ಚಿರತೆ ಮೇಲೆ ಸವಾರಿ ಮಾಡಲು ಹೋದ ಜನ: ಶಾಕಿಂಗ್ ವಿಡಿಯೋ ವೈರಲ್
ಸಾಮಾನ್ಯವಾಗಿ ಕಾಡು ಪ್ರಾಣಿಗಳು ಮನುಷ್ಯನ ಮೇಲೆ ಆಕ್ರಮಣ ಮಾಡುವುದನ್ನು ಕೇಳಿರುತ್ತೀರಿ, ಇನ್ನೂ ಕೆಲವು ಬಾರಿ ಜನರೇ ಗುಂಪು ಗುಂಪಾಗಿ ಕಾಡು ಪ್ರಾಣಿಯನ್ನು ಹೊಡೆದು ಕೊಂದ ಬಗ್ಗೆ ಕೇಳಿರುತ್ತೀರಿ, ಆದರೆ ಈ ಘಟನೆ ಮಾತ್ರ ಭಿನ್ನ, ಅನಾರೋಗ್ಯದಿಂದ ಬಳಲುತ್ತಿದ್ದ ಚಿರತೆ, ಗ್ರಾಮಸ್ಥರ ಕೈಗೆ ಸಿಕ್ಕಿದ್ದು, ಜನ ಅದನ್ನು ಬೆಕ್ಕಿಗಿಂತ ಕಡೆಯಾಗಿ ನಡೆಸಿಕೊಂಡಿದ್ದಾರೆ!
ಮಧ್ಯಪ್ರದೇಶದ ಇಕ್ಲೇರಾ ಗ್ರಾಮಸ್ಥರು ಚಿರತೆಯನ್ನು ನಿಂದಿಸಿ ಕಿರುಕುಳ ನೀಡುವ ಆಘಾತಕಾರಿ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಅಸ್ವಸ್ಥಗೊಂಡ ಚಿರತೆಯನ್ನು ಸುಮಾರು ಹತ್ತಕ್ಕೂ ಹೆಚ್ಚು ಜನರು ಸುತ್ತುವರೆದಿದ್ದಾರೆ. ಓರ್ವ ವ್ಯಕ್ತಿಯಂತು ಇತರರನ್ನು ದೂರ ತಳ್ಳಿ ಚಿರತೆ ಬೆನ್ನಿನ ಮೇಲೆ ಸವಾರಿ ಮಾಡುವುದನ್ನು ನೋಡಬಹುದಾಗಿದೆ.

ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಇಕ್ಲೇರಾ ಸಮೀಪದ ಕಾಡಿನಲ್ಲಿ ಚಿರತೆ ಓಡಾಡುತ್ತಿರುವುದು ಕಂಡುಬಂದಿದೆ. ಕೆಲವು ಗ್ರಾಮಸ್ಥರು ಮೊದಲಿಗೆ ಭಯಗೊಂಡರು, ಆದರೆ ಚಿರತೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಕ್ರಮಣಕಾರಿಯಾಗಿಲ್ಲ ಎಂದು ತಿಳಿದ ಬಳಿಕ ಚಿರತೆಗೆ ಕೊಡಬಾರದ ಕಾಟ ಕೊಟ್ಟಿದ್ದಾರೆ.
ಅರಣ್ಯ ಇಲಾಖೆಯಿಂದ ರಕ್ಷಣೆ
ಗ್ರಾಮಸ್ಥರು ಚಿರತೆಯ ಸುತ್ತ ಜಮಾಯಿಸಿ ಅದರೊಂದಿಗೆ ಆಟವಾಡಲು ಆರಂಭಿಸಿದರು. ಅದನ್ನು ಸಾಕು ಪ್ರಾಣಿಯಂತೆ ಆಡಿಸಿದ್ದಾರೆ. ಕೆಲವರು ಚಿರತೆ ಜೊತೆ ಸೆಲ್ಫಿ ತೆಗೆದುಕೊಂಡರು, ಒಬ್ಬ ವ್ಯಕ್ತಿ ಅದರ ಮೇಲೆ ಸವಾರಿ ಮಾಡಲು ಪ್ರಯತ್ನಿಸಿದರು.
ಕೆಲವು ಕೆಲ ಸಮಯ ಆಟವಾಡಿದ ಬಳಿಕ ಚಿರತೆಯನ್ನು ಕೊಲ್ಲಲು ನಿರ್ಧರಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗ್ರಾಮಸ್ಥರೊಬ್ಬರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಉಜ್ಜಯಿನಿಯಿಂದ ರಕ್ಷಣಾ ತಂಡ ಇಕ್ಲೇರಾ ತಲುಪಿ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದೆ. ಇದರಿಂದ ಬಡ ಚಿರತೆ ಪ್ರಾಣಾಪಾಯದಿಂದ ಪಾರಾಗಿದೆ.
ಜನರ ವರ್ತನೆಗೆ ಆಕ್ರೋಶ
ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. "ಅಭಿವೃದ್ಧಿಯ ನೆಪದಲ್ಲಿ ನಾವು ಈಗಾಗಲೇ ಪ್ರಾಣಿಗಳ ಜಾಗವನ್ನು ಅತಿಕ್ರಮಿಸುತ್ತಿದ್ದೇವೆ ಮತ್ತು ಈಗ ನಾವು ಅವುಗಳ ಖಾಸಗಿತನಕ್ಕೂ ತೊಂದರೆ ನೀಡುತ್ತಿದ್ದೇವೆ. ನಾವು ಮನುಷ್ಯರಾಗಿ ನಾಚಿಕೆಪಡಬೇಕು" ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಎರಡು ವರ್ಷದ ಚಿರತೆಯನ್ನು ಭೋಪಾಲ್‌ನ ವಾನ್ ವಿಹಾರ್‌ಗೆ ಚಿಕಿತ್ಸೆಗಾಗಿ ತಂಡವು ಕರೆದೊಯ್ದಿದೆ ಎಂದು ಅರಣ್ಯಾಧಿಕಾರಿ ಸಂತೋಷ್ ಶುಕ್ಲಾ ತಿಳಿಸಿದ್ದಾರೆ. ಪಶುವೈದ್ಯರು ಪ್ರಾಣಿಗಳ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿದ್ದಾರೆ ಎಂದು ಅವರು ಹೇಳಿದರು.
"ಚಿರತೆಯ ಸ್ಥಿತಿ ಚಿಂತಾಜನಕವಾಗಿದೆ. ಹೀಗಿದ್ದರೂ ಜನರು ಅದಕ್ಕೆ ತೊಂದರೆ ಕೊಡುತ್ತಿದ್ದರು. ಗ್ರಾಮಸ್ಥರನ್ನು ಅಲ್ಲಿಂದ ದೂರ ಕಳುಹಿಸಿದೆವು. ಪಶುವೈದ್ಯರನ್ನು ಇಂದೋರ್‌ನ ಮೋವ್‌ನಿಂದ ಕರೆಸಲಾಯಿತು" ಎಂದು ಶುಕ್ಲಾ ಹೇಳಿದರು.
ಚಿರತೆ ತಲೆ ಸುತ್ತುವ ಸ್ಥಿತಿಯಲ್ಲಿ ಕಾಡಿನಲ್ಲಿ ಅಲೆದಾಡುತ್ತಿದ್ದು, ಸರಿಯಾಗಿ ನಡೆಯಲು ಸಹ ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಸಿಬ್ಬಂದಿ ಜಿತೇಂದ್ರ ಚೌಹಾಣ್ ತಿಳಿಸಿದ್ದಾರೆ. ಚಿರತೆಗೆ ವಾನ್ ವಿಹಾರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿರತೆಗೆ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದರು.












Click it and Unblock the Notifications