವೇಳೆ ತಳ್ಳೋ ಗಾಡಿಯ ಮೇಲೆ ಬಂದ ವ್ಯಕ್ತಿ ಸುತ್ತಮುತ್ತಲ ಗ್ರಾಮದಲ್ಲಿ ಐಸ್ ಕ್ರೀಮ್ ಮಾರಿದ್ದಾನೆ. ಜನ ಧಗೆಯಿಂದ ಬೇಸತ್ತು, ತಾವು ಐಸ್ ಕ್ರೀಮ್ ತಗೋಂಡು ತಮ್ಮ ಮಕ್ಕಳಿಗೂ ಅದನ್ನ ತಿನ್ನಿಸಿದ್ದರು. ಆದ್ರೆ ಹೀಗೆ ಐಸ್ ಕ್ರೀಮ್ ತಿಂದ ನಂತರವೇ ಅವರಿಗೂ ಗೊತ್ತಾಗಿದ್ದು ಸಂಕಷ್ಟದಲ್ಲಿ ಸಿಲುಕಿದ್ದೀವಿ ಅನ್ನೋ ಸತ್ಯ. ಅಂದು ರಾತ್ರಿ ಊಟ ಮುಗಿಸಿ ಐಸ್ ಕ್ರೀಮ್ ತಿಂದು ಮಲಗಿದವರೆಲ್ಲಾ ಹೊಟ್ಟೆ ನೋವು, ವಾಂತಿ ಬೇಧಿಯಿಂದ ಬಳಲುತ್ತಿದ್ದಾರೆ. ಈ ಪೈಕಿ 70ಕ್ಕೂ ಹೆಚ್ಚು ಜನರನ್ನ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಐಸ್ ಕ್ರೀಮ್ ಮಾರಿದ್ದ ವ್ಯಕ್ತಿಗೆ ಹುಡುಕಾಟ!
ಅಷ್ಟಕ್ಕೂ ಇದೀಗ ಚೇತರಿಕೆ ಕಂಡಿರುವ 60ಕ್ಕೂ ಹೆಚ್ಚು ಜನರನ್ನು ಡಿಸ್ಚಾರ್ಜ್ ಮಾಡಿದ್ದು, ಉಳಿದ ಕೆಲವರ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಘಟನೆ ಬಗ್ಗೆ ಸ್ಥಳೀಯ ಆರೋಗ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ಗಂಭೀರ ಚರ್ಚೆ ಶುರುವಾಗಿದ್ದು, ಇವರಿಗೆಲ್ಲಾ ಐಸ್ ಕ್ರೀಮ್ ಮಾರಿದ್ದ ವ್ಯಕ್ತಿಗೆ ಹುಡುಕಾಟ ನಡೆಯುತ್ತಿದೆ. ಸ್ಥಳೀಯ ಶಾಸಕರು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಒಟ್ನಲ್ಲಿ ಮೊನ್ನೆ ಮೊನ್ನೆ ರೈಲು ದುರಂತದ ಕಾರಣಕ್ಕೆ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಈ ರಾಜ್ಯದಲ್ಲಿ ಐಸ್ ಕ್ರೀಮ್ ಕೂಡ ಸದ್ದು ಮಾಡಿದೆ. ಒಡಿಶಾದಲ್ಲಿ ಈ ಘಟನೆ ನಂತರ ಜನ್ರು ಐಸ್ ಕ್ರೀಮ್ ತಿನ್ನಲು ಹಿಂದೆ, ಮುಂದೆ ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಮಕ್ಕಳಿಗೂ ಐಸ್ ಕ್ರೀಮ್ ಕೊಡಿಸಲು ಪೋಷಕರು ಯೋಚಿಸುವ ಪರಿಸ್ಥಿತಿ ಎದುರಾಗಿದೆ. ಅಕಸ್ಮಾತ್ ಐಸ್ ಕ್ರೀಮ್ ಮಾರಿದ್ದ ವ್ಯಕ್ತಿ ಈಗ ಮತ್ತೆ ಅದೇ ಊರಿಗೆ ಹೋದರೆ, ಗ್ರಾಮದ ಜನರು ರೊಚ್ಚಿಗೇಳೋದು ಗ್ಯಾರಂಟಿ.












Click it and Unblock the Notifications