ಅಯೋಧ್ಯೆ ರಾಮಮಂದಿರಕ್ಕೆ 108 ಕಡ್ಡಿಯ ಬೆಳ್ಳಿ ಪೊರಕೆ: ವಿಶೇಷತೆ ತಿಳಿಯಿರಿ
ಅಯೋಧ್ಯೆ, ಜನವರಿ 30: ಅಯೋಧ್ಯೆಯ ಶ್ರೀರಾಮನಿಗೆ ದೇಶದಾದ್ಯಂತ ಶತಕೋಟಿ ಭಕ್ತರಿದ್ದಾರೆ. ರಾಮನ ಮೇಲಿನ ಅನನ್ಯ ಭಕ್ತಿಗೆ ಭಕ್ತರು ತಮ್ಮಿಂದಾದ ವಸ್ತುಗಳನ್ನು ಹರಕೆ ರೂಪದಲ್ಲಿ ನೀಡುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಆರಂಭವಾಗಿನಿಂದಲೂ ದೇಣಿಗೆ ನೀಡುತ್ತಾ ಬಂದಿರುವ ರಾಮನ ಭಕ್ತರು ಇದೀಗ ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ಉಡುಗೊರೆಗಳನ್ನು ಹರಕೆ ರೂಪದಲ್ಲಿ ನೀಡಿ ರಾಮ ಸೇವೆ ಮಾಡುತ್ತಿದ್ದಾರೆ.
ಅಖಿಲ ಭಾರತೀಯ ಮಾಂಗ್ ಸಮಾಜವು ಅಯೋಧ್ಯೆ ರಾಮಮಂದಿರಕ್ಕೆ ವಿಶೇಷವಾದ ಉಡುಗೊರೆಯನ್ನು ನೀಡಿದೆ. ರಾಮ ಮಂದಿರದ ಗರ್ಭಗುಡಿ ಸ್ವಚ್ಛಗೊಳಿಸಲು ಅಖಿಲ ಭಾರತೀಯ ಮಾಂಗ್ ಸಮಾಜವು 1.751 ಕೆಜಿ ತೂಕದ ಬೆಳ್ಳಿ ಪೊರಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಬೃಹತ್ ಆಕಾರದ ಈ ಬೆಳ್ಳಿ ಪೊರಕೆಯನ್ನು ಗರ್ಭಗುಡಿ ಸ್ವಚ್ಛತೆಗೆ ಬಳಸಿ ಎಂದು ಅಖಿಲ ಭಾರತೀಯ ಮಾಂಗ್ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.

ಈ ಬೆಳ್ಳಿ ಪೊರಕೆಯನ್ನು 11 ದಿನಗಳಲ್ಲಿ ತಯಾರಿಸಲಾಗಿದ್ದು, ಬೆಳ್ಳಿ ಪೊರಕೆ 108 ಕಡ್ಡಿಗಳನ್ನು ಹೊಂದಿದೆ. ಸಾಮಾನ್ಯವಾಗಿ ಮನೆ ಸ್ವಚ್ಛಗೊಳಿಸುವ ಪೊರಕೆಯನ್ನು ಲಕ್ಷ್ಮೀಗೆ ಹೋಲಿಸಲಾಗುತ್ತದೆ. ಹೀಗಾಗಿ ಅಯೋಧ್ಯೆ ರಾಮಮಂದಿರಕ್ಕೆ ನೀಡಿರುವ ಬೆಳ್ಳಿ ಪೊರಕೆಯ ಮೇಲ್ಭಾಗದಲ್ಲಿ ಸುಂದರವಾದ ಕಮಲದ ಮೇಲೆ ಕುಳಿತಿರುವ ಲಕ್ಷ್ಮೀ ದೇವಿಯ ಚಿತ್ರವನ್ನು ಕೆತ್ತಲಾಗಿದೆ. ಹಾಗೂ ನವಿಲುಗಳನ್ನು ಸಹ ಕೆತ್ತಲಾಗಿದೆ.
ಅಖಿಲ ಭಾರತೀಯ ಮಾಂಗ್ ಸಮಾಜದ ಮುಖಂಡರು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತಂದು ಬೆಳ್ಳಿ ಪೊರಕೆಯನ್ನು ಅಯೋಧ್ಯೆಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೋಡುಗರು ಜೈ ಶ್ರೀರಾಮ್ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಖುಷಿ ಹಂಚಿಕೊಂಡಿರುವ ಭಾರತೀಯ ಮಾಂಗ್ ಸಮಾಜ ಮುಖಂಡರು 'ವಿಶ್ವದ ಮೊದಲ ಬೆಳ್ಳಿ ಪೊರಕೆಯನ್ನು ಶ್ರೀರಾಮನಿಗೆ ಅರ್ಪಿಸಿದ್ದೇವೆ. ದೀಪಾವಳಿಯ ದಿನದಂದು ಲಕ್ಷ್ಮೀ ದೇವಿಯ ರೂಪದಲ್ಲಿ ಪೊರಕೆಯನ್ನು ಪೂಜಿಸಲಾಗುತ್ತದೆ, ಅದಕ್ಕಾಗಿಯೇ ಅಖಿಲ ಭಾರತ ಮಾಂಗ್ ಸಮಾಜವು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಬೆಳ್ಳಿಯ ಪೊರಕೆಯನ್ನು ಊಡುಗೊರೆಯಾಗಿ ನೀಡಿದೆ. ಈ ಬೆಳ್ಳಿಯ ಪೊರಕೆಯನ್ನು ಅಯೋಧ್ಯೆ ರಾಮಮಂದಿರ ಗರ್ಭಗುಡಿಯ ಸ್ವಚ್ಛತೆಗೆ ಬಳಸಿ' ಎಂದು ಮನವಿ ಮಾಡಿದ್ದಾರೆ.

ರಾಮಮಂದಿರಕ್ಕೆ 101 ಕೆಜಿ ಚಿನ್ನ ನೀಡಿದ ದಿಲೀಪ್ ಕುಮಾರ್
ರಾಮಮಂದಿರಕ್ಕೆ ಕೋಟ್ಯಂತರ ಭಕ್ತರು ದೇಣಿಗೆ ನೀಡಿದ್ದಾರೆ. ಅದರಲ್ಲಿ ಪ್ರಮುಖರು ದಿಲೀಪ್ ಕುಮಾರ್.ವಿಲಖಿ ಮತ್ತು ಅವರ ಕುಟುಂಬ ವರು ಸೂರತ್‌ನ ಪ್ರಮುಖ ವಜ್ರ ವ್ಯಾಪಾರಿಗಳಾಗಿದ್ದು, ರಾಮಮಂದಿರಕ್ಕೆ 101 ಕೆಜಿ ಚಿನ್ನವನ್ನು ದಾನ ಮಾಡಿದ್ದಾರೆ. ಇದು ಸುಮಾರು 68 ಕೋಟಿ ರೂಪಾಯಿ ಮೌಲ್ಯದ ದೊಡ್ಡ ಕೊಡುಗೆಯಾಗಿದೆ. ಈ ಚಿನ್ನವನ್ನು ರಾಮಮಂದಿರದ ಬಾಗಿಲುಗಳು, ಗರ್ಭಗುಡಿ, ತ್ರಿಶೂಲ, ಡಮರು ಮತ್ತು ಕಂಬಗಳನ್ನು ಅಲಂಕರಿಸಲು ಬಳಸಲಾಗಿದೆ ಎನ್ನಲಾಗಿದೆ.












Click it and Unblock the Notifications