ಮಹಾರಾಷ್ಟ್ರ ನಂತರ, ಬಿಹಾರದಲ್ಲಿಯೂ ಸಿಎಂ ನಿತೀಶ್ ಕುಮಾರ್ ಕುರ್ಚಿ ಭದ್ರವಲ್ಲ ಎಂದಿದ್ದೇಕೆ ಚಿರಾಗ್ ಪಾಸ್ವಾನ್?
ಪಾಟ್ನಾ, ಜುಲೈ. 03: ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ವಿಭಜನೆಯಾದ ಒಂದು ದಿನದ ನಂತರ, ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಅವರು ಬಿಹಾರವು ಶೀಘ್ರದಲ್ಲೇ ಮಧ್ಯಂತರ ಚುನಾವಣೆಗೆ ಸಾಕ್ಷಿಯಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಈ ಮೂಲಕ ನಿತೀಶ್ ಕುಮಾರ್ ಅವರ ಪಕ್ಷವಾದ ಜನತಾ ದಳ (ಯುನೈಟೆಡ್) ನಲ್ಲಿಯೂ ವಿಭಜನೆಯಾಗುವ ಸುಳಿವು ನೀಡಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ನಿತೀಶ್ ಕುಮಾರ್ ಅವರ ಪಕ್ಷದ ಜೆಡಿಯುನ ಹಲವಾರು ಶಾಸಕರು ಮತ್ತು ಮುಖಂಡರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆಯಲ್ಲಿ ಜೆಡಿಯು 10 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಭಾನುವಾರ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಘೋಷಿಸಿ, ರಾಜ್ಯದ ಉಪಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಛಗನ್ ಭುಜಬಲ್ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಅವರಂತಹ ಕಟ್ಟಾ ಶರದ್ ಪವಾರ್ ನಿಷ್ಠಾವಂತರು ಸೇರಿದಂತೆ ಇತರ ಎಂಟು ಎನ್‌ಸಿಪಿ ಶಾಸಕರನ್ನು ಮಂತ್ರಿ ಮಾಡಲಾಗಿದೆ.
ಎನ್‌ಸಿಪಿಯಿಂದ ಅಜಿತ್ ಪವಾರ್ ಹೊರನಡೆದಿದ್ದು, ನಿತೀಶ್ ಕುಮಾರ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಜೊತೆಗೆ ಮರಳಿದ್ದಾರೆ. ಹೀಗಾಗಿ ಬಿಹಾರದಲ್ಲಿ ಇದೇ ರೀತಿಯ ಪರಿಸ್ಥಿತಿ ತೆರೆದುಕೊಳ್ಳಬಹುದೇ ಎಂಬ ಊಹಾಪೋಹಗಳನ್ನು ಹುಟ್ಟುಹಾಕಿದೆ. ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಸುಶೀಲ್ ಮೋದಿ ಕೂಡ ಬಿಹಾರದಲ್ಲಿ ಇದೇ ರೀತಿಯ ಪರಿಸ್ಥಿತಿ ಸಂಭವಿಸಬಹುದು ಎಂದು ಹೇಳಿದ್ದಾರೆ.

ಭಾನುವಾರದಂದು ಟ್ವೀಟ್ ಮಾಡಿರುವ ಸುಶೀಲ್ ಮೋದಿ, ಶೀಘ್ರದಲ್ಲೇ ಜೆಡಿಯುನಲ್ಲಿಯೂ ಒಡಕು ಉಂಟಾಗಬಹುದು ಎಂದು ಹೇಳಿದ್ದು, ಅಂತಹ ವಿಭಜನೆಯ ಭಯದಿಂದ ನಿತೀಶ್ ಕುಮಾರ್ ಅವರು ತಮ್ಮ ಶಾಸಕರೊಂದಿಗೆ ಪ್ರತ್ಯೇಕ ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಿ ವದಂತಿಗೆ ಮತ್ತಷ್ಟು ಉಪ್ಪು ಖಾರ ಸುರಿದಿದ್ದಾರೆ. ಜೆಡಿಯುನ ಶಾಸಕರು ಮತ್ತು ಸಂಸದರು ರಾಹುಲ್ ಗಾಂಧಿ ಅಥವಾ ತೇಜಸ್ವಿ ಯಾದವ್ ಅವರನ್ನು ತಮ್ಮ ನಾಯಕನನ್ನಾಗಿ ಒಪ್ಪಿಕೊಳ್ಳುವುದಿಲ್ಲ. ಇದು ಪಕ್ಷದೊಳಗೆ ಗಮನಾರ್ಹ ಬಂಡಾಯಕ್ಕೆ ಕಾರಣವಾಗಬಹುದು ಎಂದು ಬಮಡಾಯಕ್ಕೆ ಕಾರಣವನ್ನೂ ಅವರೇ ವಿವರಿಸಿದ್ದಾರೆ.












Click it and Unblock the Notifications