ಅಲಹಾಬಾದ್ ವಿವಿ ವಿದ್ಯಾರ್ಥಿ ಮುಖಂಡನಿಗೆ ಗುಂಡಿಟ್ಟು ಹತ್ಯೆ
ಅಲಹಾಬಾದ್ ವಿ.ವಿ. ವಿದ್ಯಾರ್ಥಿ ಮುಖಂಡ ಸುಮಿತ್ ಶುಕ್ಲಾನನ್ನು ಗುಂಡಿಟ್ಟು ಕೊಲ್ಲಲಾಗಿದೆ. ಆತನ ತಲೆಗೆ ಇಪ್ಪತ್ತೈದು ಸಾವಿರ ರುಪಾಯಿ ಬಹುಮಾನ ಇತ್ತು. ಬುಧವಾರದಂದು ವಿ.ವಿ. ಹಾಸ್ಟೆಲ್ ನಲ್ಲಿ ನಡೆದ ಪಾರ್ಟಿಯಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ಲಾ ಅಲಿಯಾಸ್ ಅಚ್ಯುತಾನಂದ್ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. 2012ರಲ್ಲಿ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಆತ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ. ಆದರೆ ಸೋತಿದ್ದ. ಈ ವರ್ಷದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ವಿವಿಧ ಅಭ್ಯರ್ಥಿಗಳನ್ನು ಬೆಂಬಲಿಸಿ, ಪಾಲ್ಗೊಂಡಿದ್ದ.
ವರದಿಗಳ ಪ್ರಕಾರ, ವಿದ್ಯಾರ್ಥಿ ಮುಖಂಡನ ಜನ್ಮದಿನದ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ. ಪಿಸಿ ಬ್ಯಾನರ್ಜಿ ಹಾಸ್ಟೆಲ್ ನಲ್ಲಿ ಪಾರ್ಟಿ ನಡೆಯುತ್ತಿತ್ತು. ಆ ವೇಳೆ ಬಂದ ಯುವಕನೊಬ್ಬ ಆತನನ್ನು ಮೊದಲು ಮಾತನಾಡಿಸಿದ್ದಾನೆ. ಆ ನಂತರ ತುಂಬ ಹತ್ತಿರದಿಂದ ಗುಂಡು ಹಾರಿಸಿ, ಪರಾರಿಯಾಗಿದ್ದಾನೆ. ಮೊದಲಿಗೆ ಶುಕ್ಲಾನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ನಂತರ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಗಾಯಗಳಿಂದ ಮೃತಪಟ್ಟಿದ್ದ.

ತನಿಖೆ ನಡೆಯುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಧಿಕೃತವಾಗಿ ದೂರು ಸ್ವೀಕರಿಸಿದ ತಕ್ಷಣ ಎಫ್ ಐಆರ್ ದಾಖಲಿಸಲಾಗುವುದು ಎಂದು ಎಸ್ಪಿ ಬ್ರಿಜೇಶ್ ಶ್ರೀವಾತ್ಸವ ತಿಳಿಸಿದ್ದಾರೆ.












Click it and Unblock the Notifications