ಆಕಾಶ ಏರ್ ಹೊಸ ಮೆನು: ವಿಮಾನದೊಳಗೆ ಕರಾವಳಿಯ ಘಮಘಮಿಸುವ ಚಿಕನ್ ಪುಳಿಮುಂಚಿ, ಫಿಲ್ಟರ್ ಕಾಫಿ ಸ್ವಾದ!
ವಿಮಾನ ಪ್ರಯಾಣ ಎಂದರೆ ಕೇವಲ ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದಷ್ಟೇ ಅಲ್ಲ, ಅದೊಂದು ಸುಂದರ ಅನುಭವವೂ ಹೌದು. ಈ ಪ್ರಯಾಣದ ಅನುಭವವನ್ನ ಮತ್ತಷ್ಟು ಸುಂದರಗೊಳಿಸಲು ದೇಶದ ಜನಪ್ರಿಯ ವಿಮಾನಯಾನ ಸಂಸ್ಥೆಯಾದ ಆಕಾಶ ಏರ್ ಮುಂದಾಗಿದೆ.
ಪ್ರಯಾಣಿಕರ ನಾಲಿಗೆಯ ರುಚಿಯನ್ನ ತಣಿಸುವ ಉದ್ದೇಶದಿಂದ ತನ್ನ ಕೆಫೆ ಆಕಾಶದ ಅಡಿಯಲ್ಲಿ ಸಂಪೂರ್ಣ ಆಕಾಶ ಏರ್ ಹೊಸ ಮೆನು ಅನ್ನು ಸಂಸ್ಥೆ ಬಿಡುಗಡೆ ಮಾಡಿದೆ. ಇದರಲ್ಲಿ ನಮ್ಮ ದೇಸಿ ಸ್ವಾದದ ಜೊತೆಗೆ ಜಾಗತಿಕ ಶೈಲಿಯ ನವೀನ ತಿನಿಸುಗಳನ್ನು ಸಹ ಸೇರ್ಪಡೆ ಮಾಡಲಾಗಿದ್ದು, ವಿಮಾನದಲ್ಲಿ ಊಟ ಮಾಡುವ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಾಗಿದೆ.

ಕರಾವಳಿಯ ಚಿಕನ್ ಪುಳಿಮುಂಚಿ ಸುಶಿ ಸ್ವಾದ
ಈ ಹೊಸ ಮೆನುವಿನಲ್ಲಿ ಸಾಂಪ್ರದಾಯಿಕ ಹಾಗೂ ಜಾಗತಿಕ ಶೈಲಿಯ ಹಲವು ಬಗೆಯ ಹೊಸ ತಿನಿಸುಗಳನ್ನ ಪರಿಚಯಿಸಲಾಗಿದೆ. ವಿಶೇಷವಾಗಿ ಕರುನಾಡಿನ, ಅದರಲ್ಲೂ ಕರಾವಳಿ ಭಾಗದ ಅತ್ಯಂತ ಜನಪ್ರಿಯ ಖಾದ್ಯವಾಗಿರುವ 'ಚಿಕನ್ ಪುಳಿಮುಂಚಿ'ಯ ರುಚಿಯನ್ನು ಜಾಗತಿಕ ಮಟ್ಟದ ಸುಶಿ ಶೈಲಿಯಲ್ಲಿ ಬೆರೆಸಿ 'ಚಿಕನ್ ಪುಳಿಮುಂಚಿ ಸುಶಿ' ಎಂಬ ವಿನೂತನ ಖಾದ್ಯವಾಗಿ ನೀಡಲಾಗುತ್ತಿದೆ. ಇದು ಮಾಂಸಾಹಾರಿ ಪ್ರಿಯರಿಗೆ ಪ್ರಯಾಣದಲ್ಲಿ ಕರಾವಳಿಯ ಘಮವನ್ನ ನೆನಪಿಸಲಿದೆ.
ಇದರ ಜೊತೆಗೆ, ಪ್ರೋಟೀನ್ ಭರಿತವಾದ ವಿಯೆಟ್ನಾಮೀಸ್ ಚಿಕನ್ ಸಲಾಡ್, ಮ್ಯಾಂಗೋ ಆಚಾರಿ ರುಚಿಯೊಂದಿಗೆ ಲಭ್ಯವಿರುವ ಗ್ರಿಲ್ಡ್ ಚಿಕನ್ ಸ್ಟೀಕ್ ಹಾಗೂ ಏಷ್ಯನ್ ಚಿಕನ್ ಸ್ಯಾಂಡ್‌ವಿಚ್‌ಗಳನ್ನು ಸಹ ಪ್ರಯಾಣಿಕರು ಸವಿಯಬಹುದಾಗಿದೆ.
ಸಸ್ಯಾಹಾರಿಗಳಿಗೆ ಮತ್ತು ಜೈನ ಶೈಲಿಯ ಊಟವನ್ನು ಇಷ್ಟಪಡುವವರಿಗಾಗಿ ತಾಜಾ ತರಕಾರಿಗಳ 'ತಂದೂರಿ ಸೋಯಾ ರ್‍ಯಾಪ್' ಪರಿಚಯಿಸಲಾಗಿದೆ. ಇನ್ನು, ಮಕ್ಕಳಿಗಾಗಿಯೇ 'ಕಿಡ್ಸ್ ಸ್ಕೈ ಟ್ರೀಟ್ಸ್' ಎಂಬ ವಿಶೇಷ ಕಾಂಬೋ ಕೂಡ ಮೆನುವಿನಲ್ಲಿದೆ.
ದಕ್ಷಿಣ ಭಾರತದ ಫಿಲ್ಟರ್ ಕಾಫಿ ಹಾಗೂ ವಿಶಿಷ್ಟ ಪಾನೀಯಗಳು
ವಿಮಾನದಲ್ಲಿ ಊಟ ಮಾಡುವಾಗ ರಿಫ್ರೆಶ್ ಆಗಲು ಹೊಸ ಬಗೆಯ ಪಾನೀಯಗಳನ್ನ ಮೆನುವಿನಲ್ಲಿ ಸೇರಿಸಲಾಗಿದೆ. ಹಿಮಾಲಯದ ಬೆರ್ರಿ ಹಣ್ಣಿನಿಂದ ತಯಾರಿಸಿದ 'ಪೆಪ್ಪಿಂಗ್ ಸೀ ಬಕ್‌ಥಾರ್ನ್', ಕೊಲಂಬಿಯನ್ ಬ್ರೂ ದಕ್ಷಿಣ ಭಾರತದ ಫಿಲ್ಟರ್ ಕಾಫಿ ಹಾಗೂ ಸಕ್ಕರೆ ರಹಿತ ಕಾಫಿಯಂತಹ ವಿಶಿಷ್ಟ ಪಾನೀಯಗಳು ಪ್ರಯಾಣಿಕರಿಗೆ ಲಭ್ಯವಿವೆ.
ದಕ್ಷಿಣ ಭಾರತೀಯರಿಗೆ ವಿಮಾನದಲ್ಲಿಯೂ ಅಸಲಿ ಫಿಲ್ಟರ್ ಕಾಫಿಯ ರುಚಿ ಸಿಗುವುದು ವಿಶೇಷ.
ಈ ಹೊಸ ಮೆನುವಿನ ಕುರಿತು ಮಾಹಿತಿ ನೀಡಿರುವ ಆಕಾಶ ಏರ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ನಾರಾಯಣ್ ಟಿ.ವಿ., "ವಿಮಾನದೊಳಗೆ ನಾವು ನೀಡುವ ಆಹಾರವು ಪ್ರಯಾಣದ ಅನುಭವವನ್ನು ಇಮ್ಮಡಿಗೊಳಿಸುತ್ತದೆ. ಜೊತೆಗೆ ಆಯಾ ಪ್ರದೇಶದ ಸಂಸ್ಕೃತಿಯೊಂದಿಗೆ ನಮ್ಮನ್ನು ಬೆಸೆಯುತ್ತದೆ. ಭಾರತೀಯ ಮತ್ತು ಜಾಗತಿಕ ಶೈಲಿಯ, ಆರೋಗ್ಯಕರ ಹಾಗೂ ಪ್ರೋಟೀನ್-ಭರಿತ ಆಹಾರಗಳನ್ನ ಪ್ರಯಾಣಿಕರಿಗೆ ಒದಗಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ" ಎಂದು ತಿಳಿಸಿದ್ದಾರೆ.
ಕೆಫೆ ಆಕಾಶ: ಪರಿಸರ ಕಾಳಜಿ ಮತ್ತು ಹಬ್ಬಗಳ ಸಂಭ್ರಮ
2022ರಲ್ಲಿ ಆರಂಭವಾದಾಗಿನಿಂದಲೂ, ಆಕಾಶ ಏರ್ ಹಬ್ಬ ಹರಿದಿನಗಳ ಸಂದರ್ಭದಲ್ಲಿ ವಿಶೇಷ ಊಟವನ್ನ ನೀಡುತ್ತಾ ಬಂದಿದೆ. ದೀಪಾವಳಿ, ಸಂಕ್ರಾಂತಿ, ಕ್ರಿಸ್‌ಮಸ್, ರಂಜಾನ್, ಓಣಂ ಮುಂತಾದ ಹಬ್ಬಗಳ ಸಮಯದಲ್ಲಿ ಆಚರಣೆಗೆ ತಕ್ಕಂತೆ ವಿಶೇಷ ತಿನಿಸುಗಳನ್ನು ನೀಡಲಾಗುತ್ತದೆ.
ಪ್ರಯಾಣದ ಮಧ್ಯೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಕೆಫೆ ಆಕಾಶ ಮುಖಾಂತರ ಮೊದಲೇ ಕೇಕ್ ಆರ್ಡರ್ ಮಾಡುವ ಅವಕಾಶವೂ ಇದೆ.
ವಿಶೇಷವೆಂದರೆ, ಸಂಸ್ಥೆಯು ಪರಿಸರ ಸಂರಕ್ಷಣೆಗೂ ಹೆಚ್ಚು ಒತ್ತು ನೀಡಿದ್ದು, ಆಹಾರ ಪೊಟ್ಟಣಗಳನ್ನ ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ಕಾಗದದಿಂದ ತಯಾರಿಸಲಾಗುತ್ತಿದೆ. ಇದರಲ್ಲಿ ಯಾವುದೇ ಬ್ಲೀಚಿಂಗ್ ಅಥವಾ ರಾಸಾಯನಿಕಗಳನ್ನ ಬಳಸಲಾಗಿಲ್ಲ. ಜೊತೆಗೆ ಪ್ಲಾಸ್ಟಿಕ್ ಚಮಚಗಳ ಬದಲಿಗೆ ಪರಿಸರ ಸ್ನೇಹಿ ಮರದ ಚಮಚಗಳನ್ನ ನೀಡಲಾಗುತ್ತಿದೆ.
ಪ್ರಯಾಣಿಕರು ವಿಮಾನ ಹತ್ತುವ ಮುನ್ನವೇ ಸಂಸ್ಥೆಯ ವೆಬ್‌ಸೈಟ್, ಮೊಬೈಲ್ ಆ್ಯಪ್ ಅಥವಾ ಟ್ರಾವೆಲ್ ಏಜೆಂಟ್‌ಗಳ ಮೂಲಕ ಈ ಹೊಸ ಮೆನುವಿನ ತಿನಿಸುಗಳನ್ನ ಕಾಯ್ದಿರಿಸಬಹುದಾಗಿದೆ.


Click it and Unblock the Notifications
