ಓದಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವೈದ್ಯಕೀಯ ವಿದ್ಯಾರ್ಥಿ
ಜೋಧಪುರ, ಜು, 06 : ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ಸಂಸ್ಥೆಯ ಎಂಬಿಬಿಎಸ್ ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.
19 ವರ್ಷದ ಗಜೇಂದ್ರ ಸಿಂಗ್ ನೇಣಿಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿ. ಗಜೇಂದ್ರ ಜೈಪುರ ಸಮೀಪದ ಫುಲೇರಾ ಎಂಬಲ್ಲಿ ವಾಸವಾಗಿದ್ದು, ಈತ ಮೊದಲ ವರ್ಷದ ವೈದ್ಯಕೀಯ ಶಿಕ್ಷಣವನ್ನು ಏಮ್ಸ್ ನಲ್ಲಿ ಪಡೆಯುತ್ತಿದ್ದನು. ಓದಿಗೆ ಬೇಸತ್ತು ನೇಣು ಬಿಗಿದುಕೊಂಡ ಈತನನ್ನು ತಕ್ಷಣ ಎಂಡಿಎ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ [ರಾಜ್ಯದಲ್ಲಿ ಮೂರು ವೈದ್ಯಕೀಯ ಕಾಲೇಜು ಈ ವರ್ಷ ಆರಂಭ]

ಈತ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ 'ವೈದ್ಯಕೀಯ ಶಿಕ್ಷಣ ನನಗೆ ಬಹಳ ಕಷ್ಟವಾಗುತ್ತಿದೆ. ಈ ಸಂಸ್ಥೆಯಲ್ಲಿ ವಿಷಯಗಳನ್ನು ಕಂಠಪಾಠ ಮಾಡುವ ಪದ್ಧತಿ ಇದೆ. ಓದಿರುವ ವಿಷಯವನ್ನೇ ಪುನಃ ಓದಿ ನೆನಪಿನಲ್ಲಿಟ್ಟುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಈ ಕೋರ್ಸ್ ಗೆ ಅಸಮರ್ಥ ಎನ್ನುವ ಭಾವ ನನ್ನಲ್ಲಿ ಮೂಡಿದೆ' ಎಂದು ಹೇಳಿಕೊಂಡಿದ್ದಾನೆ.
ಈ ಪತ್ರಕ್ಕೆ ಉತ್ತರ ನೀಡಿದ ಏಮ್ಸ್ ನಿರ್ದೇಶಕ ಸಂಜೀವ ಮಿಶ್ರಾ 'ನಮ್ಮಲ್ಲಿ ಕಂಠಪಾಠ ಮಾಡಿಸುವ ಪದ್ದತಿ ಇಲ್ಲ. ಸಂಸ್ಥೆಯ ಸಿಬ್ಬಂದಿ ವರ್ಗದವರು ಈತನ ಮೇಲೆ ಯಾವುದೇ ಒತ್ತಡ ಹೇರಿಲ್ಲ' ಎಂದು ಸಮರ್ಥಿಸಿಕೊಂಡಿದ್ದಾರೆ. ಈತನ ಸಾವು ನಿಜವಾಗಿ ದುರದೃಷ್ಟಕರ ಸಂಗತಿ. ಇದರಿಂದ ನಮ್ಮ ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡೆವು ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications