ಸೇಲಂ, ಕಡಪಕ್ಕೆ ಕೆಐಎನಿಂದ 3 ತಿಂಗಳು ವಿಮಾನ ಸೇವೆ!
ಬೆಂಗಳೂರು, ಮೇ 4: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಂಧ್ರಪ್ರದೇಶದ ರಾಯಲ ಸೀಮೆ ಜಿಲ್ಲೆಯಾದ ಕಡಪ ಮತ್ತು ತಮಿಳುನಾಡಿನ ಸೇಲಂ ನಡುವೆ ಏರ್ ಒಡಿಶಾ ಜೂ.15 ರಿಂದ ವಿಮಾನ ಸೇವೆ ಆರಂಭಿಸಲಿದೆ.
ವಾರದ ಏಳು ದಿನ ಸಣ್ಣ ನಗರಗಳಾದ ಕಡಪ ಹಾಗೂ ಸೇಲಂಗೆ ಬೆಂಗಳೂರಿನಿಂದ ವಿಮಾನ ಸಂಪರ್ಕ ಆರಂಭಿಸುವ ಕುರಿತು ಏರ್ ಒಡಿಶಾ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಕಡಪದಿಂದ 3.45ಕ್ಕೆ ಹೊರಡುವ ವಿಮಾನ 4.10ಕ್ಕೆ ಕೆಐಎ ತಲುಪಲಿದೆ. ವಾಪಸ್, ಸಂಜೆ 4.30ಕ್ಕೆ ಕೆಐಎನಿಂದ ಹೊರಡುವ ವಿಮಾನ 5.15ಕ್ಕೆ ಕಡಪ ತಲುಪಲಿದೆ.
ಮತ್ತೊಂದು ಹೊಸ ಮಾರ್ಗದಲ್ಲಿ ತಮಿಳುನಾಡಿನ ಸೇಲಂನಿಂದ 10.15 ಕ್ಕೆ ಹೊರಡುವ ವಿಮಾನ 10.55ಕ್ಕೆ ಕೆಐಎ ತಲುಪಲಿದೆ. ವಾಪಸ್ ಮಾರ್ಗದಲ್ಲಿ ಕೆಐಎನಿಂದ 11.15ಕ್ಕೆ ಹೊರಡುವ ವಿಮಾನ 12 ಗಂಟೆಗೆ ಸೇಲಂ ತಲುಪಲಿದೆ. ಜೂನ್ 15ರಿಂದ ಆಗಸ್ಟ್ 31 ರವರೆಗೆ ಮಾತ್ರ ವಿಮಾನಗಳ ಹಾರಾಟ ಇರಲಿದ್ದು, ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.

ಮೈಸೂರು-ಚೆನ್ನೈ ನಡುವೆ: ಆರ್ ಒಡಿಶಾ ಜೂನ್ 15ರಿಂದ ಚೆನ್ನೈ-ಮೈಸೂರು ನಡುವೆ ವಿಮಾನ ಸಂಪರ್ಕ ಆರಂಭಿಸಲಿದೆ. ಚೆನ್ನೈನಿಂದ ರಾತ್ರಿ 7ಕ್ಕೆ ಹೊರಡುವ ವಿಮಾನ, 8.50ಕ್ಕೆ ಮೈಸೂರು ತಲುಪಲಿದೆ. ವಾಪಸ್ ಮಾರ್ಗದಲ್ಲಿ ರಾತ್ರಿ 9.10ಕ್ಕೆ ಮೈಸೂರಿನಿಂದ ಹೊರಟು, 11 ಗಂಟೆಗೆ ಚೆನ್ನೈ ತಲುಪಲಿದೆ.












Click it and Unblock the Notifications