Air India: ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ
ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಬೆದರಿಕೆ ಕರೆ ಬಂದ ನಂತರ, ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. ವಿಮಾನಯಾನ ಸಂಸ್ಥೆಗೆ ಬಾಂಬ್ ಬೆದರಿಕೆ ಕರೆ ಬಂದ ಬೆನ್ನಲ್ಲೇ ಹೈ ಅಲರ್ಟ್ ಆದ ಅಧಿಕಾರಿಗಳು ತಕ್ಷಣವೇ ನ್ಯೂಯಾರ್ಕ್‌ನತ್ತ ತೆರಳುತ್ತಿದ್ದ ವಿಮಾನವನ್ನು ದೆಹಲಿಯತ್ತ ತಿರುಗಿಸಿದರು.
"ಏರ್ ಇಂಡಿಯಾ ವಿಮಾನವು ಈಗ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರೀತಿಯ ಭದ್ರತಾ ತಪಾಸಣೆ ನಡೆಸಲಾಗುತ್ತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಹುಸಿ ಬೆದರಿಕೆ ಕರೆ ಎಂದು ಹೇಳಲಾಗುತ್ತಿದ್ದು ಅಧಿಕಾರಿಗಳು ಹೆಚ್ಚಿನ ತಪಾಸಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಘಟನೆ ವಿವರ
ಸೋಮವಾರ ಮುಂಜಾನೆಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಎಐ 119 ವಿಮಾನದಲ್ಲಿ ಬಾಂಬ್ ಇದೆ ಎನ್ನುವ ಬೆದರಿಕೆ ಕರೆ ಬಂದ ನಂತರ ತಕ್ಷಣವೇ ವಿಮಾನವನ್ನು ದೆಹಲಿಯ ಕಡೆಗೆ ತಿರುಗಿಸಲಾಯಿತು. ಏರ್ ಇಂಡಿಯಾ ಬಾಂಬ್ ಬೆದರಿಕೆ ಬಂದಿದ್ದನ್ನು ಖಚಿತಪಡಿಸಿದೆ. ದೆಹಲಿಯಲ್ಲಿ ಭದ್ರತಾ ಸಿಬ್ಬಂದಿ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಎಲ್ಲಾ 239 ಪ್ರಯಾಣಿಕರು ಮತ್ತು 19 ಸಿಬ್ಬಂದಿ ಸುರಕ್ಷಿತವಾಗಿ ಇಳಿದಿದ್ದಾರೆ.
"ಅಕ್ಟೋಬರ್ 14 ರಂದು ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (JFK) ಕ್ಕೆ ಮುಂಬೈನಿಂದ ಹೊರಟಿದ್ದ ಎಐ119 ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತು. ಕೇಂದ್ರ ಸರ್ಕಾರದ ಭದ್ರತಾ ನಿಯಂತ್ರಣ ಸಮಿತಿಯ ಸೂಚನೆಗಳ ಮೇರೆಗೆ ದೆಹಲಿಯಲ್ಲಿ ವಿಮಾನವನ್ನು ಇಳಿಸಲಾಯಿತು. ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿದ್ದಾರೆ. ಅನಿರೀಕ್ಷಿತ ಘಟನೆಯಿಂದ ಅತಿಥಿಗಳಿಗೆ ಆಗಿರುವ ಅನಾನುಕೂಲ ಕಡಿಮೆ ಮಾಡಲು ನಮ್ಮ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ಏರ್ ಇಂಡಿಯಾ ಅಧಿಕಾರಿಗಳು ಹೇಳಿದ್ದಾರೆ.
ವಿಮಾನವನ್ನು ಮತ್ತೆ ಟೇಕಾಫ್ ಮಾಡುವ ಮೊದಲು ಸಂಪೂರ್ಣವಾಗಿ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತದೆ. ಅಲ್ಲಿ ಎಲ್ಲವೂ ಸರಿಯಿದೆ ಎನ್ನುವುದು ಖಚಿತವಾದ ಬಳಿಕವೇ ತೆರಳಲು ಅನುಮತಿ ನೀಡಲಾಗುತ್ತದೆ. ಕಳೆದ ಕೆಲವು ತಿಂಗಳಿನಿಂದ ಹಲವು ಬಾರಿ ವಿಮಾನ ಪ್ರಯಾಣಿಕರು, ಇಂತಹ ಹುಸಿ ಬಾಂಬ್ ಬೆದರಿಕೆ ಕರೆಯಿಂದ ತೊಂದರೆ ಅನುಭವಿಸಿದ್ದಾರೆ.
ಅಕ್ಟೋಬರ್ 15, ಮಂಗಳವಾರ ವಿಮಾನ ಟೇಕಾಫ್ ಆಗಲಿದೆ. ಪ್ರಯಾಣಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ತಪಾಸಣೆ ನಡೆದ ನಂತರ, ಅತಿಥಿಗಳನ್ನು ಹೋಟೆಲ್‌ಗೆ ಸ್ಥಳಾಂತರಿಸಲಾಗುತ್ತದೆ ಮಂಗಳವಾರ ಅವರು ದೆಹಲಿಯಿಂದ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ.












Click it and Unblock the Notifications