ರಾಹುಲ್ ವಿರುದ್ಧ ಕಿಡಿಕಾರಿದ ಶಾಸಕ ಪಕ್ಷದಿಂದ ಅಮಾನತು
ಜೈಪುರ, ಜೂ.1: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು 'ಜೋಕರ್‌ಗಳ ತಂಡದ ಅಧ್ಯಕ್ಷ' ಎಂದು ಲೇವಡಿ ಮಾಡಿದ್ದ ರಾಜಸ್ಥಾನ ಕಾಂಗ್ರೆಸ್ ಶಾಸಕ ಭನ್ವಾರ್ ಲಾಲ್ ಶರ್ಮಾ ಅವರನ್ನು ಭಾನುವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕೇರಳದ ಮುಸ್ತಫಾ ನಂತರ ಎರಡನೇ ಅಮಾನತು ಆದೇಶ ಇದಾಗಿದೆ.
ರಾಹುಲ್ ವಿರುದ್ಧ ವ್ಯಕ್ತವಾಗುತ್ತಿರುವ ಆಕ್ರೋಶವನ್ನು ಕಾಂಗ್ರೆಸ್ ಪಕ್ಷ ನಿರ್ಲಕ್ಷಿಸಲು ಮುಂದಾಗಿದೆ. ಇವೆಲ್ಲ ಗಂಭೀರ ವಿಷಯ ಗಳಲ್ಲ. ಪಕ್ಷದ ರಾಜ್ಯ ಘಟಕಗಳೇ ಇಂತಹ ವಿಷಯವನ್ನೆಲ್ಲ ನಿರ್ವಹಿಸುತ್ತವೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೆ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕೇರಳ ಕಾಂಗ್ರೆಸ್ ನಾಯಕ ಐದು ಬಾರಿ ಶಾಸಕರಾಗಿದ್ದ ಟಿ.ಎಚ್ ಮುಸ್ತಫಾ ಅವರು ರಾಹುಲ್ ಅವರನ್ನು 'ಜೋಕರ್' ಎಂದು ಕರೆದಿದ್ದರು. ಈ ಹೇಳಿಕೆಯಿಂದಾಗಿ ಮುಸ್ತಫಾ ಅವರು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಅಮಾನತ್ತುಗೊಂಡಿದ್ದರು. ಮುಸ್ತಫಾ ನಂತರ ಇದೀಗ ಶಾಸಕ ಭನ್ವಾರ್ ಲಾಲಾ ಶರ್ಮಾ ಅಮಾನುತುಗೊಂಡಿದ್ದಾರೆ.

ರಾಹುಲ್ ಅವರಿಂದಾಗಿ ಕಾಂಗ್ರೆಸ್ ಅತ್ಯಂತ ಸಂಕಷ್ಟದ ದಿನಗಳನ್ನು ನೋಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಪುತ್ರನ ಮೇಲೆ ಮಮತೆ ತೋರುವ ಬದಲಿಗೆ ಕಾಂಗ್ರೆಸ್ ಬಲಪಡಿಸುವತ್ತ ಗಮನ ರಹಿಸಬೇಕು ಎಂದು ಆರು ಬಾರಿ ಶಾಸಕರಾಗಿರುವ ಭನ್ವಾರ್ ಲಾಲ್ ಶರ್ಮಾ ಆಗ್ರಹಿಸಿದ್ದರು.
ರಾಹುಲ್ ಗಾಂಧಿಗೆ ಗೊತ್ತು-ಗುರಿ ಇಲ್ಲ. ಯಾವುದೇ ನೀತಿಯೂ ಅವರಿಗಿಲ್ಲ ಚುನಾವಣೆಯಲ್ಲಿ ಪಕ್ಷ ಮುಖಭಂಗ ಅನುಭವಿಸಲು ರಾಹುಲ್ ಹಾಗೂ ಅವರ ಸಲಹೆಗಾರರೇ ಕಾರಣ. ರಾಹುಲ್ ಗಾಂಧಿಗೇನು ಬಾರಿ ಜನಬೆಂಬಲವೇನೂ ಇಲ್ಲ. ರಾಹುಲ್ ಗಾಂಧಿ ಅವರು ಜೋಕರ್‌ಗಳ ತಂಡದ ಎಂ.ಡಿ. (ವ್ಯವಸ್ಥಾಪಕ ನಿರ್ದೇಶಕ) ಎಂದು ಟೀಕಿಸಿದ್ದರು. ಇದರಿಂದ ಕೆರಳಿದ ಪ್ರದೇಶ ಕಾಂಗ್ರೆಸ್ ಸಮಿತಿ ಕೂಡಲೆ ಶರ್ಮಾ ವಿರುದ್ಧ ಕ್ರಮ ಜರುಗಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ಗುರುದಾಸ್ ಕಾಮತ್ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜಸ್ಥಾನ ಪಿಸಿಸಿ ವಕ್ತಾರರಾದ ಅರ್ಚನಾ ಶರ್ಮ ಹೇಳಿದ್ದಾರೆ. (ಪಿಟಿಐ)












Click it and Unblock the Notifications