ಅಗ್ನಿಪಥ್ ಅಡಿ ಭಾರತೀಯ ವಾಯುಸೇನೆಗೆ ನೇಮಕವಾದರೆ ಏನೆಲ್ಲಾ ಸೌಲಭ್ಯ?
ನವದೆಹಲಿ, ಜೂನ್ 19: ಅಗ್ನಿಪಥ್ ನೇಮಕಾತಿ ಯೋಜನೆ ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವುದರ ಕುರಿತು ಅಧಿಸೂಚನೆ ಹೊರಡಿಸಲಾಗುವುದು ಎಂದು ಭಾರತೀಯ ಸೇನೆ ತಿಳಿಸಿದೆ.
ಜೂನ್ 24ರಿಂದ ಅಗ್ನಿಪಥ್ ಯೋಜನೆ ಅಡಿಯಲ್ಲಿ ಐಎಎಫ್ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಶುಕ್ರವಾರವೇ ಘೋಷಿಸಿದ್ದಾರೆ.
ಹೊಸ ಸೇನಾ ನೇಮಕಾತಿ ಯೋಜನೆಯ ವಿರುದ್ಧ ಎಂಟು ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ಈ ಹೇಳಿಕೆ ಹೊರ ಬಿದ್ದಿದೆ.

ಭಾರತೀಯ ವಾಯುಸೇನೆಯಲ್ಲಿ ಅಗ್ನಿಪಥ್ ಯೋಜನೆಯಡಿ ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ವಿವರಗಳನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.
ಐಎಎಫ್ ಬಿಡುಗಡೆ ಮಾಡಿರುವ ವಿವರದಲ್ಲಿ ಏನಿದೆ?:
ಅಗ್ನಿಪಥ್ ಯೋಜನೆ ಅಡಿಯಲ್ಲಿ ನೇಮಕವಾಗುವ ಭಾರತೀಯ ವಾಯುಸೇನೆಯ ಯೋಧರಿಗೆ ಯಾವೆಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
* ಭಾರತೀಯ ವಾಯುಸೇನೆ ಯೋಧರಿಗೆ ವೇತನದ ಜೊತೆಗೆ ಸಂಕಷ್ಟ ಭತ್ಯೆ, ಸಮವಸ್ತ್ರ ಭತ್ಯೆ, ಕ್ಯಾಂಟೀನ್ ಸೌಲಭ್ಯ, ವೈದ್ಯಕೀಯ ಸೌಲಭ್ಯ ಸೇರಿದಂತೆ ಸಾಮಾನ್ಯ ಸೈನಿಕರಿಗೆ ನೀಡುವ ಎಲ್ಲಾ ಸೌಲಭ್ಯವನ್ನು ಒದಗಿಸಲಾಗುವುದು. ಇದರ ಜೊತೆಗೆ ಪ್ರಯಾಣದ ಭತ್ಯೆಯನ್ನು ಸಹ ನೀಡಲಾಗುವುದು.
* ಒಂದು ವರ್ಷದಲ್ಲಿ 30 ದಿನ ರಜೆಯನ್ನು ನೀಡಲಾಗುವುದು, ಇದರೊಂದಿಗೆ ಹೆಚ್ಚುವರಿಯಾಗಿ ಅನಾರೋಗ್ಯ ರಜೆ(ಮೆಡಿಕಲ್ ಲೀವ್)ಯನ್ನು ನೀಡಲಾಗುತ್ತದೆ.
* ನಾಲ್ಕು ವರ್ಷಗಳ ಸೇವಾವಧಿಯ ಸಂದರ್ಭದಲ್ಲಿ ಮೃತಪಟ್ಟರೆ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಹುತಾತ್ಮ ಯೋಧರ ಕುಟುಂಬಕ್ಕೆ 1 ಕೋಟಿ ರೂಪಾಯಿ ಗೌರವ ಧನವನ್ನು ನೀಡಲಾಗುತ್ತದೆ.
* ಒಂದು ವೇಳೆ ಸೇವಾವಧಿಯ ಸಂದರ್ಭದಲ್ಲಿ ಅಂಗವೈಕಲ್ಯಕ್ಕೆ ತುತ್ತಾದರೆ, 44 ಲಕ್ಷ ರೂಪಾಯಿ ಜೊತೆಗೆ ಉಳಿದ ಅವಧಿಯ ಪೂರ್ಣ ವೇತನವನ್ನು ನೀಡಲಾಗುವುದು. ಇದರ ಜೊತೆಗೆ ಸೇವಾ ನಿಧಿ ಪ್ಯಾಕೇಜ್ ಕೂಡ ಲಭ್ಯವಿರುತ್ತದೆ.
* ಅಗ್ನಿವೀರ್‌ಗಳು ಸಿಎಸ್‌ಡಿ ಕ್ಯಾಂಟೀನ್ ಸೌಲಭ್ಯವನ್ನು ಪಡೆಯಬಹುದು.

ಏನಿದು ಅಗ್ನಿಪಥ್ ನೇಮಕಾತಿ ಯೋಜನೆ?: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ದೇಶದ ಮೂರು ಸೇನೆಗಳಿಗೆ ಯೋಧರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. 17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ನಾಲ್ಕು ವರ್ಷಗಳ ನಂತರ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಶೇ.75ರಷ್ಟು ಯೋಧರನ್ನು ಸೇನೆಯಿಂದ ವಿಮುಕ್ತಿಗೊಳಿಸಲಾಗುವುದು. ತದನಂತರದಲ್ಲಿ ಈ ಯೋಧರಿಗೆ ಯಾವುದೇ ರೀತಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದಿಲ್ಲ.
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.












Click it and Unblock the Notifications