Mahakumbh 2025: ಮಹಾಕುಂಭಮೇಳ ಅವಧಿ ವಿಸ್ತರಣೆಗೆ ಅಖಿಲೇಶ್ ಯಾದವ್ ಮನವಿ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳದಲ್ಲಿ ಕೋಟ್ಯಂತರ ಜನ ಪುಣ್ಯ ಸ್ನಾನ ಮಾಡಿದ್ದಾರೆ. ದೇಶದ ಮೂಲೆ ಮೂಲೆಯಿಂದ ಜನ ಆಗಮಿಸುತ್ತಿದ್ದು ತ್ರಿವೇಣಿ ಸಂಗಮದಲ್ಲಿ ಸೇರುತ್ತಿದ್ದಾರೆ. ಈಗ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಹಾಕುಂಭಮೇಳದ ಅವಧಿಯನ್ನು ವಿಸ್ತರಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅಖಿಲೇಶ್ ಯಾದವ್, ಮಹಾಕುಂಭದ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಉತ್ತರ ಪ್ರದೇಶ ಸರ್ಕಾರವನ್ನು ಆಗ್ರಹಿಸಿದರು. ಇದರಿಂದ ವಯಸ್ಸಾದವರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಯೋಗಿ ಆದಿತ್ಯನಾಥ್ ಸರ್ಕಾರವು ಮಹಾ ಕುಂಭಮೇಳದಲ್ಲಿ ಭಾಗವಹಿಸಿದವರ ಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಮಹಾಕುಂಭದಲ್ಲಿ ಈವರೆಗೆ 60 ಕೋಟಿ ಜನ ಸ್ನಾನ ಮಾಡಿರಬಹುದು. ಆದರೆ ಸರ್ಕಾರ ನಿಖರವಾದ ಅಂಕಿಅಂಶಗಳನ್ನು ಬಹಿರಂಗಪಡಿಸುತ್ತಿಲ್ಲ. ಉದ್ದೇಶಪೂರ್ವಕವಾಗಿ ಕಡಿಮೆ ಅಂಕಿಸಂಖ್ಯೆ ತೋರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರಾದರೂ ಆಡಳಿತ ಮತ್ತು ನಿರ್ವಹಣಾ ವಿಚಾರಗಳನ್ನು ಅಧ್ಯಯನ ಮಾಡಿದರೆ ಸರ್ಕಾರದ ವೈಫಲ್ಯ ಮತ್ತು ದುರುಪಯೋಗ ಬಯಲಾಗುತ್ತದೆ ಎಂದು ಹೇಳಿದರು.
ಅನೇಕ ಜನ ಇನ್ನೂ ಬಂದಿಲ್ಲ
65-70 ವರ್ಷ ಮೇಲ್ಪಟ್ಟ ವೃದ್ಧರು ಅತಿಯಾದ ಜನಸಂದಣಿಯ ಕಾರಣದಿಂದ ಪುಣ್ಯಸ್ನಾನ ಮಾಡಲು ಇನ್ನೂ ಬಂದಿಲ್ಲ. ಇನ್ನೂ ಕೋಟ್ಯಂತರ ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಯಸಿದ್ದಾರೆ ವಿವಿಧ ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ. ಒಂದು ಕಾಲದಲ್ಲಿ ಕುಂಭಮೇಳ 75 ದಿನಗಳ ಕಾಲ ನಡೆಯುತ್ತಿತ್ತು. ಚಕ್ರವರ್ತಿ ಹರ್ಷವರ್ಧನನ ಕಾಲದಲ್ಲಿ ಇನ್ನೂ ಹೆಚ್ಚು ಕಾಲ ನಡೆಯುತ್ತಿತ್ತು, ಎಲ್ಲಾ ಧರ್ಮದವರು ದೂರದ ಊರುಳಿಂದ ಬರುತ್ತಿದ್ದರು. ಆದ್ದರಿಂದ ಸರ್ಕಾರ ಮಹಾಕುಂಭದ ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.
ಮಹಾಕುಂಭಮೇಳದಲ್ಲಿ ವಯಸ್ಸಾದ ಭಕ್ತರಿಗಾಗಿ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಅವರು ಹೇಳಿದರು. ಸಂಚಾರದಟ್ಟಣೆ ಮತ್ತು ಕಾಲ್ತುಳಿತದ ಭಯದಿಂದ ಕೋಟ್ಯಂತರ ಭಕ್ತರು ಭಾಗವಹಿಸಿಲ್ಲ ಎಂದರು. ಡ್ರೋನ್ ತಂತ್ರಜ್ಞಾನವ್ನನು ಸರಿಯಾಗಿ ಬಳಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.












Click it and Unblock the Notifications