ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿ: ಅಧಿಕಾರ ಹಂಚಿಕೆ ಬಗ್ಗೆ ತುಟಿಬಿಚ್ಚದ ಕಾಂಗ್ರೆಸ್ ಹೈಕಮಾಂಡ್
ನವದೆಹಲಿ, ಮೇ 18: ಬಹುನಿರೀಕ್ಷೆಯ ಕರ್ನಾಟಕದ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಕಾಂಗ್ರೆಸ್ ಹೈಕಮಾಂಡ್ ಉತ್ತರ ನೀಡಿದೆ. ಸಿದ್ದರಾಮಯ್ಯನವರನ್ನು ಸಿಎಂ ಆಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿ ಅಧಿಕೃತವಾಗಿ ಪ್ರಕಟಿಸಿದೆ. ಆದರೆ ಅಧಿಕಾರ ಹಂಚಿಕೆ ಕುರಿತು ವರಿಷ್ಠರು ತುಟಿ ಬಿಚ್ಚದಿರುವುದು ಕುತೂಹಲ ಕೆರಳಿಸಿದೆ.
ಮುಖ್ಯಮಂತ್ರಿ ಆಯ್ಕೆ ಕುರಿತು ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ರಾಜ್ಯ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮತ್ತು ಎಐಸಿಸಿ ಪ್ರಧಾನಿ ಕಾರ್ಯಕದರ್ಶಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಿತು.

ಈ ವೇಳೆ ಮಾತನಾಡಿದ ವೇಣುಗೋಪಾಲ್, ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಲಾಗಿದೆ. ಒಂದೇ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದ್ದರು, ಅದನ್ನು ಡಿಕೆ ಶಿವಕುಮಾರ್ ಅವರು ನಿರ್ವಹಿಸುವ ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಿಯು ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಮೇ 20ರಂದು ಸಿಎಂ-ಡಿಸಿಎಂ ಪ್ರಮಾಣವಚನ
ರಣದೀಪ್ ಸಿಂಗ್ ಸುರ್ಜೆವಾಲ ಮಾತನಾಡಿ, ಮೇ. 20ರಂದು ಮಧ್ಯಾಹ್ನ 12.30ಕ್ಕೆ ಸಿದ್ದರಾಮಯ್ಯ ಅವರು ನೂತನ ಮುಖ್ಯಮಂತ್ರಿ ಆಗಿ ಮತ್ತು ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅವರಿಬ್ಬರು ಕರ್ನಾಟಕದಲ್ಲಿ ಜೋಡಿಯಾಗಿ ಕೆಲಸ ಮಾಡಿದ್ದಾರೆ. ಅದರೊಂದಿಗೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಕಾರಣದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದೆ ಎಂದು ಅವರು ಬಣ್ಣಿಸಿದರು.

ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಮಧ್ಯೆ ಒನ್ ಟು ಒನ್ ಚರ್ಚೆ ನಡೆದಿದೆ. ಕೊನೆಯದಾಗಿ ವೀಕ್ಷಕರ ಅಭಿಪ್ರಾಯ ಸಂಗ್ರಹಿಸಿ ಸಿದ್ದರಾಮಯ್ಯವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಒಟ್ಟಾಗಿ ಕೆಲಸ ಮಾಡಿದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇವರಿಬ್ಬರ ಸಮ್ಮುಖದಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದು ವಿವರಿಸಿದ್ದಾರೆ.
ಅಧಿಕಾರ ಹಂಚಿಕೆ ಬಗ್ಗೆ ಮಾತನಾಡದ ವರಿಷ್ಠರು
ಮುಖ್ಯಮಂತ್ರಿ ಸ್ಥಾನ ಆಯ್ಕೆ ಕಗ್ಗಂಟನ್ನು ಸರಿಪಡಿಸಿರುವ ಕಾಂಗ್ರೆಸ್ ಹೈಕಮಾಂಡ್ ನಾಯಕರು, ಅಧಿಕಾರ ಹಂಚಿಕೆ ಕುರಿತು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಈ ಮೊದಲು ಸಿಎಂ ಅವಧಿಯ ಐದು ವರ್ಷವನ್ನು 2.5ವರ್ಷದಂತೆ ಉಭಯ ನಾಯಕರಿಗೆ ಹಂಚುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಅದಕ್ಕೆ ಇಬ್ಬರು ನಾಯಕರು ಒಪ್ಪಿಗೆ ಸೂಚಿಸಿದ್ದರು. ಆದರೆ ಈ ಬಗ್ಗೆ ಸರಣಿ ಸಭೆ ಬಳಿಕೆ ಯಾವ ಮಾಹಿತಿಯನ್ನು ಎಐಸಿಸಿ ಅಧ್ಯಕ್ಷರಾಗಲಿ, ಉಸ್ತುವಾರಿಗಳಾಗಿ ಬಿಟ್ಟುಕೊಡದಿರುವುದು ಕುತೂಹಲ ಕೆರಳಿಸಿದೆ.
ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರಮಾಣವಚನ ವೇಳೆ ಹಲವು ಮುಖಂಡರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯುತ್ತಿದ್ದಂತೆ ಮಲ್ಲಿಕಾರ್ಜುನ್ ಖರ್ಗೆ ಅವರ ನಿವಾಸದಿಂದ ತೆರಳಿದ್ದಾರೆ. ಇತ್ತ ಡಿಕೆ ಶಿವಕುಮಾರ್ ನಿವಾಸದಿಂದ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications