ಕಾಬೂಲ್‌ನಲ್ಲಿ ಭಾರತೀಯರ ಸುರಕ್ಷತೆ ಕ್ರಮ; ವಿದೇಶಾಂಗ ಇಲಾಖೆ
ನವದೆಹಲಿ, ಆಗಸ್ಟ್ 16; ಅಫ್ಘಾನಿಸ್ತಾನದಲ್ಲಿನ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಹಾಗೂ ಅಲ್ಲಿ ಭಾರತದ ಹಿತಾಸಕ್ತಿ ಕಾಪಾಡಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
Recommended Video
ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಆತಂಕ ಮೂಡಿಸಿದೆ. ಕಾಬೂಲ್ ನಲ್ಲಿ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಸೇರಿದಂತೆ ಸುಮಾರು 200 ಭಾರತೀಯರು ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ. ಸದ್ಯ ಐಟಿಬಿಪಿ ಸಿಬ್ಬಂದಿಗಳು ಭಾರತೀಯರಿಗೆ ರಕ್ಷಣೆಯನ್ನು ನೀಡುತ್ತಿದ್ದಾರೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ವಿ ಈ ಕುರಿತು ಮಾತನಾಡಿದ್ದಾರೆ. ಭಾರತ ಅಫ್ಘಾನಿಸ್ತಾನದ ಸಿಖ್ ಮತ್ತು ಹಿಂದೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದೆ. ಆ ದೇಶ ತೊರೆಯಲು ಇಚ್ಚಿಸುವವರನ್ನು ವಾಪಸ್ ಕರೆಸಿಕೊಳ್ಳಲು ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ನಿರಂತರವಾಗಿ ಉನ್ನತ ಮಟ್ಟದಲ್ಲಿ ಮೇಲ್ವಿಚಾರರಣೆ ನಡೆಸಲಾಗುತ್ತಿದೆ. ಭಾರತೀಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಭಾನುವಾರವೇ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. 126 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾನುವಾರ ರಾತ್ರಿ ದೆಹಲಿಗೆ ಬಂದಿದೆ. ಇನ್ನೂ 200 ಜನರು ಕಾಬೂಲ್‌ನಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಶಸ್ತ್ರ ಸಜ್ಜಿತ ಐಟಿಬಿಪಿ ಸಿಬ್ಬಂದಿಗಳು ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತೀಯರಿಗೆ ರಕ್ಷಣೆಯನ್ನು ನೀಡುತ್ತಿದ್ದಾರೆ. ಅಗತ್ಯ ಇರುವ ತನಕ ಅವರು ರಕ್ಷಣೆ ನೀಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರತದ ಒಂದು ವಿಮಾನವಿದೆ. ಆದರೆ ಹಾರಾಟಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ.
ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಅಧ್ಯಕ್ಷರ ನಿವಾಸ ತಮ್ಮ ವಶದಲ್ಲಿದೆ ಎಂದು ತಾಲಿಬಾನಿಗಳು ಭಾನುವಾರ ರಾತ್ರಿಯೇ ಘೋಷಣೆ ಮಾಡಿದ್ದಾರೆ. ಅಧ್ಯಕ್ಷರ ಪರಾರಿ ಬಳಿಕ ಕಾಬೂಲ್‌ನಿಂದ ವಿಮಾನಗಳ ಹಾರಾಟ ಬಂದ್ ಮಾಡಲಾಗಿದೆ.
ವಿವಿಧ ದೇಶಗಳ ಸಾವಿರಾರು ಜನರು ಸ್ವದೇಶಕ್ಕೆ ಮರಳಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಉಂಟಾಗಿದೆ. ತಮ್ಮ ದೇಶದ ಪ್ರಜೆಗಳ ಸುರಕ್ಷತೆ ಬಗ್ಗೆ ವಿವಿಧ ದೇಶಗಳು ಆತಂಕದಲ್ಲಿವೆ.
ಅಫ್ಘಾನಿಸ್ತಾನದ ರಾಜಕೀಯ ಪಕ್ಷಗಳು ವಿದೇಶಿಯರು ಸುರಕ್ಷಿತವಾಗಿ, ಗೌರವಯುತವಾಗಿ ಪ್ರಯಾಣ ಮಾಡಲು ಅವಕಾಶ ನೀಡಬೇಕು ಎಂದು ವಿಶ್ವ ಸಮುದಾಯ ಸೋಮವಾರ ಆಗ್ರಹಿಸಿದೆ. ತಾಲಿಬಾನಿಗಳು ಒಪ್ಪಿಗೆ ನೀಡುವ ತನಕ ವಿಮಾನ ಪ್ರಯಾಣ ಸಾಧ್ಯವಿಲ್ಲ.
ಅಲ್ಬೇನಿಯಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಹಮಾಸ್, ಬೆಲ್ಜಿಯಂ, ಬುರ್ಕಿನಾ ಫಾಸೊ, ಕೆನಡಾ, ಚಿಲಿ, ಕೊಲಂಬಿಯಾ ಸೇರಿದಂತೆ ವಿವಿಧದ ದೇಶಗಳು ಒಟ್ಟಾಗಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಅಂತರಾಷ್ಟ್ರೀಯ ಸಮುದಾಯವಾಗಿ ನಾವು ಎಲ್ಲಾ ರೀತಿಯ ನೆರವನ್ನು ನೀಡಲು ಸಿದ್ಧ ಎಂದು ಪ್ರಕಟಣೆಯಲ್ಲಿ ತಿಳಿಸಿವೆ.
ತಾಲಿಬಾನ್ ಉಗ್ರರು ಕಾಬೂಲ್ ಪ್ರವೇಶ ಮಾಡುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಈ ಇಡೀ ದೇಶ ತಾಲಿಬಾನ್ ಉಗ್ರರ ವಶದಲ್ಲಿದೆ. ಆದ್ದರಿಂದ ಭೀತಿಗೊಂಡಿರುವ ಜನರು ದೇಶವನ್ನು ತೊರೆಯಲು ತೀರ್ಮಾನಿಸಿದ್ದು, ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ತುರ್ತು ಸಭೆ ನಡೆಸಿತು. ಅಫ್ಘಾನಿಸ್ತಾನದಲ್ಲಿ ಕರಾಳ ದಿನಗಳು ಮರುಕಳಿಸುವ ಭೀತಿ ಎದುರಾಗಿದೆ, ಮಾನವ ಹಕ್ಕುಗಳನ್ನು ಎತ್ತಿಹಿಡಿಯಬೇಕಿದೆ. ಅಂತರಾಷ್ಟ್ರೀಯ ಸಮುದಾಯ ಈ ಕುರಿತು ಮಾತನಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿದ್ದ ಅಮೆರಿಕ ರಾಯಭಾರಿ ಲಿಂಡಾ ಥಾಮಸ್ ಅಮೆರಿಕದಲ್ಲಿ ಅಫ್ಘಾನಿಸ್ತಾನದ ಪ್ರಜೆಗಳಿಗೆ ಪುನರ್ವಸತಿ ಭರವಸೆ ನೀಡುತ್ತಿದ್ದೇವೆ. ಇತರೆ ರಾಷ್ಟ್ರಗಳು ಸಹ ಈ ಭರವಸೆ ಕೊಟ್ಟಿವೆ ಎಂದರು.
ಸಭೆಯಲ್ಲಿ ಮಾತನಾಡಿದ ಭಾರತದ ರಾಯಭಾರಿ ಟಿ. ಎಸ್. ತಿರುಮೂರ್ತಿ ತಾಲಿಬಾನಿಗಳು ನೆರೆ ದೇಶಗಳನ್ನು ಆಕ್ರಮಿಸಬಾರದು. ಈ ಬಗ್ಗೆ ಖಚಿತಪಡಿಸಿಕೊಂಡರೆ ಮಾತ್ರ ನಾವು ಸುರಕ್ಷಿತ ಎಂದು ಹೇಳಿದರು.












Click it and Unblock the Notifications