ಇಸ್ರೇಲ್‌ಗೆ ಏರ್ ಇಂಡಿಯಾ ವಿಮಾನ ಸೇವೆ ತಾತ್ಕಾಲಿಕ ಸ್ಥಗಿತ
ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಟೆಲ್ ಅವೀವ್‌ಗೆ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಏರ್ ಇಂಡಿಯಾ ನಿರ್ಧರಿಸಿದೆ. ದೆಹಲಿ ಮತ್ತು ಟೆಲ್ ಅವಿವ್ ನಡುವಿನ ನೇರ ವಿಮಾನ ಸೇವೆಗಳು ತಕ್ಷಣದಿಂದ ಸ್ಥಗಿತಗೊಳ್ಳಲಿವೆ.
ಏರ್ ಇಂಡಿಯಾ ನವದೆಹಲಿ ಮತ್ತು ಇಸ್ರೇಲಿ ನಗರದ ನಡುವೆ ಪ್ರತಿ ವಾರ ನಾಲ್ಕು ವಿಮಾನಯಾನ ಸೇವೆಗಳನ್ನು ಒದಗಿಸುತ್ತದೆ. ಇಸ್ರೇಲ್-ಹಮಾಸ್ ನಡುವಿನ ಸಂಘರ್ಷದ ಸಮಯದಲ್ಲಿ ಅಕ್ಟೋಬರ್ 7, 2023 ರಿಂದ ಟೆಲ್ ಅವೀವ್‌ಗೆ ಏರ್ ಇಂಡಿಯಾ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಐದು ತಿಂಗಳ ವಿರಾಮದ ಬಳಿಕ ಮಾರ್ಚ್ 3 ರಂದು ಟೆಲ್ ಅವಿವ್‌ಗೆ ಸೇವೆಯನ್ನು ಮತ್ತೆ ಆರಂಭಿಸಿತ್ತು.

ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ
ಶನಿವಾರ ರಾತ್ರಿ, ಯೆಮೆನ್, ಸಿರಿಯಾ ಮತ್ತು ಇರಾಕ್‌ನಿಂದ ಇರಾನ್ ಮತ್ತು ಅದರ ಮಿತ್ರರಾಷ್ಟ್ರಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಒಳಗೊಂಡಂತೆ 200 ಕ್ಕೂ ಹೆಚ್ಚು ಸ್ಪೋಟಕಗಳನ್ನು ಇಸ್ರೇಲ್‌ಗೆ ಕಡೆ ಹಾರಿಸಿವೆ. ದಾಳಿ ನಡುವೆಯೂ ಟೆಲ್ ಅವೀವ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನವು ಟೆಲ್ ಅವೀವ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು.
ಟೆಲ್ ಅವಿವ್‌ನಿಂದ ಏರ್ ಇಂಡಿಯಾ ಭಾರತಕ್ಕೆ ಹಿಂತಿರುಗಲು ನಿರ್ಧರಿಸಲಾಗಿದೆ. ಪ್ರಸ್ತುತ, ಎಲ್ ಅಲ್ ಮತ್ತು ಏರ್ ಇಂಡಿಯಾ ಇಸ್ರೇಲ್ ಮತ್ತು ಭಾರತದ ನಡುವೆ ವಾಣಿಜ್ಯ ವಿಮಾನಗಳನ್ನು ಒದಗಿಸುವ ಪ್ರಮುಖ ವಿಮಾನಯಾನ ಸಂಸ್ಥೆಗಳಾಗಿವೆ.
ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ವಿಸ್ತಾರಾ ಇರಾನ್ ವಾಯುಪ್ರದೇಶವನ್ನು ತಪ್ಪಿಸಲು ನಿರ್ಧರಿಸಿವೆ.
ಯುರೋಪ್ ಮತ್ತು ಯುಎಸ್ ದೇಶಗಳಿಗೆ ಸೇವೆ ಒದಗಿಸಲು ದೀರ್ಘವಾದ ವಿಮಾನ ಮಾರ್ಗಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಇರಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಭಾರತ ಸರ್ಕಾರವು ನಾಗರಿಕರಿಗೆ ಸಲಹೆ ನೀಡಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯಿಂದಾಗಿ ವಿಮಾನ ಮಾರ್ಗಗಳನ್ನು ಬದಲಾಯಿಸುವ ತಮ್ಮ ನಿರ್ಧಾರವನ್ನು ವಿವರಿಸುವ ವಿಸ್ತಾರ ಏರ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಏಪ್ರಿಲ್ 12 ರಂದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪ್ರಸ್ತುತ ಉದ್ವಿಗ್ನತೆಯಿಂದಾಗಿ ಮುಂದಿನ ಸೂಚನೆ ಬರುವವರೆಗೂ ಇರಾನ್ ಅಥವಾ ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯ ನಾಗರಿಕರಿಗೆ ಸಲಹೆ ನೀಡಿದೆ. ಈಗಾಗಲೇ ಈ ದೇಶಗಳಲ್ಲಿರುವವರು ಭಾರತೀಯ ರಾಯಭಾರಿ ಕಚೇರಿಗಳನ್ನು ತಲುಪಿ ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದೆ.












Click it and Unblock the Notifications