ಹರಿಯಾಣ ಕೋಮು ಘರ್ಷಣೆ: ಗುರುಗ್ರಾಮ್ ಪ್ರದೇಶಗಳಿಗೆ ಹರಡಿದ ಹಿಂಸಾಚಾರ, ದೆಹಲಿಯಲ್ಲಿ ಹೈ ಅಲರ್ಟ್!
ನವದೆಹಲಿ, ಆಗಸ್ಟ್. 02: ಹರಿಯಾಣದ ನುಹ್‌ನಲ್ಲಿ ಸೋಮವಾರ ನಡೆದ ಕೋಮು ಘರ್ಷಣೆಯ ಪ್ರಭಾವ ರಾಷ್ಟ್ರ ರಾಜಧಾನಿ ನವದೆಹಲಿಯಿಂದ 20 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಗುರುಗ್ರಾಮ್‌ನ ಸೆಕ್ಟರ್ 70 ಅನ್ನು ತಲುಪಿದೆ. ಮಂಗಳವಾರ ರಾತ್ರಿ ವಸತಿ ಸಮುಚ್ಚಯದ ಪಕ್ಕದಲ್ಲಿರುವ ಹಲವಾರು ಅಂಗಡಿಗಳು ಮತ್ತು ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದೆ.
ಹೀಗಾಗಿ ಹರಿಯಾನದ ಕಿಚ್ಚು ರಾಜಧಾನಿಯನ್ನು ಸುಡಬಾರದು ಎಂದು ದೆಹಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿವೆ. ದೆಹಲಿ ಸಂಪೂರ್ಣ ಹೈ ಅಲರ್ಟ್ ಮೂಡ್‌ನಲ್ಲಿದೆ. ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನು ಬಳಸಲು ಪೊಲೀಸರು ಚಿಂತಿಸುತ್ತಿದ್ದು, ಯಾವುದೇ ಕಾರಣಕ್ಕೂ ಹೀಮಸಾಚಾರಕ್ಕೆ ಅನುವು ಮಾಡಿಕೊಡಬಾರದು ಎಂಬ ನಿಶ್ಚಯದಲ್ಲಿದ್ದಾರೆ.

ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್‌ಗಳ ಬಳಕೆ, ಹೆಚ್ಚಿನ ಗಸ್ತು ಮತ್ತು ಪೊಲೀಸರು ಕಣ್ಗಾವಲು ಇಡುವ ಮೂಲಕ ದೆಹಲಿಯು ಎಚ್ಚರಿಕೆಯಲ್ಲಿದೆ. ಕೇವಲ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ನೆರೆಯ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇದರ ಪರಿಣಾಮವಾಗಿ ರಾಷ್ಟ್ರ ರಾಜಧಾನಿಯಲ್ಲಿ ಉದ್ಭವಿಸುವ ಯಾವುದೇ ಪರಿಸ್ಥಿತಿಯನ್ನು ಶಮನಗೊಳಿಸಲು ಪೊಲೀಸ್ ಪಡೆ ಸನ್ನದ್ಧವಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ನಡೆದ ಹಿಂಸಾಚಾರದ ವಿರಳ ಘಟನೆಗಳ ನಂತರ ಗುರುಗ್ರಾಮ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಬೆಂಕಿ ಹಚ್ಚುವ ಘಟನೆಗಳನ್ನು ತಡೆಗಟ್ಟಲು ಚಿಲ್ಲರೆ ಪೆಟ್ರೋಲ್ ಅಥವಾ ಡೀಸೆಲ್ ಮಾರಾಟವನ್ನು ಸಹ ನಿಷೇಧಿಸಲಾಗಿದೆ. ನಗರದಲ್ಲಿ ಹಿಂಸಾಚಾರದ ಕುರಿತು ಗುರುಗ್ರಾಮ್ ಪೊಲೀಸರು ಪರಿಶೀಲನೆಗಳ ಮೂಲಕ ಎಚ್ಚರಿಕೆ ವಹಿಸುತ್ತಿದ್ದಾರೆ.
ವದಂತಿಗಳನ್ನು ನಂಬಬೇಡಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ವರದಿಗಳ ಮೇಲೆ ವಿಶ್ವಾಸವಿಡಬೇಡಿ ಎಂದು ಪೊಲೀಸರು ನಾಗರಿಕರಿಗೆ ಮನವಿ ಮಾಡಿದ್ದಾರೆ. "ಇಂದು ಶಾಲೆಗಳು, ಕಾಲೇಜುಗಳು, ಕೆಲಸದ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸಂದೇಶಗಳು ಸುಳ್ಳು. ಎಲ್ಲಾ ವಾಹನ ಸಂಚಾರ, ಶಾಲಾ ಕಾಲೇಜುಗಳು ಎಂದಿನಂತೆ ನಡೆಯುತ್ತದೆ, ಯಾವುದೇ ನಿರ್ಬಂಧಗಳಿಲ್ಲ" ಎಂದು ಗುರಗಾಂವ್ ಸಹಾಯಕ ಪೊಲೀಸ್ ಆಯುಕ್ತ ವರುಣ್ ಕುಮಾರ್ ದಹಿಯಾ ಹೇಳಿದ್ದಾರೆ.

ಅಮೇರಿಕನ್ ಎಕ್ಸ್‌ಪ್ರೆಸ್ ಮತ್ತು ಕೆಪಿಎಂಜಿಯಂತಹ ಕೆಲವು ಬಹು-ರಾಷ್ಟ್ರೀಯ ಸಂಸ್ಥೆಗಳು ಇಂದು ಮನೆಯಿಂದಲೇ ಕೆಲಸ ಮಾಡಲು ಉದ್ಯೋಗಿಗಳಿಗೆ ಸಲಹೆ ನೀಡಿವೆ. ದೆಹಲಿಯಿಂದ ಕೇವಲ 50 ಕಿಮೀ ದೂರದಲ್ಲಿರುವ ನುಹ್‌ನಲ್ಲಿ ಸೋಮವಾರ ನಡೆದ ಧಾರ್ಮಿಕ ಮೆರವಣಿಗೆಯಲ್ಲಿ ಹಿಂಸಾಚಾರ ಸಂಭವಿಸಿದೆ. ಆಕ್ಷೇಪಾರ್ಹ ವಿಡಿಯೋ ವೈರಲ್ ಆಗಿದೆ ಎಂದು ಹಲವರು ಹೇಳಿದ್ದಾರೆ. ಗುಂಪೊಂದು ನಡೆಯುತ್ತಿದ್ದ ಮೆರವಣಿಗೆಯ ಮೇಲೆ ಕಲ್ಲುಗಳಿಂದ ದಾಳಿ ಮಾಡುತ್ತಿದ್ದಂತೆ, 2,500 ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆಯಲು ದೇವಸ್ಥಾನಕ್ಕೆ ನುಗ್ಗಿದ್ದರು.
ನುಹ್ ಮತ್ತು ನೆರೆಯ ಗುರುಗ್ರಾಮ್‌ನಲ್ಲಿ ಸಂಜೆಯಾಗುತ್ತಿದ್ದಂತೆ ಹಿಂಸಾಚಾರವು ಉಲ್ಬಣಗೊಂಡು, ಮಧ್ಯರಾತ್ರಿಯ ನಂತರ ಮಸೀದಿಗೆ ಬೆಂಕಿ ಹಚ್ಚಲಾಯಿತು, ನೂರಕ್ಕೂ ಹೆಚ್ಚು ವಾಹನಗಳನ್ನು ಸುಟ್ಟುಹಾಕಲಾಯಿತು. ಹಲವು ವಾಹನಗಳನ್ನು ಧ್ವಂಸಗೊಳಿಸಲಾಯಿತು. ಹಿಂಸಾಚಾರದಲ್ಲಿ ಆರು ಸಾವುಗಳು ದೃಢಪಟ್ಟಿವೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 116 ಜನರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದು, ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು ಜನರಿಗೆ ಮನವಿ ಮಾಡಿದ್ದಾರೆ.
ಹರಿಯಾಣದ ಹಲವು ಜಿಲ್ಲೆಗಳಲ್ಲಿ ಘರ್ಷಣೆಗಳು ವರದಿಯಾಗಿವೆ. ನೂಹ್‌ನಿಂದ 50 ಕಿಮೀ ದೂರದಲ್ಲಿರುವ ಬಾದ್‌ಶಾಹ್‌ಪುರದಲ್ಲಿ ಗಲಭೆ ನಡೆದಿದೆ. ಸುಮಾರು 200 ಜನರ ಗುಂಪು ಮಧ್ಯಾಹ್ನ 3 ಗಂಟೆ ಸುಮಾರಿಗೆ ದೊಣ್ಣೆ ಮತ್ತು ಕಲ್ಲುಗಳಿಂದ ಶಸ್ತ್ರಸಜ್ಜಿತ ಪ್ರದೇಶಕ್ಕೆ ಪ್ರವೇಶಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಾಂಸದ ಅಂಗಡಿಗಳು ಸೇರಿದಂತೆ ಹಲವಾರು ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ. ಗುರುಗ್ರಾಮ್‌ನ ಗಡಿಯಲ್ಲಿರುವ ಸೊಹ್ನಾದಲ್ಲಿನ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ನೀಡಲಾಗಿದೆ.












Click it and Unblock the Notifications