ಲೋಕಸಭೆಯಲ್ಲಿ ಅಖಿಲೇಶ್ ಯಾದವ್ - ಅಮಿತ್ ಶಾ ಜಟಾಪಟಿ
ವಕ್ಫ್ (ತಿದ್ದುಪಡಿ) ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಪಕ್ಷಗಳು ಮತ್ತು ಬಿಜೆಪಿ ನಾಯಕರ ನಡುವೆ ಭಾರಿ ವಾಗ್ವಾದ ನಡೆಯುತ್ತಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧಿಕಾರವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದು, ಇಬ್ಬರು ನಾಯಕರ ನಡುವೆ ವಾಗ್ವಾದ ನಡೆಯಿತು.
ಅಖಿಲೇಶ್ ಯಾದವ್ ಮಾಡಿದ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅಖಿಲೇಶ್ ಯಾದವ್ ಸ್ಪೀಕರ್ ಅವರನ್ನು ಉದ್ದೇಶಿ "ನಿಮ್ಮ ಹಕ್ಕುಗಳು ಮತ್ತು ನಮ್ಮ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ನೀವು ಪ್ರಜಾಪ್ರಭುತ್ವದ ನ್ಯಾಯಾಧೀಶರು ಎಂದು ನಾನು ಕೇಳಿದ್ದೇನೆ. ನಿಮ್ಮ ಹಕ್ಕುಗಳನ್ನು ಇವರು ಕಸಿದುಕೊಳ್ಳುತ್ತಿದ್ದು ನಾವು ನಿಮಗಾಗಿ ಹೋರಾಟ ಮಾಡಬೇಕಾಗುತ್ತದೆ" ಎಂದು ಹೇಳಿದರು.

ಅಖಿಲೇಶ್ ಯಾದವ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, "ಇದು ಸಭಾಪತಿಗೆ ಮಾಡುತ್ತಿರುವ ಅವಮಾನ, ಸ್ಪೀಕರ್‌ನ ಹಕ್ಕುಗಳು ಪ್ರತಿಪಕ್ಷಗಳಿಗೆ ಸೇರಿಲ್ಲ, ಅದು ಇಡೀ ಸದನಕ್ಕೆ ಸೇರಿದೆ. ಅಹಂಕಾರದಿಂದ ಮಾತನಾಡಬೇಡಿ. ನೀವು ಸ್ಪೀಕರ್‌ನ ಹಕ್ಕುಗಳ ರಕ್ಷಕರಲ್ಲ" ಎಂದು ಹೇಳಿದರು.
ಇಬ್ಬರ ನಡುವೆ ವಾಗ್ವಾದ
ಬಳಿಕ ಅಖಿಲೇಶ್ ಯಾದವ್‌ರನ್ನು ಉದ್ದೇಶಿಸಿ ಸ್ಪೀಕರ್ ಓಂ ಬಿರ್ಲಾ ಅವರು, ಸದನದ ಇತರ ಸದಸ್ಯರು ಕುರ್ಚಿಯ ಬಗ್ಗೆ ಪ್ರತಿಕ್ರಿಯಿಸಬಾರದು ಎಂದರು. ಇದು ನನ್ನ ನಿರೀಕ್ಷೆಯಾಗಿದ್ದು, ಸ್ಪೀಕರ್ ಮೇಲೆ ಯಾವುದೇ ವೈಯಕ್ತಿಕ ಟೀಕೆಗಳನ್ನು ಮಾಡಬಾರದು ಎಂದರು.
ವಕ್ಫ್ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿದ ಅಖಿಲೇಶ್ ಯಾದವ್, ರಾಜಕೀಯ ಉದ್ದೇಶದಿಂದ ಈ ಮಸೂದೆಯನ್ನು ಮಾಡಲಾಗುತ್ತಿದೆ ಎಂದರು. ಚುನಾವಣೆಗೆ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಇರುವಾಗ, ಜನರನ್ನು ಏಕೆ ನಾಮನಿರ್ದೇಶನ ಮಾಡಬೇಕು? ಯಾವುದೇ ಸಮುದಾಯದ ಹೊರಗಿನವರು ಇತರ ಧಾರ್ಮಿಕ ಸಂಸ್ಥೆಗಳ ಭಾಗವಾಗಿಲ್ಲ. ಮುಸ್ಲಿಮೇತರರನ್ನು ವಕ್ಫ್ ಸಂಸ್ಥೆಗಳಲ್ಲಿ ಸೇರಿಸುವುದರಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾದ ಬಳಿಕ ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸಲು ಬಿಜೆಪಿ ಈ ಕಾನೂನು ಮಾಡಲು ಹೊರಟಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದರು.
ರಾಜ್ಯ ವಕ್ಫ್ ಬೋರ್ಡ್‌ಗಳ ಅಧಿಕಾರಗಳು, ವಕ್ಫ್ ಆಸ್ತಿಗಳ ನೋಂದಣಿ ಮತ್ತು ಸಮೀಕ್ಷೆ ಮತ್ತು ಅತಿಕ್ರಮಣ ತೆಗೆಯುವಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧ ಪಕ್ಷಗಳು ವಿರೋಧಿಸಿವೆ.












Click it and Unblock the Notifications