ಎಐಸಿಸಿಗೆ ಹೊಸ ಅಧ್ಯಕ್ಷರ ನೇಮಕ ಯಾವಾಗ?: ಕಾಂಗ್ರೆಸ್ಸಿನ ಜಿ-23 ನಾಯಕರ ಪ್ರಶ್ನೆ
ನವದೆಹಲಿ, ಮಾರ್ಚ್ 11: ಪಂಚರಾಜ್ಯ ಚುನಾವಣೆ ಫಲಿತಾಂಶಗಳು ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಬೆಳವಣಿಕೆಗಳು ಚುರುಕು ಪಡೆದುಕೊಳ್ಳುತ್ತಿವೆ. ಎಐಸಿಸಿಗೆ ಹೊಸ ಅಧ್ಯಕ್ಷರ ನೇಮಕ ಯಾವಾಗ ಎಂಬ ಪ್ರಶ್ನೆಗೆ ಮತ್ತೆ ಮುನ್ನಲೆಗೆ ಬಂದಿದೆ.
ಐದು ರಾಜ್ಯಗಳಲ್ಲಿನ ಹೀನಾಯ ಸೋಲು ರಾಷ್ಟ್ರೀಯ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್ ವಲಯದ ನಾಯಕರ ನಿದ್ದೆ ಕೆಡಿಸಿದೆ. ಅದರಲ್ಲೂ ತುರ್ತು ಎಐಸಿಸಿ ನಾಯಕರ ಸಭೆ ಕರೆಯುವಂತೆ ಜಿ-23 ಸದಸ್ಯರು ಒತ್ತಾಯಿಸುತ್ತಿದ್ದಾರೆ.
'ಜಿ 23' ಅಥವಾ ಕಾಂಗ್ರೆಸ್ ವಲಯದಲ್ಲಿಯೇ ಗುರುತಿಸಿಕೊಂಡಿರುವ 23 ಭಿನ್ನಮತೀಯರ ಗುಂಪು ತುರ್ತು ಎಐಸಿಸಿ ಸಭೆಗೆ ಕರೆಯುವಂತೆ ಕೇಳಿಕೊಂಡಿದೆ. ಅಲ್ಲದೇ ಇತ್ತೀಚಿನ ಚುನಾವಣಾ ಸೋಲಿನ ಜವಾಬ್ದಾರಿ ಮತ್ತು ತಪ್ಪುಗಳನ್ನು ಸರಿಪಡಿಸಬೇಕಾಗಿದೆ ಎಂದು ಹೇಳಿದೆ.

ಜಿ-23 ಸದಸ್ಯರ ಸಭೆಯ ಗುರಿ ಏನಾಗಿತ್ತು?:
ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರದಲ್ಲಿ ಪಕ್ಷ ಎದುರಿಸಿದ ಮುಖಭಂಗದ ಹಿಂದಿನ ಕಾರಣವನ್ನು ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ತುರ್ತು ಎಐಸಿಸಿ ಸಭೆ ಕರೆಯುವಂತೆ ಜಿ-23 ಸದಸ್ಯರು ಒತ್ತಾಯಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ರಚನೆ, ಇತ್ತೀಚಿನ ಚುನಾವಣಾ ಸೋಲಿನ ಹೊಣೆಗಾರಿಕೆ ಮತ್ತು ಸಾಂಸ್ಥಿಕ ಚುನಾವಣೆಗಳನ್ನು ಪೂರ್ಣಗೊಳಿಸುವುದರ ಬಗ್ಗೆ ಚರ್ಚೆ ನಡೆಸಬೇಕಿದೆ.
ಇದರ ಮಧ್ಯೆ ಕಾಂಗ್ರೆಸ್ ಸಂಸದ ಕಪಿಲ್ ಸಿಬಲ್ ಮತ್ತು ಮನೀಶ್ ತಿವಾರಿ ಶುಕ್ರವಾರ ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಸಭೆ ನಡೆಸಿದರು. ಮೂಲಗಳ ಪ್ರಕಾರ, ಅವರು ಪಕ್ಷದ ಕಳಪೆ ಪ್ರದರ್ಶನ ಮತ್ತು ಭವಿಷ್ಯದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು.
ಪಂಜಾಬ್ ನೆಲದಲ್ಲೂ ಕುರ್ಚಿ ಕಳೆದುಕೊಂಡ ಕಾಂಗ್ರೆಸ್:
ಫೆಬ್ರವರಿ ತಿಂಗಳಿನಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪೈಕಿ ಪಂಜಾಬ್ ರಾಜ್ಯವೊಂದರಲ್ಲಿ ಈ ಮೊದಲೇ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ ಈಗ ಕೈಯಲ್ಲಿದ್ದ ರಾಜ್ಯವನ್ನೂ ಕಳೆದುಕೊಳ್ಳುವ ಮೂಲಕ ಕಾಂಗ್ರೆಸ್ ಖಾಲಿ ಕೈ ಆಗಿದೆ. ಪಂಜಾಬ್ ಕಾಂಗ್ರೆಸ್ಸಿನಲ್ಲಿ ಆಗಿರುವ ಆಂತರಿಕ ಕಿತ್ತಾಟ ಹಾಗೂ ತಾವೇ ಮಾಡಿಕೊಂಡ ಎಡವಟ್ಟುಗಳಿಂದ ಪಕ್ಷಕ್ಕೆ ಇಂದು ಇಂಥ ಸ್ಥಿತಿ ಎದುರಾಗಿದೆ. ಇಂಥ ತಪ್ಪುಗಳನ್ನು ಗುರುತಿಸುವ ಹಾಗೂ ಭವಿಷ್ಯದಲ್ಲಿ ಪಕ್ಷವನ್ನು ಮುನ್ನಡೆಸುವ ನಿಟ್ಟಿನಲ್ಲಿ ಸೂಕ್ತ ಅಧ್ಯಕ್ಷರನ್ನು ಕೂಡಲೇ ನೇಮಿಸುವುದಕ್ಕೆ ಜಿ-23 ಸದಸ್ಯರು ಈಗ ಒತ್ತಾಯಿಸುತ್ತಿದ್ದಾರೆ.












Click it and Unblock the Notifications