ದೀಪಾವಳಿಯಂದೇ ಗಾಳಿ ಗುಣಮಟ್ಟ ತೀವ್ರ ಕುಸಿತ: ದೆಹಲಿಯಲ್ಲಿ ಪಟಾಕಿ ನಿಷೇಧ
ದೆಹಲಿ, ಅಕ್ಟೋಬರ್ 31: ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ದಿನದಿಂದ ದಿನಕ್ಕೆ ಕಳಪೆಯಾಗುತ್ತಿದ್ದು, ದೀಪಾವಳಿ ಹಬ್ಬದ ದಿನ ಇನಷ್ಟು ಹದಗೆಡುವ ಸಾಧ್ಯತೆ ಇದೆ. ಈಗಾಗಲೇ ದೆಹಲಿಯ ಆನಂದ್ ವಿಹಾರ್‌ನಲ್ಲಿನ ಗಾಳಿಯ ಗುಣಮಟ್ಟವು ಬೆಳ್ಳಂಬೆಳಗ್ಗೆಯೇ ಕಳಪೆ ಮಟ್ಟಕ್ಕೆ ಇಳಿಯುತ್ತಿದ್ದು, ಇಂದು ರಾತ್ರಿ ಇನ್ನಷ್ಟು ವಾಯು ಮಾಲಿನ್ಯದ ಮಟ್ಟವು ಹೆಚ್ಚಾಗುವ ನಿರೀಕ್ಷೆಯಿದೆ.
ಈಗಾಗಲೇ ದೆಹಲಿಯಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿಗೆ ನಿಷೇಧ ಹೇರಲಾಗಿದೆ. ಅಲ್ಲದೇ ಪಟಾಕಿ ನಿಷೇಧವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ದೆಹಲಿಯಾದ್ಯಂತ ಪಟಾಕಿ ನಿಷೇಧವನ್ನು ಜಾರಿಗೊಳಿಸಲು 377 ತಂಡಗಳನ್ನು ರಚಿಸಲಾಗಿದ್ದು, ಜನರಿಗೆ ವಾಯು ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ಅಧಿಕಾರಿಗಳು ಅನೇಕ ಕ್ರಮ ಕೈಗೊಂಡಿದ್ದಾರೆ ಎಂದು ದೆಹಲಿ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.

ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (AQI) 268 ರಿಂದ 307ಕ್ಕೆ ಏರುತ್ತಿದ್ದು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ ಇಂದು ರಾತ್ರಿ ಮಾಲಿನ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿ (IITM) ಪ್ರಕಾರ ಗುರುವಾರ ಮತ್ತು ಶುಕ್ರವಾರದಂದು ದೆಹಲಿಯ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆ ಅಂದರೆ AQI 300 ರಿಂದ 400ಕ್ಕೆ ಏರುತ್ತದೆ ಎಂದು ತಿಳಿಸಿದೆ.
ದೀಪಾವಳಿಯಂದು ಪಟಾಕಿ ಮತ್ತು ಇತರ ತ್ಯಾಜ್ಯಗಳ ಬೆಂಕಿಯಿಂದ ಹೊರಸೂಸುವ ಹೊಗೆಯು ವಾಯು ಮಾಲಿನ್ಯವನ್ನು ಹೆಚ್ಚಿಸಲಿದೆ. ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅಡಿಯಲ್ಲಿ ದೆಹಲಿಯ ಗಾಳಿಯ ಗುಣಮಟ್ಟವನ್ನು ನಾಲ್ಕು ಹಂತಗಳಾಗಿ ವರ್ಗೀಕರಿಸಲಾಗಿದೆ. ಈ ವರ್ಗೀಕರಣದ ಆಧಾರದಲ್ಲಿ ಇಂದು ಗಾಳಿಯ ಗುಣಮಟ್ಟವು ಅತ್ಯಂತ ಕಳಪೆಯಾಗುವ ಸೂಚನೆ ಇದ್ದು ಅಧಿಕಾರಿಗಳು ಈ ಬಗ್ಗೆ ತೀವ್ರ ಎಚ್ಚರ ವಹಿಸಿದ್ದಾರೆ. ಏನೇ ಮುಂಜಾಗ್ರತೆ ಕ್ರಮಗಳಿದ್ದರೂ ಕೆಲ ಜನರು ನಿಯಮಗಳನ್ನು ಉಲ್ಲಂಘಿಸುತ್ತಾರೆ. ಹೀಗಾಗಿ ಅಧಿಕಾರಿಗಳ ಕ್ರಮದ ಫಲಿತಾಂಶ ಇಂದು ಹಾಗೂ ನಾಳೆ ತಿಳಿದು ಬರಲಿದೆ.












Click it and Unblock the Notifications