ಎತ್ತು ಏರಿಗೆ.. ಕೋಣ ನೀರಿಗೆ: ಹಿಂಗ್ಯಾಕೆ ಮಹಾರಾಷ್ಟ್ರ ರಾಜಕೀಯ ಸ್ಥಿತಿ?
ಮಹಾರಾಷ್ಟ್ರ ರಾಜಕೀಯದಲ್ಲಿ ಕಳೆದ 4 ದಿನದಿಂದ ಸುನಾಮಿ ಎದ್ದಿದೆ. ಅದ್ರಲ್ಲೂ ಅಜಿತ್ ಪವಾರ್ ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ಕೈಕೊಟ್ಟು ಬಿಜೆಪಿ & ಶಿವಸೇನೆ ಸರ್ಕಾರದ ಕೈಹಿಡಿದ ಬಳಿಕ ಅಲ್ಲೋಲ, ಕಲ್ಲೋಲ ಸೃಷ್ಟಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ಇಬ್ಬರೂ ನಾಯಕರು ಎನ್‌ಸಿಪಿ ಶಾಸಕಾಂಗ ಸಭೆ ಕರೆದಿದ್ದು, ಯಾವ ಹೂವು ಯಾರ ಮುಡಿಗೋ.. ಎಂಬಂತಾಗಿದೆ. ಬನ್ನಿ ಹಾಗಿದ್ರೆ ಮಹಾರಾಷ್ಟ್ರ ರಾಜಕೀಯದ ಅಪ್‌ಡೇಟ್ ತಿಳಿಯೋಣ.
ಹೌದು ಕ್ಷಣಕ್ಕೊಂದು ತಿರುವು.. ದಿನಕ್ಕೊಂದು ಘಟನೆ.. ಅಂದಹಾಗೆ ಇದು ಮಹಾರಾಷ್ಟ್ರ ರಾಜಕೀಯದಲ್ಲಿ ಸದ್ಯದ ಪರಿಸ್ಥಿತಿ. ಮಹಾರಾಷ್ಟ್ರ ರಾಜಕೀಯ ಪ್ರತಿ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ದಿಢೀರ್ ಎನ್‌ಸಿಪಿ ಬಿಟ್ಟು ಶಿವಸೇನೆಯ ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ, ಬಂಡಾಯ ನಾಯಕ ಅಜಿತ್ ಪವಾರ್ ಇಂದು ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ಶರದ್ ಪವಾರ್ ಕೂಡ ಬಾಂಬ್ ಇಟ್ಟಿದ್ದು, ತಮ್ಮ ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಎನ್‌ಸಿಪಿ ಶಾಸಕಾಂಗ ಸಭೆಯಲ್ಲಿ ಯಾರು ಭಾಗವಹಿಸುತ್ತಾರೆ? ಯಾರೆಲ್ಲಾ ಕೈಕೊಡ್ತಾರೆ? ತಿಳಿಯೋಣ ಬನ್ನಿ.

ಅಜಿತ್ ಪವಾರ್ ಜೊತೆಗೆ 43 ಶಾಸಕರು?
ಈಗಾಗಲೇ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಅಂದರೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ತನ್ನ ಬಣದ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ಈ ಮೂಲಕ ಪಕ್ಷದ ಶಾಸಕಾಂಗ ಸಭೆಗೆ ಬಂದೇ ಬರಬೇಕು ಎಂದು ಸೂಚನೆ ನೀಡಿದೆ. ಆದರೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಮತ್ತೊಂದು ಬಣ ಇಂದೇ ಪ್ರತ್ಯೇಕ ಸಭೆ ಕರೆದಿದೆ. ಈಗಾಗಲೇ ತನ್ನ ಬಳಿಕ 43 ಶಾಸಕರ ಬಲ ಇದೆ ಎಂದು ಅಜಿತ್ ಪವಾರ್ ಹೇಳಿಕೊಳ್ಳುತ್ತಿರುವುದು ಈ ಸಂದರ್ಭದಲ್ಲಿ ಕುತೂಹಲ ಕೆರಳಿಸಿದೆ. ಯಾಕಂದ್ರೆ ಎನ್‌ಸಿಪಿ ಬಳಿ ಇರುವುದೇ ಕೇವಲ 53 ಶಾಸಕರು. ಹೀಗಾಗಿ ಯಾರಿಗೆ ಬಲ? ಯಾರಿಗೆ ಸೋಲು? ಎಂಬ ಚರ್ಚೆ ಶುರುವಾಗಿದೆ.
ಚಿಕ್ಕಪ್ಪ VS ಮಗನ ಭರ್ಜರಿ ಫೈಟಿಂಗ್!
ಅಕಸ್ಮಾತ್ 43 ಶಾಸಕರು ಅಜಿತ್ ಪರ ಇದ್ದಿದ್ದೇ ಆದರೆ ಎನ್‌ಸಿಪಿ ಮೇಲಿನ ಪೂರ್ಣ ಅಧಿಕಾರ ಅಜಿತ್ ಕೈಗೆ ಸಿಗುವುದು ಪಕ್ಕಾ. ಆಗ ಶರದ್ ಪವಾರ್ ಸಂಕಷ್ಟಕ್ಕೆ ಸಿಲುಕುವರು. ಇನ್ನು ಈಗಿನ ಪರಿಸ್ಥಿತಿಯಲ್ಲಿ ಎನ್‌ಸಿಪಿ ಪಕ್ 53 ಶಾಸಕರನ್ನು ಹೊಂದಿದೆ. ಇವರ ಪೈಕಿ 40ಕ್ಕೂ ಹೆಚ್ಚು ಶಾಸಕರು ಪಕ್ಷಾಂತರ ಮಾಡಿದರೆ ಸಂಕಷ್ಟ ಖಂಡಿತ. ಇದೇ ಕಾರಣಕ್ಕೆ ದಿಢೀರ್ ತಮ್ಮ ಬಳಿ ಇರುವ ಶಾಸಕರ ಲೆಕ್ಕ ತೆಗೆದುಕೊಳ್ಳಲು ಶರದ್ ಪವಾರ್ ಮುಂದಾಗಿದ್ದಾರೆ. ಆದರೆ ಇದು ಯಾವ ರೀತಿ ವರ್ಕೌಟ್ ಆಗಲಿದೆ ಅನ್ನೋದು ತಿಳಿಯಲು ಇನ್ನೂ ಕೆಲವು ಗಂಟೆಗಳ ತನಕ ಕಾಯಬೇಕು. ಸಂಜೆಯ ಒಳಗೆ ಎನ್‌ಸಿಪಿ ಪರಿಸ್ಥಿತಿ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

48 ಲೋಕಸಭೆ ಸ್ಥಾನಗಳ ಮೇಲೆ ಕಣ್ಣು?
ದೇಶದಲ್ಲಿ ಅತಿಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ 2ನೇ ಸ್ಥಾನ ಪಡೆದಿದೆ. 80 ಲೋಕಸಭಾ ಸ್ಥಾನ ಹೊಂದಿರುವ ಉತ್ತರ ಪ್ರದೇಶವನ್ನು ಬಿಟ್ಟರೆ, 48 ಲೋಕಸಭಾ ಸ್ಥಾನ ಹೊಂದಿರುವ ಮಹಾರಾಷ್ಟ್ರವೇ 2ನೇ ಸ್ಥಾನದಲ್ಲಿ ಇದೆ. ಹೀಗಾಗಿಯೇ ಮಹಾರಾಷ್ಟ್ರದ ಮೇಲೆ ರಾಜಕೀಯ ಹಿಡಿತ ಅತ್ಯಗತ್ಯ ಅನ್ನೋದು ಕಾಂಗ್ರೆಸ್ ಮತ್ತು ಬಿಜೆಪಿಯ ಒನ್‌ಲೈನ್ ಅಜೆಂಡಾ. ಮಹಾರಾಷ್ಟ್ರದಲ್ಲಿ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿಯೇ ಆಗಲಿ ಒಬ್ಬರೇ ನಿಂತು ಹೋರಾಡುವುದು ಕಷ್ಟ ಎನ್ನಬಹುದು. ಹೀಗಾಗಿ ಮಹಾರಾಷ್ಟ್ರದ ಮೇಲೆ ರಾಜಕೀಯ ಹಿಡಿತಕ್ಕಾಗಿ ಬಿಜೆಪಿ ಮತ್ತು ವಿಪಕ್ಷಗಳ ಮಧ್ಯೆ ರಿಯಲ್ ಫೈಟಿಂಗ್ ಶುರುವಾಗಿದೆ.

ಒಟ್ನಲ್ಲಿ ಒಬ್ಬರೇ ಚುನಾವಣೆ ಎದುರಿಸಲು ಆಗದು ಎಂಬ ಕಾರಣ ಬಿಜೆಪಿ ಪಕ್ಷ ಶಿವಸೇನೆ ಜೊತೆಗೆ ಮತ್ತು ಕಾಂಗ್ರೆಸ್ ನಾಯಕರು ಎನ್‌ಸಿಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ಈ ಸಂದರ್ಭದಲ್ಲೇ ಎನ್‌ಸಿಪಿ ಪೀಸ್ ಪೀಸ್ ಆಗುವ ಮುನ್ಸೂಚನೆ ಸಿಕ್ಕಿದ್ದು, ಇದರಿಂದ ಲೋಕಸಭೆ ಚುನಾವಣೆಗೆ ಮುನ್ನ ದೊಡ್ಡ ಹೊಡೆತವೂ ಬೀಳುವ ಸಾಧ್ಯತೆ ಇದೆ. ಮತ್ತೊಂದ್ಕಡೆ ಬಿಹಾರದ ರಾಜಕೀಯದಲ್ಲೂ ಮಹಾರಾಷ್ಟ್ರ ಬೆಳವಣಿಗೆ ಭಯ ಹುಟ್ಟಿಸಿದೆ. ಬಿಜೆಪಿ ನಾಯಕರು ಈಗ ಮಹಾರಾಷ್ಟ್ರ ಮಾದರಿ ಬಿಹಾರದಲ್ಲೂ ರಾಜಕೀಯ ಬೆಳವಣಿಗೆ ನಡೆಯಬಹುದು ಅಂತಾ ಹೇಳುತ್ತಿರುವುದು ಸಂಚಲನ ಸೃಷ್ಟಿಸಿದೆ.












Click it and Unblock the Notifications